ಸಾಗರ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ಪೊಕ್ಸೊ, ಅಟ್ರಾಸಿಟಿ ಪ್ರಕರಣ ದಾಖಲು
ಸಾಗರ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ವರದಹಳ್ಳಿ ರಸ್ತೆಯ ವನಶ್ರೀ ವಸತಿ ಶಾಲೆಯ ಮುಖ್ಯಸ್ಥ ಮಂಜಪ್ಪ ವಿರುದ್ಧ ಮತ್ತೊಂದು ಪೊಕ್ಸೊ ಕಾಯ್ದೆಯ ಜತೆಗೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಪೊಕ್ಸೊ ಜತೆಗೆ ಅಟ್ರಾಸಿಟಿ ಪ್ರಕರಣವನ್ನೂ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಿಸಲಾಗಿದೆ.
ವನಶ್ರೀ ವಸತಿ ಶಾಲೆಯ ಮುಖ್ಯಸ್ಥ ಮಂಜಪ್ಪ ಕಳೆದ ನಾಲ್ಕು ತಿಂಗಳಿಂದ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿನಿ ಪೋಷಕರೊಂದಿಗೆ ಸಾಗರ ಗ್ರಾಮಾಂತರ ಠಾಣೆಗೆ ಬುಧವಾರ ಭೇಟಿ ನೀಡಿ ದೂರು ದಾಖಲಿಸಿದ್ದಾಳೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯ್ಕ್ ಅಧಿಕಾರಿ, ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಮಂಜಪ್ಪ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
2023ರ ಜೂ.8ರಂದು 13 ವರ್ಷದ ಬಾಲಕಿಯೋರ್ವಳು ಇದೇ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಈ ಸಾವಿಗೆ ಶಾಲೆಯ ಮುಖ್ಯಸ್ಥ ಮಂಜಪ್ಪ ಕಾರಣ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಇದರೊಂದಿಗೆ 14 ವರ್ಷ ವಯಸ್ಸಿನ ಮತ್ತೋರ್ವ ಬಾಲಕಿಗೂ ಶಾಲೆಯ ಮುಖ್ಯಸ್ಥರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಈ ಎರಡೂ ಪ್ರಕರಣದಲ್ಲಿ ಆರೋಪಿ ಮಂಜಪ್ಪ ಜೈಲು ಪಾಲಾಗಿದ್ದರು.