ವಿಜಯೇಂದ್ರ ವಿರುದ್ಧ 150 ಕೋಟಿ ರೂ. ಆಮಿಷ ಆರೋಪ ; ಸಿಬಿಐಗೆ ವಹಿಸಲು ಕೆ.ಎಸ್.ಈಶ್ವರಪ್ಪ ಆಗ್ರಹ

Update: 2024-12-18 06:55 GMT

 ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ವಕ್ಸ್ ಆಸ್ತಿ ಕಬಳಿಕೆ ಸಂಬಂಧ ಅನ್ವರ್ ಮಾಣಿಪ್ಪಾಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾಡಿದ್ದಾರೆ ಎನ್ನಲಾದ 150 ಕೋಟಿ ರೂ. ಆಮಿಷದ ಆರೋಪ ನಿಜವಾಗಿದ್ದರೆ ರಾಜ್ಯ ಸರಕಾರ ಆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಸ್‌ ಆಸ್ತಿ ಕಬಳಿಕೆ ವರದಿಯನ್ನು ಬಹಿರಂಗಪಡಿಸದಂತೆ ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಜಯೇಂದ್ರ ಅವರು 150 ಕೋಟಿ ರೂ. ಆಫರ್ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿ ತನಿಖೆ ಸಿಬಿಐಗೆ ವಹಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸಿಬಿಐಗೆ ವಹಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ. ಮೊದಲು ಸರಕಾರ ತನ್ನ ಕೆಲಸ ಮಾಡಲಿ ಎಂದು ಹೇಳಿದರು.

ಅನ್ವ‌ರ್ ಮಾಣಿಪ್ಪಾಡಿ ಅವರು ಪ್ರತೀ ಬಾರಿ ಒಂದೊಂದು ಹೇಳಿಕೆಯನ್ನು ಕೊಡುತ್ತಿದ್ದಾರೆ. ಕೆಲವೊಮ್ಮೆ ಬಿ.ವೈ.ವಿಜಯೇಂದ್ರ ತನಗೆ 150 ಕೋಟಿ ರೂ. ಆಫರ್ ಮಾಡಿಲ್ಲ ಎಂದು ಹೇಳಿದರೆ, ಕೆಲವೊಮ್ಮೆ ಆಫರ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಇದು ಬಹಳ ಗಂಭೀರ ವಿಷಯ. ಇದರಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದರು.

ರಾಜ್ಯದಲ್ಲಿ ವಕ್ಸ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ವಕ್ಸ್ ಆಸ್ತಿ ಲೂಟಿ ಮಾಡಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ. ಶಂಕರ್, ಇ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಗಣೇಶ್, ಸಂತೋಷ್, ಶ್ರೀಕಾಂತ್, ಪ್ರದೀಪ್, ಕುಬೇರಪ್ಪ, ಪ್ರಕಾಶ್, ಶಿವ ಕುಮಾರ್, ಜಾಧವ್ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News