ಶಿವಮೊಗ್ಗ | ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತ್ಯು
Update: 2024-12-18 09:59 GMT
ಶಿವಮೊಗ್ಗ : ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಕುಸಿದು ಬಿದ್ದು, ಸಾವನ್ನಪ್ಪಿರುವ ಘಟನೆ ಬುಧವಾರ ಶಿವಮೊಗ್ಗದಲ್ಲಿ ನಡೆದಿದೆ.
ಮುಬಶ್ಶಿರಾ ಬಾನು (17) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ನಂಜಪ್ಪ ಲೇಔಟ್ ಬಳಿ ಇರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯು ಪ್ರಜ್ಞೆ ತಪ್ಪಿ ಹಿಮ್ಮುಖವಾಗಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಓದಿದ್ದ ಪ್ರೌಢಶಾಲೆಯ ಶಿಕ್ಷಕರು ಪಿಯು ಕಾಲೇಜಿಗೆ ಆಗಮಿಸಿದ್ದರು. ಈ ವಿಷಯ ತಿಳಿದು ಅವರನ್ನು ಮಾತನಾಡಿಸಲು ವಿದ್ಯಾರ್ಥಿನಿ ತನ್ನ ಸಹಪಾಠಿಗಳ ಜೊತೆಗೆ ಪ್ರಾಂಶುಪಾಲರ ಕೊಠಡಿಯತ್ತ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ. ಈ ವೇಳೆ ಉಪನ್ಯಾಸಕರು, ಸಹಪಾಠಿಗಳು ಆಕೆಯ ನೆರವಿಗೆ ಧಾವಿಸಿದ್ದಾರೆ. ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.