ಶಿವಮೊಗ್ಗ | ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ

ಶಿವಮೊಗ್ಗ: ನಗರದ ವಿಮಾನ ನಿಲ್ದಾಣ ಸಮೀಪದ ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಹಾಡಹಗಲೇ ಗನ್ ಹಿಡಿದು ಓಡಾಡಿ ಭಯ ಹುಟ್ಟಿಸಿರುವ ಘಟನೆ ನಡೆದಿದೆ.
ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಚಿನ ಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಗನ್ ಹಿಡಿದು ಅಲ್ಲಿನ ಹೋಟೆಲ್ ಒಂದಕ್ಕೆ ಬಂದಿದ್ದಾನೆ. ಹೊಟೇಲ್‌ನ ಖುರ್ಚಿಯಲ್ಲಿ ಕುಳಿತು ಟೇಬಲ್ ಮೇಲೆ ಗನ್ ಇಟ್ಟಿದ್ದಾನೆ. ಎದುರಿಗೆ ಪುಟ್ಟ ಮಗುವಿನ ಜೊತೆ ಬಂದಿದ್ದ ವ್ಯಕ್ತಿಗೆ ಗನ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತುಂಗಾನಗರ ಠಾಣಾ ವ್ಯಾಪ್ತಿಯ ಕಾಚಿನಕಟ್ಟೆ ಭಾಗದಲ್ಲಿ ಆತನ ವರ್ತನೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಆತ ಸಾರ್ವಜನಿಕವಾಗಿಯೇ ಗನ್ ಹಿಡಿದು ಮನೆಯಿಂದ ಹೊರಬರುತ್ತಿದ್ದು, ರಸ್ತೆ, ಹೋಟೆಲ್ ಮತ್ತಿತರರ ಸ್ಥಳಗಳಲ್ಲಿ ಓಡಾಡುತ್ತಾ ಗನ್ ತೋರಿಸುತ್ತಾರೆಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ.
ಸದಾ ಗನ್ ಹಿಡಿದುಕೊಂಡೇ ಓಡಾಡುವ ಕಾರಣ ಆತನ ಜೊತೆ ಮಾತನಾಡುವುದಕ್ಕೂ ಜನರು ಹೆದರುತ್ತಿದ್ದಾರೆ. ಪೊಲೀಸರು ಆತನನ್ನು ಕರೆದು ವಿಚಾರಣೆ ನಡೆಸಿ ಗನ್‌ಗೆ ಪರವಾನಿಗೆ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.