ಮಧ್ಯಪ್ರದೇಶ ಚುನಾವಣೆಯಲ್ಲಿ ಕಳಪೆ ಪ್ರದರ್ಶನ; ಕಮಲ್ ನಾಥ್ ಪದತ್ಯಾಗಕ್ಕೆ ಕಾಂಗ್ರೆಸ್ ಮುಖಂಡರ ಒಕ್ಕೊರಲ ಆಗ್ರಹ: ಮಲ್ಲಿಕಾರ್ಜುನ ಖರ್ಗೆ

Update: 2023-12-07 02:36 GMT

Photo: twitter

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸೋಲಿನ ಹೊಣೆ ಹೊತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ರಾಜೀನಾಮೆ ನೀಡಬೇಕು ಎನ್ನುವುದು ಪಕ್ಷದ ಬಹುತೇಕ ಮುಖಂಡರ ಒಕ್ಕೊರಲ ಆಗ್ರಹ ಎಂಬ ಸುಳಿವು ನೀಡಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಮಲ್ ನಾಥ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಮಂಗಳವಾರ ರಾತ್ರಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ಮುಖಂಡ ರಾಹುಲ್ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯಬಾರದು ಎನ್ನುವುದು ಬಹುತೇಕ ಮುಖಂಡರ ಅಭಿಪ್ರಾಯ ಎಂದು ಖರ್ಗೆ, ಕಮಲನಾಥ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

"ಕಮಲ್ನಾಥ್ ತಕ್ಷಣ ರಾಜೀನಾಮೆ ನೀಡುತ್ತಾರೆಯೇ ಅಥವಾ ಸ್ವಲ್ಪ ಸಮಯಾವಕಾಶ ನೀಡಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದರೆ ಅವರು ಪದತ್ಯಾಗ ಮಾಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿತ್ತು. ಆದರೆ 230 ಸದಸ್ಯಬಲದ ವಿಧಾನಸಭೆಯಲ್ಲಿ ಕೇವಲ 66 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯವಾಯಿತು. 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇಂಥ ಹೀನಾಯ ಸೋಲನ್ನು ಪಕ್ಷ ಏಕೆ ಅನುಭವಿಸಬೇಕಾಯಿತು ಎನ್ನುವ ಬಗಗೆ ಪಕ್ಷದ ಹಿರಿಯ ಮುಖಂಡರಿಗೆ ಕಮಲ್ ನಾಥ್ ವಿವರಿಸಬೇಕಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News