ಮಣಿಪುರ ವಿಚಾರ ಚರ್ಚೆಗೆ ಅವಕಾಶ ನಿರಾಕರಣೆ: ಸಂಸದೀಯ ಸ್ಥಾಯಿ ಸಮಿತಿಯಿಂದ ಹೊರನಡೆದ ವಿಪಕ್ಷ ಸದಸ್ಯರು
ಹೊಸದಿಲ್ಲಿ: ಮಣಿಪುರದಲ್ಲಿ ಪರಿಸ್ಥಿತಿಯನ್ನು ಚರ್ಚಿಸಲು ಮಾಡಿದ ಮನವಿಯನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಜುಲೈ 6, ಗುರುವಾರ ನಡೆದ ಸಭೆಯಲ್ಲಿ ನಿರಾಕರಿಸಿದ್ದನ್ನು ಪ್ರತಿಭಟಿಸಿ ಸಮಿತಿಯ ಸದ್ಯರಾದ ಮೂವರು ವಿಪಕ್ಷ ಶಾಸಕರು ಸಭೆಯಿಂದ ಹೊರನಡೆದಿದ್ದಾರೆ.
ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕಾರಾಗೃಹ ಸುಧಾರಣೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಟಿಎಂಸಿ ಸಂಸದ ಡೆರೆಕ್ ಒʼಬ್ರಿಯಾನ್, ಕಾಂಗ್ರೆಸ್ ಶಾಸಕರಾದ ದಿಗ್ವಿಜಯ್ ಸಿಂಗ್ ಮತ್ತು ಪ್ರದೀಪ್ ಭಟ್ಟಾಚಾರ್ಯ ಅವರು ಸಮಿತಿ ಅಧ್ಯಕ್ಷರಾಗಿರುವ ರಾಜ್ಯಸಭಾ ಸಂಸದ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಬ್ರಜ್‌ಲಾಲ್ ಅವರಿಗೆ ಜಂಟಿಯಾಗಿ ಪತ್ರವೊಂದನ್ನು ಸಲ್ಲಿಸಿ, ಮಣಿಪುರದ ವಿಚಾರವನ್ನು ತುರ್ತಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸುವ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಹೇಳಿದರು.
ಕೆಲ ಸಂಸದರು ಕಳೆದ ವಾರವೇ ಅಧ್ಯಕ್ಷರಿಗೆ ಪತ್ರ ಬರೆದು ಮಣಿಪುರ ವಿಚಾರವನ್ನು ತುರ್ತಾಗಿ ಚರ್ಚಿಸಬೇಕೆಂದು ಕೋರಿದ್ದರೂ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು.
“ಈ ವಿಚಾರವನ್ನು ಚರ್ಚೆಗೆ ಜುಲೈ ತಿಂಗಳಿನಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದೀರಿ, ಸಭೆಯ ಅಜೆಂಡಾ ನಿಗದಿಪಡಿಸುವುದು ನಿಮ್ಮ ಅಧಿಕಾರ, ಇಂತಹ ರಾಷ್ಟ್ರೀಯ ಮಹತ್ವದ ವಿಚಾರ ಚರ್ಚಿಸುವುದನ್ನು ತಪ್ಪಿಸುವ ನಿಲುವಿನ ವಿರುದ್ಧ ನಾವಿದ್ದೇವೆ ಅದಕ್ಕಾಗಿ ಸಭೆಯಿಂದ ಹೊರನಡೆಯುತ್ತಿದ್ದೇವೆ,” ಎಂದು ಸಮಿತಿಯ ವಿಪಕ್ಷ ಸದಸ್ಯರು ಹೇಳಿದ್ದಾರೆ.
ಈ ತಿಂಗಳು ನಡೆಯವ ಸಮಿತಿಯ ಎರಡು ಸಭೆಗಳಿಗೆ ಈ ಸದಸ್ಯರು ಹಾಜರಾಗುವ ಸಾಧ್ಯತೆಯಿಲ್ಲ. ಹೊರನಡೆಯುವ ಮುನ್ನ ಅವರು ಬಿಜೆಪಿ ಸಂಸದ, ಈಶಾನ್ಯ ಪ್ರದೇಶದವರಾದ ಬಿಪ್ಲಬ್ ದೇಬ್ ಅವರಿಗೂ ತಮ್ಮೊಂದಿಗೆ ಹೊರನಡೆಯುವಂತೆ ಕೋರಿದರು.