ವಿರೋಧ ಪಕ್ಷಗಳಿಂದ ಪ್ರಧಾನಿ ಹುದ್ದೆ ʼಆಫರ್ʼ ಗೆ ನಿತಿನ್ ಗಡ್ಕರಿ ಹೇಳಿದ್ದೇನು?
ಹೊಸದಿಲ್ಲಿ: ವಿರೋಧ ಪಕ್ಷವೊಂದು ತನಗೆ ಪ್ರಧಾನಿ ಹುದ್ದೆಯ ಆಹ್ವಾನ ನೀಡಿತ್ತು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನನಗೆ ಅಂತಹ ಮಹತ್ವಾಕಾಂಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಟುಡೇ ಎನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, "ವಿರೋಧ ಪಕ್ಷವೊಂದು ನನಗೆ ಪ್ರಧಾನಿ ಹುದ್ದೆಯ ಆಹ್ವಾನ ನೀಡಿದಾಗ, ʼನೀವೇಕೆ ನಾನು ಪ್ರಧಾನಿಯಾಗಲು ಬಯಸುತ್ತಿದ್ದೀರಿ? ನಾನೇಕೆ ಪ್ರಧಾನಿ ಮೋದಿಯೊಂದಿಗಿರಬಾರದು?ʼ ಎಂದು ಪ್ರಶ್ನಿಸಿದ್ದೆ. ಪ್ರಧಾನಿಯಾಗುವುದು ನನ್ನ ಮಹತ್ವಾಕಾಂಕ್ಷೆಯಲ್ಲ" ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ಹಾಗೂ ಚುನಾವಣೆಯ ನಂತರ ನನಗೆ ಪ್ರಧಾನಿ ಹುದ್ದೆಯ ಆಹ್ವಾನ ಬಂದಿತ್ತು ಎಂದೂ ಅವರು ಬಯಲು ಮಾಡಿದ್ದಾರೆ.
ಒಂದು ವೇಳೆ ಪ್ರಧಾನಿ ಮೋದಿ ಸಕ್ರಿಯ ರಾಜಕೀಯದಿಂದ ನಿವೃತ್ತರಾದರೆ, ಅವರ ಬದಲಿಗೆ ನೀವು ಪ್ರಧಾನಿಯಾಗಲು ಬಯಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ನಾನು ಈಗ ಏನಾಗಿದ್ದೇನೊ, ಅದರಲ್ಲೇ ತೃಪ್ತನಾಗಿದ್ದೇನೆ ಎಂದು ಹೇಳಿದ್ದಾರೆ.