ಕೋವಿಡ್ ತ‌ನಿಖೆಗೆ ಎಸ್​ಐಟಿ ರಚನೆಯ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ : ಬಿ.ಎಸ್.ಯಡಿಯೂರಪ್ಪ

Update: 2024-11-16 13:36 GMT

ಯಡಿಯೂರಪ್ಪ(PTI)

ಶಿವಮೊಗ್ಗ : "ಕೋವಿಡ್ ಉಪಕರಣ ಖರೀದಿ ಸಂಬಂಧ​ ತ‌ನಿಖೆಗೆ ರಾಜ್ಯ ಸರಕಾರ ಎಸ್​ಐಟಿ ರಚನೆ ಮಾಡಿರುವ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ. ಅದು ದುರುದ್ದೇಶದಿಂದ ಕೂಡಿದ ಆರೋಪವಾಗಿದೆ. ಕಾನೂನು ಚೌಕಟ್ಟಿನಲ್ಲಿ ಅದನ್ನು ಎದುರಿಸುತ್ತೇವೆ" ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕೋವಿಡ್ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿ ಸಿಲುಕಿ‌ಕೊಂಡಿದ್ದರು. ಬದುಕಿ ಉಳಿಯುವುದೇ ಕಷ್ಟ ಎನ್ನುವ ಸಂದರ್ಭ ಬಂದಾಗ ಯಾವುದೇ ಔಷಧ ಸಿಗುವ ಸಾಧ್ಯತೆಯೇ ಇರಲಿಲ್ಲ. ಹೊರಗಿನಿಂದ ಔಷಧ ತಂದು ಜನರ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಷ್ಟು ವರ್ಷದ ನಂತರ ಇದು ಒಂದು‌ ಹಗರಣ ಎಂದು ಗೊಂದಲವನ್ನುಂಟು ಮಾಡುವ ಪ್ರಯತ್ನವನ್ನು ರಾಜ್ಯದ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುವಂತಹ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ನಾವು ನಮ್ಮ ಕೆಲಸ ಮಾಡಿದ್ದೇವೆ. ಜನ ಮೆಚ್ಚುವಂತಹ ಕೆಲಸ ಮಾಡಿದ್ದೇವೆʼ ಎಂದು ಹೇಳಿದರು.

ವಕ್ಫ್ ಸಮಿತಿ ರಚನೆ ಕುರಿತು ಮಾತನಾಡಿದ ಅವರು, ʼಈಗಾಗಲೇ ವಿಜಯೇಂದ್ರ ವಕ್ಫ್ ಸಮಿತಿಗೆ ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಸಮಿತಿಯವರು ಪ್ರವಾಸ ಮುಗಿಸಿಕೊಂಡು ಬಂದು ವರದಿಯನ್ನು ನೀಡಲಿದ್ದಾರೆʼ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News