ಭದ್ರಾವತಿ | ರೈಸ್‌ಮಿಲ್‌ನಲ್ಲಿ ಬಾಯ್ಲರ್ ಸ್ಫೋಟ : ಹಲವರಿಗೆ ಗಾಯ
ಶಿವಮೊಗ್ಗ: ರೈಸ್‌ಮಿಲ್‌ನಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ, 7ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿ ನಡೆದಿದೆ.
ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಫೋಟದ ವೇಳೆ 20ಕ್ಕೂ ಅಧಿಕ ಮಂದಿ ಅಕ್ಕಿ ಲೋಡ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ರೈಸ್ ಮಿಲ್ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು, ಕಬ್ಬಿಣದ ಶೀಟುಗಳು ಹಾರಿಹೋಗಿವೆ. ಘಟನಾ ಸ್ಥಳದಲ್ಲಿ ಒಟ್ಟು ಏಳು ಮಂದಿ ಪತ್ತೆಯಾಗಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಉಳಿದ ಜನರಿಗೆ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸರು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದೆ. 7 ಮಂದಿ ಗಾಯಗೊಂಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಘು ಎಂಬಾತ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ಸಿಬ್ಬಂದಿ, ಆಂಬುಲೆನ್ಸ್, ಮೆಸ್ಕಾಂ, ನಗರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
-ಮಿಥುನ್ ಕುಮಾರ್ ಜಿ.ಕೆ, ಎಸ್ಪಿ