ಗುಜರಾತ್ ಕಾನೂನು ವಿವಿಯಲ್ಲಿ ಅತ್ಯಾಚಾರ ಪ್ರಕರಣಗಳು ಕಳವಳಕಾರಿ: ಹೈಕೋರ್ಟ್
ಅಹ್ಮದಾಬಾದ್: ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ಸಲಿಂಗಕಾಮಿಗಳ ವಿರುದ್ಧ ಪಕ್ಷಪಾತ ಧೋರಣೆ ಹಾಗೂ ತಾರತಮ್ಯದ ಘಟನೆಗಳು ಬೆಳಕಿಗೆ ಬಂದಿದ್ದು, ಅತ್ಯಂತ ಕಳವಳಕಾರಿ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಕಳೆದ ವಾರ ಸತ್ಯಶೋಧನಾ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿತ್ತು.
ಈ ವರದಿ ನಿಜಕ್ಕೂ ತೀವ್ರ ಕಳವಳಕಾರಿ ಎಂದು ನ್ಯಾಯಮೂರ್ತಿಗಳಾದ ಸುನಿತಾ ಅಗರ್ವಾಲ್ ಮತ್ತು ಅನಿರುದ್ಧ ಮಾಯೀ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ವಿವಿ ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಆಡಳಿತ ವರ್ಗ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆಕ್ಷೇಪಿಸಿದೆ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ ಹಾಗೂ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಸಾಮಾಜಿಕ ಜಾಲತಾಣ ಪೋಸ್ಟ್ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಹೈಕೋರ್ಟ್, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಹರ್ಷ ದೇವನಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು.
ಇದಕ್ಕೂ ಮುನ್ನ ವಿವಿವಿಯ ಐಸಿಸಿ ಹಾಗೂ ರಿಜಿಸ್ಟ್ರಾರ್, ಈ ಆರೋಪವನ್ನು ತಳ್ಳಿಹಾಕಿದ್ದರು.
"ಈ ವಿವಿ ರಾಷ್ಟ್ರೀಯ ಕಾನೂನು ವಿವಿ ಹೇಗೆ ಆಗಬಲ್ಲದು? ಇಂಥದ್ದು ನಡೆದಿಲ್ಲ, ವಿಚಾರಣೆ ಮುಕ್ತಾಯಗೊಳಿಸಿ ಎಂದು ರಿಜಿಸ್ಟ್ರಾರ್ ಅಫಿಡವಿತ್ ಸಲ್ಲಿಸಿದ್ದಾರೆ. ಈ ವಿಚಾರ ಗಮನಕ್ಕೆ ಬಂದ ಮೇಲೆಯೂ ಇಂತಹ ಉದ್ದಟತನದ ಹೇಳಿಕೆ ನೀಡಿದ್ದಾರೆ. ಈ ವ್ಯಕ್ತಿಗಳು ಮಕ್ಕಳನ್ನು ಹೇಗೆ ರಕ್ಷಿಸುತ್ತಾರೆ ಎಂದು ಸಿಜೆ ಪ್ರಶ್ನಿಸಿದ್ದಾರೆ.