ಬಿ.ವೈ. ರಾಘವೇಂದ್ರ ರಾಜ್ಯ ಸರ್ಕಾರ ಮಾಡಿದ ಕೆಲಸದ ಲಾಭ ಪಡೆಯಲು ಹವಣಿಸುತ್ತಿದ್ದಾರೆ: ಸಚಿವ ಮಧುಬಂಗಾರಪ್ಪ

Update: 2024-12-21 14:59 GMT

ಸಚಿವ ಮಧುಬಂಗಾರಪ್ಪ

ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ವಿಚಾರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಈಗ ಯಾಕೆ ಚುರುಕಾಗಿದ್ದಾರೊ ಗೊತ್ತಿಲ್ಲ ಅವರದೇ ಸರ್ಕಾರ ಇದ್ದಾಗಲೂ ನ್ಯಾಯ ಕೊಡಿಸದ ಅವರು, ರಾಜ್ಯ ಸರ್ಕಾರ ಮಾಡಿದ ಕೆಲಸದ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ್ರ ನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ಅವಧಿಯಲ್ಲಿ ಮಾತಿನಂತೆ ನಡೆದು ಶರಾವತಿ ಸಂತ್ರಸ್ತರ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಸಮರ್ಥ ವಾದ ಮಾಡದ ಕಾರಣ ನ್ಯಾಯಾಲಯದಲ್ಲಿ ಹಿನ್ನಡೆಯಾ ಯಿತು. ಅಂದು ಸಂಸದರಾಗಿದ್ದ ರಾಘವೇಂದ್ರ ಕೇಂದ್ರ ಸರ್ಕಾರ ಮತ್ತು ತಮ್ಮದೇ ಪಕ್ಷದ ರಾಜ್ಯ ಸರ್ಕಾರದೊಂದಿಗೆ ಮಾತನಾಡಿಲ್ಲ. ಸಂತ್ರಸ್ತರ ಭೂಮಿ ರದ್ದಾದ ಬಳಿಕ ನಮ್ಮ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಅದು ವಿಚಾರಣೆಗೂ ಬಂದಿದೆ. ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ. ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡದ ಬಿ.ವೈ.ರಾಘವೇಂದ್ರ ಅವರು ಈಗ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ದೂರಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ನ್ಯಾಯಾ ಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಈ ಬಗ್ಗೆ ಅವರು ಗಮನ ಹರಿಸಬೇಕು. ನಮ್ಮ ಸರ್ಕಾರ ಬಂದ ಮೇಲೆ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಸಭೆ ನಡೆಸಿದ್ದೇವೆ. ವಕೀಲರನ್ನಿಟ್ಟು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡನೆ ಮಾಡಲಾಗಿದೆ. ಸಂಸದರು ಈಗ ಫೋಸ್ ಕೊಡುವುದನ್ನು ಬಿಟ್ಟು, ಕೆಲಸ ಆಗುವ ನಿಟ್ಟಿನಲ್ಲಿ ಸಹಕರಿಸಲಿ ಎಂದು ಸಚಿವರು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಕಲಗೋಡು ರತ್ನಾಕ‌ರ್, ಜಿ.ಡಿ.ಮಂಜುನಾಥ್, ಗಣಪತಿ ಹುಲ್ತಿಕೊಪ್ಪ, ಶಿಕಾರಿಪುರದ ನಾಗರಾಜ ಗೌಡ,ಆದರ್ಶ ಹುಂಚದಕಟ್ಟೆ ಮತ್ತಿತರರಿದ್ದರು.

ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೂ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ. ಚುನಾವಣೆ ಸಂದರ್ಭ ಅಮಿತ್ ಶಾ ಅವರನ್ನು ಕರೆತಂದು ಇವರು ಮತ ಪಡೆದರು. ಆದರೆ ನಾಲ್ಕು ಬಾರಿ ಸಂಸದರಾದರೂ, ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶವನ್ನು ತೆಗೆಸಲು ಇವರಿಗೆ ಸಾಧ್ಯವಾಗಿಲ್ಲ. ಅಡಕೆ ಅಡಕೆ ಆರೋಗ್ಯಕ್ಕೆ : ಹಾನಿಕಾರಕ ಅಂಶವನ್ನು ಕೈಬಿಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ರಾಘವೇಂದ್ರ ಅವರು ಕೇಂದ್ರದ ಸಚಿವರೊಂದಿಗೆ ಫೋಟೋ ತೆಗೆಸಿಕೊಂಡರೆ ಸಾಲದು. ಮಲೆನಾಡಿನ ಸಮಸ್ಯೆಗಳ ಇತ್ಯರ್ಥಕ್ಕೆ ಕೆಲಸ ಮಾಡಬೇಕು ಎಂದು ಮಧುಬಂಗಾರಪ್ಪ ಹೇಳಿದರು.

ಗಮನ ಬೇರೆಡೆ ಸೆಳೆಯಲು ಯತ್ನ:

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅಪಮಾನದಿಂದ ರಾಜ್ಯದ ಜನರ ಗಮನ ಬೇರೆಡೆಗೆ ಸೆಳೆಯಲು ಸಿ.ಟಿ.ರವಿ ಪ್ರಕರಣವನ್ನು ಬಿಜೆಪಿ ಸೃಷ್ಟಿಸಿದೆ. ಬಿಜೆಪಿ ಅಂದರೆ ಬ್ರಿಟಿಷ್ ಜನತಾ ಪಾರ್ಟಿ. ಅಮಿತ್ ಶಾ ಒಬ್ಬ ಕ್ರಿಮಿನಲ್‌ ಎಂದು ಕಿಡಿಕಾರಿದ ಮಧುಬಂಗಾರಪ್ಪ ಅವರು, ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ನಮ್ಮ ಕಣ್ಣಿಗೆ ಕಂಡಿರುವ, ಈ ನೆಲದಲ್ಲಿ ಬದುಕಿರುವ ಕೋಟ್ಯಂತರ ಶೋಷಿತರಿಗೂ ಘನತೆಯ ಬದುಕು ಕಲ್ಪಿಸಿದ ಅಂಬೇಡ್ಕರ್ ಅವರನ್ನೇ ನಾವು ದೇವರೆಂದು ಆರಾಧಿಸುತ್ತೇವೆ' ಆದರೆ ಅಮಿತ್ ಅಂತಹವರಿಗೇ ಅವಮಾನ ಮಾಡಿದ್ದಾರೆ. ಅಂಬೇಡ್ಕರ್ ಅವಹೇಳನ ಪ್ರಕರಣ ಮುನ್ನೆಲೆಗೆ ಬರಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಸಿ.ಟಿ.ರವಿ ಬಿಜೆಪಿಯ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವರು ಆರೋಪಿಸಿದರು.

ವಿಧಾನಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕ‌ರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣದಲ್ಲಿ ಸಿ.ಟಿ.ರವಿ ಅವರನ್ನು ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಬಂಧಿಸಲಾಗಿದೆ. ಕಾನೂನು ಅಡಿಯಲ್ಲಿ ಅವರಿಗೆ ಗರಿಷ್ಠ ಶಿಕ್ಷೆ ಕೊಡಿಸಲು ಸರ್ಕಾರ ಬದ್ಧವಾಗಿದೆ. 'ಈಗ ತಲೆಗೆ ಪಟ್ಟಿ ಕಟ್ಟಿಕೊಂಡು, ರಸ್ತೆಯಲ್ಲಿ ಕುಳಿತು ನಾಟಕ ಮಾಡಿದರೆ ರಾಜ್ಯದ ಜನರು ಒಪ್ಪುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News