ಭದ್ರಾವತಿ | ನಿಧಿ ಆಸೆ ತೋರಿಸಿ ನಕಲಿ ಚಿನ್ನದ ನಾಣ್ಯ ನೀಡಿ ವ್ಯಕ್ತಿಗೆ 7 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ | PTI
ಶಿವಮೊಗ್ಗ: ನಕಲಿ ಚಿನ್ನದ ನಾಣ್ಯವನ್ನು ನೀಡಿ ಹಾಸನದ ವ್ಯಕ್ತಿಗೆ 7 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ನಡೆದಿದೆ.
ಹಾಸನ ಡೈರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಗಿರಿಗೌಡ ಹಣ ಕಳೆದುಕೊಂಡ ವ್ಯಕ್ತಿ. ಗಿರಿಗೌಡ ಅವರಿಗೆ ಮಾದೇಶ್ವರ ಬೆಟ್ಟದ ನಿವಾಸಿ ಎಂದು ಸುರೇಶ್ ಎಂಬಾತ ದೂರವಾಣಿ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದ. ತನ್ನ ಊರಿನ ಹಿರಿಯ ವ್ಯಕ್ತಿಗೆ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಚಿನ್ನದ ನಾಣ್ಯಗಳು ದೊರೆತಿದೆ. ಅವರ ಮಗಳ ಮದುವೆಗೆ ಹಣಬೇಕಿದ್ದು, ಕಡಿಮೆ ದರದಲ್ಲಿ ಕೊಡಿಸುತ್ತೇನೆ ಖರೀದಿಸಿ ಎಂದು ತಿಳಿಸಿದ್ದನು ಎನ್ನಲಾಗಿದೆ.
ಇದಕ್ಕೆ ಉತ್ತರಿಸಿದ ಗಿರಿಗೌಡ ಅವರು ಜಮೀನಿನಲ್ಲಿ ದೊರೆತ ಚಿನ್ನದ ನಾಣ್ಯವನ್ನು ಸರಕಾರಕ್ಕೆ ಹಿಂದಿರುಗಿಸಿ ಎಂದು ಸಲಹೆ ನೀಡಿ ಕರೆ ಸ್ಥಗಿತಗೊಳಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಸುರೇಶ್ ಮತ್ತೆ ಗಿರಿಗೌಡಗೆ ಕರೆ ಮಾಡಿ, ಮಾ.05ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೋಟೆ ಗ್ರಾಮದ ಸೇತುವೆ ಬಳಿ ಕರೆಯಿಸಿಕೊಂಡು ಒಂದು ಅಸಲಿ ಚಿನ್ನದ ನಾಣ್ಯ ನೀಡಿ, ಇದು ಅಸಲಿ ಚಿನ್ನವೆಂದು ಗೊತ್ತಾದ ಮೇಲೆ ವ್ಯವಹಾರ ಮಾಡೋಣ ಎಂದು ನಾಣ್ಯವನ್ನು ಕೊಟ್ಟು ಸುರೇಶ್ ಕಳುಹಿಸಿದ್ದನು.
ಊರಿಗೆ ಬಂದ ಗಿರಿಗೌಡ ಅದನ್ನು ಪರೀಕ್ಷಿಸಿ ಚಿನ್ನದ ನಾಣ್ಯ ಸರಿಯಿದೆ ಎಂದು ಹೇಳಿದಾಗ ನಾಣ್ಯದ ದರವನ್ನು ಇಬ್ಬರೂ ಮಾತನಾಡಿಕೊಂಡು 7 ಲಕ್ಷಕ್ಕೆ ವ್ಯವಹಾರವನ್ನು ನಡೆಸಿದ್ದರು. ಮಂಗೋಟೆಯ ಸೇತುವೆ ಬಳಿ ಬಂದು ನಾಣ್ಯಗಳನ್ನು ಸಂಗ್ರಹಿಸಲು ಸುರೇಶ್ ತಿಳಿಸಿದ್ದನು. ಸೇತುವೆ ಬಳಿ ಬಂದು ನಕಲಿ ಚಿನ್ನದ ನಾಣ್ಯಕ್ಕೆ 7 ಲಕ್ಷ ಕೊಟ್ಟು ಖರೀದಿಸಿಕೊಂಡು ಊರಿಗೆ ಬಂದ ಗಿರಿಗೌಡರು ಪರೀಕ್ಷಿಸಿದಾಗ ಇದು ನಕಲಿ ಎಂದು ತಿಳಿದು ಬಂದಿದೆ.
ಈ ಸಂಬಂಧ ಇದೀಗ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.