ಕರ್ತವ್ಯ ಲೋಪ ಆರೋಪ: ವಿನೋಬನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮಾನತು
Update: 2025-04-05 23:24 IST

ಶಿವಮೊಗ್ಗ : ಕರ್ತವ್ಯ ಲೋಪದ ಆರೋಪದ ಮೇಲೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ.
ಕರ್ತವ್ಯಲೋಪದ ಆರೋಪದ ಮೇರೆಗೆ ಚಂದ್ರಕಲಾ ಅವರನ್ನು ಅಮಾನತುಗೊಳಿಸಲಾಗಿದೆ. ಎರಡು ದಿನಗಳ ಹಿಂದೆಯೇ ಅಮಾನತು ಆದೇಶ ಹೊರಬಿದ್ದಿದೆ ಎಂದು ಹೇಳಲಾಗಿದೆ.
ಈದ್ಗಾ ಮೈದಾನ ವಿವಾದದ ನಂತರ ಎಸ್ಪಿ ಮಿಥುನ್‌ಕುಮಾರ್ ಅವರು ಎಲ್ಲ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಗಳ ಸಭೆ ನಡೆಸಿದ್ದರು. ಸದರಿ ಸಭೆಗೆ ಸಕಾರಣವಿಲ್ಲದೆ ಚಂದ್ರಕಲಾ ಅವರು ಗೈರು ಹಾಜರಾಗಿದ್ದರು ಎನ್ನಲಾಗಿದೆ.
ಅವರ ಕರ್ತವ್ಯ ನಿರ್ವಹಣೆ ಕುರಿತಂತೆ ಕೆಲ ದೂರುಗಳು ಕೇಳಿಬಂದಿದ್ದವು. ಈ ಕುರಿತಂತೆ ಚಂದ್ರಕಲಾರವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪೂರ್ವ ವಲಯ ಐಜಿಪಿಗೆ, ಎಸ್ಪಿ ವರದಿ ಕಳುಹಿಸಿದ್ದರು. ಇದರ ಆಧಾರದ ಮೇಲೆ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ