ಸರಬ್ಜಿತ್ ಹಂತಕನ ಹತ್ಯೆಯಲ್ಲಿ ಭಾರತದ ಕೈವಾಡ: ಪಾಕ್ ಆರೋಪ
ಇಸ್ಲಾಮಾಬಾದ್: ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಹತ್ಯೆ ಪ್ರಕರಣದ ಆರೋಪಿ ಅಮೀರ್ ಸರ್ಫ್ರಾಝ್ ಹತ್ಯೆಯಲ್ಲಿ ಭಾರತದ ಕೈವಾಡವನ್ನು ಕಾನೂನು ಜಾರಿ ಏಜೆನ್ಸಿಗಳು ಶಂಕಿಸಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಮೊಹ್ಸಿನ್ ನಕ್ವಿ ಸೋಮವಾರ ಹೇಳಿದ್ದಾರೆ.
ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ಕೈದಿ ಸರಬ್ಜಿತ್ ಸಿಂಗ್ ಅವರನ್ನು 2013ರಲ್ಲಿ ಹತ್ಯೆ ಮಾಡಿದ ಆರೋಪದಲ್ಲಿ ನಿರ್ದೋಷಿಯಾಗಿ ಸರ್ಫ್ರಾಝ್ ಹೊರಬಂದ ಕೆಲವೇ ದಿನಗಳಲ್ಲಿ ಆತನ ಹತ್ಯೆಯಾಗಿತ್ತು. ಲಾಹೋರ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಕ್ವಿ, "ಮೋಟರ್ ಬೈಕ್ ನಲ್ಲಿ ಬಂದ ಇಬ್ಬರು ಹಂತಕರು ನಡೆಸಿದ ಮಾರಣಾಂತಿಕ ದಾಳಿ ಒಂದು ನಿರ್ದಿಷ್ಟ ಹತ್ಯಾ ವಿಧಾನವನ್ನು ದೃಢಪಡಿಸಿದೆ" ಎಂದು ಅಭಿಪ್ರಾಯಪಟ್ಟರು.
"ಪಾಕಿಸ್ತಾನದ ನೆಲದಲ್ಲಿ ಭಾರತ ಇತರ ನಾಲ್ಕು ಹತ್ಯಾ ಪ್ರಕರಣಗಳಲ್ಲೂ ಷಾಮೀಲಾಗಿರುವ ಶಂಕೆ ಇದೆ. ಇನ್ನಷ್ಟು ವಿವರ ನೀಡುವ ಮೊದಲು ತನಿಖಾಧಿಕಾರಿಗಳ ಅಂತಿಮ ಅಭಿಪ್ರಾಯವನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು. ಈ ಆರೋಪಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲಾಹೋರ್ ನ ಇಸ್ಲಾಂಪುರ ಪ್ರದೇಶದಲ್ಲಿ ವಾಸವಿದ್ದ ಸರ್ಫ್ರಾಝ್ ಅವರನ್ನು ಹಂತಕರು ಹೊರಕ್ಕೆ ಕರೆದು ತೀರಾ ಸನಿಹದಿಂದ ಗುಂಡು ಹೊಡೆದು ಸಾಯಿಸಿದ್ದರು. ತೀವ್ರ ಗುಂಡೇಟು ತಗುಲಿದ್ದ ಸರ್ಫ್ರಾಝ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಸಹೋದರ ಜುನೈದ್ ನೀಡಿದ ದೂರಿನ ಮೇಲೆ ಪೊಲೀಸರು ಇಬ್ಬರು ಆಗಂತುಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.