ಕೋಡಕರ ಹವಾಲಾ ಹಗರಣಕ್ಕೂ ನನಗೂ ಸಂಬಂಧವಿಲ್ಲ : ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್

Update: 2024-11-02 11:15 GMT

ಲೆಹರ್ ಸಿಂಗ್ | PC : PTI 

ಬೆಂಗಳೂರು : ಕೋಡಕರ ಹವಾಲಾ ಹಗರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯ(ಈಡಿ) ಜೊತೆ ಕೇರಳ ಪೊಲೀಸರು ಹಂಚಿಕೊಂಡಿರುವ ವರದಿಯಲ್ಲಿ, ಲೆಹರ್ ಸಿಂಗ್ ಈ ಹಗರಣದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂದು ಉಲ್ಲೇಖಿಸಿರುವ ಹಿನ್ನಲೆಯಲ್ಲಿ ಲೆಹರ್ ಸಿಂಗ್ ರಿಂದ ಸ್ಪಷ್ಟನೆ ಬಂದಿದೆ.

ಪೊಲೀಸರ ವರದಿಯಲ್ಲಿ ಲೆಹರ್ ಸಿಂಗ್ ಹೆಸರು:

ಕೇರಳದಲ್ಲಿ ಸದ್ದು ಮಾಡುತ್ತಿರುವ ಕೋಡಕರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಲೆಹರ್ ಸಿಂಗ್ ಸಿರೋಯಾ ಅವರ ಹೆಸರು ಕೇಳಿಬಂದಿದೆ. 2021ರ ಕೇರಳ ವಿಧಾನಸಭಾ ಚುನಾವಣೆ ಸಮಯದಲ್ಲಿ ಕೇರಳದಲ್ಲಿನ ಬಿಜೆಪಿಯ ಚುನಾವಣಾ ವೆಚ್ಚಕ್ಕಾಗಿ ಕಳಿಸಲಾಗಿದ್ದ ಹಣ ಅದಾಗಿತ್ತು ಎಂದು ಪೊಲೀಸರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲೆಹರ್ ಸಿಂಗ್ ಬಿಜೆಪಿಯ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು. ಕೋಡಕರ ಹವಾಲಾ ಪ್ರಕರಣದ ಮೂಲ ಆರೋಪಿ ಲೆಹರ್ ಸಿಂಗ್ ಎಂಬ ಶಂಕೆ ವ್ಯಕ್ತವಾಗಿದೆ.

ಕೇರಳಕ್ಕೆ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಲೆಹರ್ ಸಿಂಗ್ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವರದಿಯಲ್ಲಿ ಅವರ ಫೋನ್ ನಂಬರ್ ಸೇರಿದಂತೆ ಹಲವು ವಿವರಗಳಿವೆ ಎಂದು ತಿಳದು ಬಂದಿದೆ.

41.20 ಕೋಟಿ ಹವಾಲ ಹಣ:

2021ರ ವಿಧಾನಸಭಾ ಚುನಾವಣೆಯ ಸಂದರ್ಭದ ಕೇರಳಕ್ಕೆ 41.20 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿತ್ತು ಎಂದು ವರದಿಗಳು ದೃಢಪಡಿಸಿದ್ದವು. ಕೇರಳದ ಬಿಜೆಪಿ ಮುಖಂಡರುಗಳಾದ ಕೆ.ಸುರೇಂದ್ರನ್, ಎಂ.ಗಣೇಶ್, ಗಿರೀಶನ್ ನಾಯರ್ ಅವರ ಹೆಸರುಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲೆಹರ್ ಸಿಂಗ್ ಮೂಲಕವೇ ಕೇರಳಕ್ಕೆ ಹಣ ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಬಿಜೆಪಿಯ ತ್ರಿಶೂರ್ ಕಚೇರಿಯ ಮಾಜಿ ಕಾರ್ಯದರ್ಶಿಯೊಬ್ಬರು ಚುನಾವಣಾ ಸಾಮಗ್ರಿಗಳ ನೆಪದಲ್ಲಿ ನಗದು ತುಂಬಿದ ಚೀಲಗಳನ್ನು 2021ರ ಏಪ್ರಿಲ್ 2ರಂದು ಪಕ್ಷದ ಕಚೇರಿಗೆ ತರಲಾಗಿತ್ತು ಎಂದು ಬಹಿರಂಗಪಡಿಸಿದ ನಂತರ ಕೋಡಕರ ಹವಾಲ ಹಗರಣ ಹೊರಬಂತು. ಆ ಬಳಿಕ ಕೇರಳ ಸರ್ಕಾರ ಪ್ರಕರಣವನ್ನು ಪುನಃ ಕೈಗೆತ್ತಿಕೊಳ್ಳಲು ನಿರ್ಧರಿಸಿತು.

ಕೇರಳಕ್ಕೆ ಭೇಟಿ ನೀಡಿಲ್ಲ, ಮುರಳೀಧರನ್ ಮಾತ್ರ ಪರಿಚಯ :

ಪೊಲೀಸರ ವರದಿಯಲ್ಲಿ ತಮ್ಮ ಹೆಸರು ಬಹಿರಂಗವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಲೆಹರ್ ಸಿಂಗ್, ಕೋಡಕರ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ತನಗೆ ಏನೂ ತಿಳಿದಿಲ್ಲ. ಕಳೆದ 7 ವರ್ಷಗಳಲ್ಲಿ ಕೇರಳಕ್ಕೇ ಭೇಟಿಯೇ ನೀಡಿಲ್ಲ ಎಂದು ಮಾತೃಭೂಮಿ ನ್ಯೂಸ್ ಜೊತೆ ಹೇಳಿಕೊಂಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ. ಬಿಜೆಪಿಯ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಅಲ್ಲಿನ ನಾಯಕರೊಂದಿಗೆ ತಮಗೆ ಯಾವುದೇ ಪರಿಚಯವಿಲ್ಲ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ಮುರಳೀಧರನ್ ಪರಿಚಯ ಮಾತ್ರ ಇದೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.

ಹಣ ವರ್ಗಾವಣೆಯಂಥ ಯಾವುದೇ ವಹಿವಾಟುಗಳಲ್ಲಿ ಭಾಗಿಯಾಗಿದ್ದೇನೆಂಬ ಆರೋಪವನ್ನು ನಿರಾಕರಿಸಿರುವ ಅವರು, ತಮ್ಮನ್ನು ಕೇಳದೆ ಮಾಧ್ಯಮಗಳಲ್ಲಿ ಹೆಸರು ದುರ್ಬಳಕೆ ಮಾಡುವುದನ್ನು ಮುಂದುವರೆಸಿದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ಚುನಾವಣಾ ವೆಚ್ಚಕ್ಕೆ ʼಹವಾಲʼ ಹಣ:

ಹಗರಣ ನಡೆದಿದ್ದಾಗ ಲೆಹರ್ ಸಿಂಗ್ ಕರ್ನಾಟಕದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದರು. ಬಿಜೆಪಿಯ ಪ್ರಚಾರ ವೆಚ್ಚಕ್ಕಾಗಿ ಕೇರಳಕ್ಕೆ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಷ್ಟ್ರ ನಾಯಕರೊಂದಿಗಿನ ನಿಕಟ ಸಂಪರ್ಕದ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ತನಿಖೆ ಹೆಚ್ಚು ಸದ್ದು ಮಾಡುತ್ತಿದೆ. ಉಪಚುನಾವಣೆ ಎದುರಾಗಿರುವ ಹೊತ್ತಿನ ವಿವಾದದ ನಡುವೆಯೇ ಕೇರಳ ಸರ್ಕಾರ ಕೋಡಕರ ಪ್ರಕರಣಕ್ಕೆ ಮರುಜೀವ ನೀಡಿದೆ.

ಇದರಿಂದಾಗಿ, ಈಗ ನವೆಂಬರ್ 13ರಂದು ಉಪಚುನಾವಣೆ ನಡೆಯಲಿರುವ ಹೊತ್ತಿನಲ್ಲಿ ಕೇರಳ ಬಿಜೆಪಿ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದೆ. ಪ್ರಕರಣವನ್ನು ಪುನಃ ಕೈಗೆತ್ತಿಕೊಂಡಿರುವುದು ಚುನಾವಣೆ ಹೊತ್ತಿನಲ್ಲಿ ತನ್ನ ವಿರುದ್ಧದ ರಾಜಕೀಯ ತಂತ್ರ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದ ಕ್ರಮ ಎಂದು ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ.

ಬಿಜೆಪಿಗೆ ಉಪ ಚುನಾವಣಾ ಸಂಕಷ್ಟ :

2021ರ ಮಂಜೇಶ್ವರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿಯೂ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೆಸರು ಇತ್ತು. ಪ್ರಕರಣದಲ್ಲಿ ಅವರನ್ನು ಬಿಡುಗಡೆಗೊಳಿಸಿದ ಕಾಸರಗೋಡು ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ತಡೆಯಾಜ್ಞೆ ನೀಡಿತ್ತು.

ಬಿಜೆಪಿಗೆ ಸಂಕಷ್ಟ ಎದುರಾದ ಸಂದರ್ಭದಲ್ಲಿಯೇ ಈಗ ಪ್ರಕರಣದ ಮರು ತನಿಖೆಯನ್ನು ಸರಕಾರ ಕೈಗೆತ್ತಿಕೊಂಡಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.

ಪಾಲಕ್ಕಾಡ್ ಮತ್ತು ಚೆಲಕ್ಕರ ವಿಧಾನಸಭಾ ಕ್ಷೇತ್ರಗಳು ಮತ್ತು ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಉಪಚುನಾವಣೆ ನಿಗದಿಯಾಗಿದೆ. ಅಕ್ರಮವಾಗಿ ವರ್ಗಾವಣೆಯಾಗಿರುವ ಹಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ. ಈ ಆರೋಪ ಪಕ್ಷದ ಹೆಸರನ್ನು ಕೆಡಿಸುವ ಉದ್ದೇಶದ್ದಾಗಿದೆ ಎಂದು ಅದು ಪ್ರತಿಪಾದಿಸಿದೆ.

ಕೋಡಕರ ಹವಾಲಾ ಪ್ರಕರಣದ ಚುನಾವಣಾ ಲಾಭ ಪಡೆಯಲು ಆಡಳಿತಾರೂಢ ಸಿಪಿಎಂ ಯತ್ನಿಸುತ್ತಿದೆ ಎಂಬ ವರದಿಗಳಿವೆ. ಆದರೆ, ಈ ಹಗರಣದಲ್ಲಿ ಸಿಪಿಎಂ ಮತ್ತು ಬಿಜೆಪಿ ಅಪವಿತ್ರ ನಂಟು ಹೊಂದಿವೆ ಎಂಬುದು ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪವಾಗಿದೆ.

ಸಿಪಿಎಂ ಮತ್ತು ಬಿಜೆಪಿ ನಡುವಿನ ಅಪವಿತ್ರ ನಂಟಿನಿಂದಾಗಿಯೇ ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ ಎಂದು ಕೇರಳ ವಿಧಾನಸಭೆ ವಿಪಕ್ಷ ನಾಯಕ ವಿಡಿ ಸತೀಶನ್ ದೂರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಹಣ ಇಡಲಾಗಿತ್ತು ಎಂದು ಬಿಜೆಪಿಯವರೇ ಹೇಳಿದ್ದರ ಬಗ್ಗೆ ತನಿಖೆಯಾಗಬೇಕಿದೆ. ಅಲ್ಲದೆ ಇತರ ಜಿಲ್ಲೆಗಳಿಗೂ ಎಷ್ಟು ಹಣ ರವಾನೆಯಾಗಿದೆ? ಎಂಬುದರ ತನಿಖೆಯೂ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಕರಣದ ಮರುತನಿಖೆಯನ್ನು ಸರ್ಕಾರ ಕೈಗೊಂಡಿರುವುದು ಕೂಡ ಚುನಾವಣಾ ಸಮಯದಲ್ಲಿನ ಲಾಭ ಮಾಡಿಕೊಳ್ಳುವ ಬರೀ ಕಣ್ಣಾಮುಚ್ಚಾಲೆ ತಂತ್ರವಾಗಿದೆ ಎಂದೂ ಸತೀಶನ್ ಆರೋಪಿಸಿದ್ಧಾರೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ಆಡಳಿತರೂಢ ಸಿಪಿಎಂ ಮಾತ್ರ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿಲ್ಲ, ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News