1991ರ ಪೂಜಾ ಸ್ಥಳಗಳ ಕಾನೂನು ಜಾರಿ ಕೋರಿ ಉವೈಸಿ ಸಲ್ಲಿಸಿದ್ದ ಅರ್ಜಿ ನಾಳೆ ವಿಚಾರಣೆ
ಹೊಸದಿಲ್ಲಿ: 1991ರ ಪೂಜಾ ಸ್ಥಳಗಳ ಕಾನೂನನ್ನು ಜಾರಿಗೊಳಿಸುವಂತೆ ಕೋರಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿ 2ರಂದು ವಿಚಾರಣೆಗೆ ನಿಗದಿಪಡಿಸಿದೆ.
ವಕೀಲ ಮತ್ತು ಎಐಎಂಐಎಂ ಮುಖ್ಯಸ್ಥರಾದ ಸಂಸದ ಉವೈಸಿ ಡಿಸೆಂಬರ್ 17, 2024ರಂದು ವಕೀಲ ಫುಝೈಲ್ ಅಹ್ಮದ್ ಅಯ್ಯುಬಿ ಮೂಲಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಡಿಸೆಂಬರ್ 12ರಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, 1991ರ ಕಾನೂನಿಗೆ ವಿರುದ್ಧವಾಗಿ ಎಲ್ಲಾ ನ್ಯಾಯಾಲಯಗಳು ಹೊಸ ದಾವೆಗಳನ್ನು ದಾಖಲಿಸಿಕೊಳ್ಳುವುದು, ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡುವುದನ್ನು ನಿರ್ಬಂಧಿಸಿದೆ.
ಇದರಿಂದಾಗಿ ವಾರಣಾಸಿಯ ಜ್ಞಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್ ನಲ್ಲಿರುವ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ಮೂಲ ಧಾರ್ಮಿಕ ಸ್ವರೂಪವನ್ನು ಕಂಡುಹಿಡಿಯಲು ಸಮೀಕ್ಷೆಗೆ ಕೋರಿ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ್ದ ಸುಮಾರು 18 ಮೊಕದ್ದಮೆಗಳ ವಿಚಾರಣೆ ಸ್ಥಗಿತಗೊಂಡಿತ್ತು.