ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ವಿರುದ್ಧ ತೆರಿಗೆ ಕ್ರಮ ಇಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೂನ್ ಎರಡನೆ ವಾರದವರೆಗೂ ಕಾಂಗ್ರೆಸ್ ನಿಂದ ರೂ. 3,500 ಕೋಟಿಯನ್ನು ವಶಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸೋಮವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜುಲೈ 24ರಂದು ನಡೆಸಲಿದೆ.
2011-2012ರ ಅವಧಿಯ ತೆರಿಗೆ ಮರು ಮೌಲ್ಯಮಾಪನ ನಡೆಸಲು ಆದಾಯ ತೆರಿಗೆ ಇಲಾಖೆಗೆ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ 2018ರಲ್ಲಿ ಕಾಂಗ್ರೆಸ್ ಈ ಅರ್ಜಿಯನ್ನು ಸಲ್ಲಿಸಿತ್ತು.
ಪಕ್ಷದ ವಿರುದ್ಧ ಕೈಗೊಳ್ಳಲಾಗಿರುವ ನಾಲ್ಕು ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿರುವ ದಿಲ್ಲಿ ಹೈಕೋರ್ಟ್ ಕ್ರಮವನ್ನೂ ಇಂದು ವಿಚಾರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಉಲ್ಲೇಖಿಸಿತು.
2017-18, 2018-19, 2019-20 ಹಾಗೂ 2020-21ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿತ್ತು.
ಇದಾದ ಮರುದಿನ, ತಾನು 2017-18 ಹಾಗೂ 2020-21ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ರೂ. 1,823 ಕೋಟಿ ಮೊತ್ತದ ತೆರಿಗೆ ನೋಟಿಸ್ ಅನ್ನು ಸ್ವೀಕರಿಸಿದ್ದೇನೆ ಎಂದು ಕಾಂಗ್ರೆಸ್ ಹೇಳಿತ್ತು.
ಇದಲ್ಲದೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಗೆ ಇನ್ನೂ ಮೂರು ನೋಟಿಸ್ ಗಳನ್ನು ಜಾರಿಗೊಳಿಸಿದ್ದು, ಒಟ್ಟಾರೆಯಾಗಿ ಇದರ ತೆರಿಗೆ ಮೊತ್ತವು ರೂ. 3,567 ಕೋಟಿ ಆಗಿದೆ.