ಪಾಕಿಸ್ತಾನದ ದುಷ್ಕೃತ್ಯಗಳ ಪ್ರೇತ ಈಗ ತನ್ನದೇ ಸಮಾಜವನ್ನು ಕಾಡುತ್ತಿದೆ : ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜೈಶಂಕರ್ ವಾಗ್ದಾಳಿ

Update: 2024-09-29 16:12 GMT

ಎಸ್. ಜೈಶಂಕರ್ | PC :PTI

ಹೊಸದಿಲ್ಲಿ : ಅಸ್ವಸ್ಥ ಪಾಕಿಸ್ತಾನದ ದುಷ್ಕೃತ್ಯಗಳ ಪ್ರೇತವು ಈಗ ತನ್ನದೇ ಸಮಾಜವನ್ನು ಕಾಡುತ್ತಿದೆ. ಇದಕ್ಕೆ ಅದು ವಿಶ್ವವನ್ನು ದೂಷಿಸುವಂತಿಲ್ಲ. ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಯನ್ನು ತೆರವು ಮಾಡುವುದರಿಂದ, ಭಯೋತ್ಪಾದನೆಯೊಂದಿಗೆ ದೀರ್ಘಕಾಲದ ಬಾಂಧವ್ಯವನ್ನು ಪಾಕಿಸ್ತಾನ ತ್ಯಜಿಸಿದರೆ ಮಾತ್ರ ಭಾರತ-ಪಾಕಿಸ್ತಾನಗಳ ನಡುವಿನ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಬಹುದು. ಇತರರ ಭೂಮಿಯನ್ನು ಅಪೇಕ್ಷಿಸುವ ನಿಷ್ಕ್ರಿಯ ರಾಷ್ಟ್ರದ ಮನಸ್ಥಿತಿಯನ್ನು ವಿಶ್ವದ ಎದುರು ತೆರೆದಿಡುವ ಸಮಯ ಇದಾಗಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಜೈಶಂಕರ್ ಹೇಳಿದ್ದಾರೆ.

ಹಲವು ದೇಶಗಳು ತಮ್ಮ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದ ಹಿಂದುಳಿದಿವೆ. ಆದರೆ ಕೆಲವರು ವಿನಾಶಕಾರಿ ಪರಿಣಾಮಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಒಂದು ಪ್ರಮುಖ ಉದಾಹರಣೆ ನಮ್ಮ ನೆರೆಯ ಪಾಕಿಸ್ತಾನ. ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಎಂದಿಗೂ ಯಶಸ್ವಿಯಾಗದು ಮತ್ತು ತನ್ನ ಕ್ರಿಯೆಗಳಿಗೆ ಖಂಡಿತವಾಗಿಯೂ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ.

ಕಾರ್ಯಸಾಧ್ಯವಲ್ಲದ ಯೋಜನೆಗಳು ಮತ್ತು ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಮಸುಕಾಗಿಸುವ ಯಾವುದೇ ಸಂಪರ್ಕವು ಸಾಲದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಚೀನಾದ ಬಹುಕೋಟಿ ಡಾಲರ್ ಮೊತ್ತದ ಬೆಲ್ಟ್ ಮತ್ತು ರೋಡ್ ಉಪಕ್ರಮವನ್ನು ಪರೋಕ್ಷವಾಗಿ ಉಲ್ಲೇಖಿಸಿ ಕುಟುಕಿದ ಅವರು, ಜಾಗತಿಕ ದಕ್ಷಿಣದಾದ್ಯಂತ ಅಭಿವೃದ್ಧಿ ಯೋಜನೆಗಳು ಹಳಿತಪ್ಪಿವೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ(ಎಸ್‍ಡಿಜಿ)ಗಳು ಹಿಮ್ಮೆಟ್ಟುತ್ತಿವೆ. ನಾವಿಲ್ಲಿ ಅತ್ಯಂತ ಕಠಿಣ ಸಮಯದಲ್ಲಿ ಒಟ್ಟುಗೂಡಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಪ್ರಹಾರದಿಂದ ಜಗತ್ತು ಇನ್ನೂ ಚೇತರಿಸಿಕೊಳ್ಳುವ ಮೊದಲೇ ಉಕ್ರೇನ್ ಯುದ್ಧ, ಗಾಝಾದ ಸಂಘರ್ಷ ವ್ಯಾಪಕಗೊಳ್ಳುವ ಹಾದಿಯಲ್ಲಿದೆ ಎಂದರು.

ದೀರ್ಘಕಾಲ ಭರವಸೆಯ ಮೂಲವಾಗಿರುವ ತಂತ್ರಜ್ಞಾನದ ಪ್ರಗತಿಗಳು ಈಗ ಆತಂಕದ ಅಂಶವಾಗಿದೆ. ಹವಾಮಾನ ಘಟನೆಗಳು ಹೆಚ್ಚಿನ ತೀವ್ರತೆ ಮತ್ತು ಆವರ್ತನದೊಂದಿಗೆ ಸಂಭವಿಸುತ್ತವೆ. ಆರೋಗ್ಯ ಭದ್ರತೆಯಷ್ಟೇ ಆಹಾರ ಭದ್ರತೆಯೂ ಚಿಂತಾಜನಕವಾಗಿದೆ. ಜಗತ್ತು ಛಿದ್ರವಾಗಿದೆ, ಹತಾಶವಾಗಿದೆ ಮತ್ತು ಧ್ರುವೀಕೃತ ಸ್ಥಿತಿಯಲ್ಲಿದೆ. ಮಾತುಕತೆ ಕಷ್ಟಕರವಾಗಿದೆ, ಒಪ್ಪಂದ ಇನ್ನಷ್ಟು ಕಷ್ಟವಾಗಿದೆ. ಇದನ್ನು ವಿಶ್ವಸಂಸ್ಥೆಯ ಸ್ಥಾಪಕರು ಖಂಡಿತಾ ಬಯಸಿರಲಿಲ್ಲ. ಇಂದು ಶಾಂತಿ ಮತ್ತು ಸಮೃದ್ಧಿ ಎರಡೂ ಅಪಾಯದಲ್ಲಿದೆ. ನಂಬಿಕೆ, ವಿಶ್ವಾಸವು ಸವೆದುಹೋಗಿದೆ' ಎಂದು ಜೈಶಂಕರ್ ಹೇಳಿದ್ದಾರೆ.

►ಗಾಝಾ ಮತ್ತು ಕಾಶ್ಮೀರದ ನಡುವೆ ಹೋಲಿಕೆ ಮಾಡಿದ ಪಾಕ್ ಪ್ರಧಾನಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ `ಭಾರತವು ತನ್ನ ಸೇನಾ ಸಾಮರ್ಥ್ಯಗಳ ಬೃಹತ್ ವಿಸ್ತರಣೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳಲು ನಿಯಂತ್ರಣ ರೇಖೆಯನ್ನು ದಾಟುವುದಾಗಿ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿದ್ದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಭಾರತ ಸರಕಾರ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ ಅವರು `ಫೆಲಸ್ತೀನ್ ಜನರಂತೆ ಜಮ್ಮು ಕಾಶ್ಮೀರದ ಜನರೂ ತಮ್ಮ ಸ್ವಾತಂತ್ರ್ಯ ಹಾಗೂ ಸ್ವ-ನಿರ್ಣಯದ ಹಕ್ಕಿಗಾಗಿ ಶತಮಾನದಿಂದ ಹೋರಾಡಿದ್ದಾರೆ' ಎಂದು ಷರೀಫ್ ಪ್ರತಿಪಾದಿಸಿದ್ದಾರೆ.


Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News