ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ ನ ಹಾಲಿ ನ್ಯಾಯಾಧೀಶ ಭಾಗಿ; ಏಕರೂಪ ನಾಗರಿಕ ಸಂಹಿತೆ ಕುರಿತು ಭಾಷಣ

Update: 2024-12-08 16:53 GMT

PC : thewire

ಹೊಸದಿಲ್ಲಿ: ವಿಶ್ವ ಹಿಂದೂ ಪರಿಷತ್ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ ನ ಇಬ್ಬರು ಹಾಲಿ ನ್ಯಾಯಾಧೀಶರು ಭಾಗವಹಿಸಿದ್ದು, ಅವರಲ್ಲಿ ಓರ್ವರು ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದ್ದಾರೆ.

ಅಲಹಾಬಾದ್ ಹೈಕೋರ್ಟ್ ನ ಗ್ರಂಥಾಲಯ ಸಭಾಂಗಣದಲ್ಲಿ ವಿಎಚ್ ಪಿಯ ವಾರಣಾಸಿ ಪ್ರಾಂತ್ಯ ಕಾನೂನು ಘಟಕ ಮತ್ತು ಅಲಹಾಬಾದ್ ಹೈಕೋರ್ಟ್ ಘಟಕ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ʼವಕ್ಫ್ ಬೋರ್ಡ್ ಕಾಯ್ದೆʼ ಮತ್ತು ʼಮತಾಂತರ, ಮತಾಂತರಕ್ಕೆ ಕಾರಣ ಮತ್ತು ಪರಿಣಾಮʼಗಳನ್ನು ಚರ್ಚಿಸಲಾಗಿದೆ.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು "ಏಕರೂಪ ನಾಗರಿಕ ಸಂಹಿತೆ - ಒಂದು ಸಾಂವಿಧಾನಿಕ ಅಗತ್ಯ" ಎಂಬ ಶೀರ್ಷಿಕೆಯಡಿ ಉಪನ್ಯಾಸವನ್ನು ನೀಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಆಧರಿಸಿದೆ ಎಂದ ಅವರು, ಜಾತ್ಯತೀತತೆ ಭಾರತದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ | PC : thewire

 

ಏಕರೂಪ ನಾಗರಿಕ ಸಂಹಿತೆಯ ಮುಖ್ಯ ಉದ್ದೇಶವೆಂದರೆ ವಿವಿಧ ಧರ್ಮಗಳು ಮತ್ತು ಸಮುದಾಯಗಳ ಆಧಾರದ ಅಸಮಾನ ಕಾನೂನು ವ್ಯವಸ್ಥೆಗಳನ್ನು ತೆಗೆದುಹಾಕುವ ಮೂಲಕ ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಮತ್ತು ಜಾತ್ಯತೀತತೆಯನ್ನು ಉತ್ತೇಜಿಸುವುದಾಗಿದೆ. ಈ ಸಂಹಿತೆಯು ಸಮುದಾಯಗಳ ನಡುವೆ ಮಾತ್ರವಲ್ಲದೆ ಸಮುದಾಯದೊಳಗೆ ಕೂಡ ಏಕರೂಪತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಯಾದವ್ ಹೇಳಿದ್ದಾರೆ.

ಇನ್ನೋರ್ವ ನ್ಯಾಯಾಧೀಶರಾದ ಜಸ್ಟಿಸ್ ದಿನೇಶ್ ಪಾಠಕ್ ಅವರು ಕಾರ್ಯಕ್ರಮವನ್ನು ದೀಪಗಳ ದೀಪಾಲಂಕಾರಗಳ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ದೃಢವಾಗಿಲ್ಲ ಎಂದು The wire ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಜಾನ್ಪುರ್, ಸುಲ್ತಾನ್ಪುರ, ಪ್ರತಾಪ್ಗಢ, ಅಮೇಥಿ, ಪ್ರಯಾಗ್ರಾಜ್, ಕೌಶಂಬಿ, ಭದೋಹಿ, ಮಿರ್ಜಾಪುರ, ಚಂದೌಲಿ, ಸೋನ್ಭದ್ರ, ಘಾಝಿಪುರ ಮತ್ತು ವಾರಣಾಸಿಯಿಂದ ವಿಹೆಚ್‌ ಪಿಯ ಕಾನೂನು ಘಟಕದ ಸದಸ್ಯರು ಭಾಗವಹಿಸಿದ್ದರು. ಇದಲ್ಲದೆ ಹೈಕೋರ್ಟ್ ಬಾರ್ ಅಸೋಸಿಯೇಶಸ್‌ ನ ಅಧ್ಯಕ್ಷರು ಮತ್ತು ಸರಕಾರಿ ವಕೀಲರು ಭಾಗವಹಿಸಿದ್ದರು.

ಜಸ್ಟಿಸ್ ಯಾದವ್ ಅವರ ಈ ಹಿಂದಿನ ಹಲವು ಹೇಳಿಕೆಗಳು ಚರ್ಚೆಯನ್ನು ಹುಟ್ಟುಹಾಕಿತ್ತು. 2021ರಲ್ಲಿ ಸಂಭಲ್ ನ ಗೋಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ನಿರಾಕರಿಸುವಾಗ ಯಾದವ್ ಗೋವನ್ನು "ರಾಷ್ಟ್ರೀಯ ಪ್ರಾಣಿ" ಎಂದು ಘೋಷಿಸಬೇಕು ಮತ್ತು ಗೋ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕುಗಳಲ್ಲಿ ಸೇರಿಸಬೇಕು ಎಂದು ಹೇಳಿದ್ದರು. ಗೋಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸತ್ತು ಕಾನೂನನ್ನು ತರಬೇಕು ಎಂದು ಅವರು ಹೇಳಿದ್ದರು.

ರಾಮ ಮತ್ತು ಕೃಷ್ಣನನ್ನು ಅವಮಾನಿಸಿದ ಆರೋಪದ ಮೇಲೆ ದಲಿತ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಜಸ್ಟಿಸ್ ಯಾದವ್ ಅವರು, ರಾಮ, ಕೃಷ್ಣ, ರಾಮಾಯಣ, ಗೀತೆ, ವಾಲ್ಮೀಕಿ ಮತ್ತು ವೇದವ್ಯಾಸರು ದೇಶದ “ಸಂಸ್ಕೃತಿ ಮತ್ತು ಪರಂಪರೆಯ” ಭಾಗವಾಗಿದ್ದಾರೆ ಎಂದು ಹೇಳಿದ್ದರು.

 PC : thewire

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News