ಚುನಾವಣಾ ತಂತ್ರಗಾರಿಕೆಗೆ ಪ್ರಶಾಂತ್ ಕಿಶೋರ್ ಪಡೆಯುವ ಸಂಭಾವನೆ ಎಷ್ಟು ಗೊತ್ತೆ?
ಹೊಸದಿಲ್ಲಿ : ಚುನಾವಣಾ ತಂತ್ರಜ್ಞ ಎಂದೇ ಹೆಸರಾಗಿರುವ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ತಮ್ಮ ಚುನಾವಣಾ ತಂತ್ರಗಾರಿಕೆಯಿಂದ ಹಲವು ಪಕ್ಷಗಳನ್ನು ಅಧಿಕಾರದ ಗಾದಿಗೇರಿಸಿದ ಹಿರಿಮೆ ಹೊಂದಿದ್ದಾರೆ.
ಅದರಲ್ಲೂ 2014ರಲ್ಲಿ ಬಿಜೆಪಿ ಸರಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಪ್ರಶಾಂತ್ ಕಿಶೋರ್ ರಾಜಕೀಯ ತಂತ್ರಗಾರಿಕೆ ಬಹು ಮುಖ್ಯ ಪಾತ್ರ ವಹಿಸಿತ್ತು. ಇದೀಗ ಇಂತಹ ಚುನಾವಣಾ ತಂತ್ರಗಾರಿಕೆಗೆ ತಾವು ವಿಧಿಸುವ ಶುಲ್ಕವೆಷ್ಟು ಎಂಬುದನ್ನು ಖುದ್ದು ಪ್ರಶಾಂತ್ ಕಿಶೋರ್ ಬಹಿರಂಗ ಪಡಿಸಿದ್ದಾರೆ. ಒಂದು ಚುನಾವಣಾ ತಂತ್ರಗಾರಿಕೆಗೆ ಪ್ರಶಾಂತ್ ಕಿಶೋರ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ!
ಬಿಹಾರ ಉಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಪ್ರಶಾಂತ್ ಕಿಶೋರ್, ಅಕ್ಟೋಬರ್ 31ರಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು India Today ವರದಿ ಮಾಡಿದೆ.
ಬೇಲಾಗಂಜ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, “ನನ್ನ ಚುನಾವಣಾ ಪ್ರಚಾರಕ್ಕೆ ಹಣಕಾಸು ಎಲ್ಲಿಂದ ಬರುತ್ತದೆ ಎಂದು ಜನರು ಪದೇ ಪದೇ ಪ್ರಶ್ನಿಸುತ್ತಾರೆ” ಎಂದು ಹೇಳಿದ್ದಾರೆ.
‘ನನ್ನ ಚುನಾವಣಾ ತಂತ್ರಗಾರಿಕೆಯಿಂದ 10 ರಾಜ್ಯ ಸರಕಾರಗಳು ಆಡಳಿತ ನಡೆಸುತ್ತಿವೆ. ನನಗೆ ಚುನಾವಣಾ ಪ್ರಚಾರಕ್ಕಾಗಿ ಟೆಂಟ್ ಹಾಗೂ ಕ್ಯಾನೊಪಿಗಳನ್ನು ಹಾಕಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದ್ದೀರಾ? ನಾನು ದುರ್ಬಲ ಎಂದು ನೀವು ಭಾವಿಸಿದ್ದೀರಾ? ಬಿಹಾರದಲ್ಲಿ ನನ್ನಷ್ಟು ಶುಲ್ಕ ಪಡೆಯುವುದನ್ನು ಯಾರೂ ಕೇಳಿರುವುದಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ, ಅದಕ್ಕಾಗಿ 100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತೇನೆ. ಮುಂದಿನ ಎರಡು ವರ್ಷಗಳ ಕಾಲ ಕೇವಲ ಒಂದು ಚುನಾವಣಾ ಸಲಹೆಯ ಮೂಲಕ ನನ್ನ ಚುನಾವಣಾ ಪ್ರಚಾರಗಳಿಗೆ ಹಣಕಾಸು ಸಂಪನ್ಮೂಲ ಒದಗಿಸಬಲ್ಲೆ” ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಬಿಜೆಪಿ, ಕಾಂಗ್ರೆಸ್, ಜನತಾ ದಳ (ಯು), ವೈಎಸ್ಆರ್ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದಂಥ ಹಲವಾರು ಪಕ್ಷಗಳಿಗೆ ಚುನಾವಣಾ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.
ಸದ್ಯ ಬಿಹಾರದಲ್ಲಿ ತಮ್ಮದೇ ನೂತನ ಪಕ್ಷವಾದ ಜನ್ ಸೂರಜ್ ಪಕ್ಷವನ್ನು ಸ್ಥಾಪಿಸಿರುವ ಪ್ರಶಾಂತ್ ಕಿಶೋರ್, ಬಿಹಾರದ ಬೇಲಾಗಂಜ್ ಸೇರಿದಂತೆ, ಇಮಾಮ್ ಗಂಜ್, ರಾಮ್ ಗಢ್ ಹಾಗೂ ತರಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಇಲ್ಲಿ ಉಪ ಚುನಾವಣೆಗಳು ನಡೆಯುತ್ತಿವೆ.