ಅಳಿಯ ನನ್ನ ಫೋಟೊ ಬಳಸುವಂತಿಲ್ಲ, ಬಿಜೆಪಿ ಜತೆ ಸಖ್ಯ ಇಲ್ಲ: ಪವಾರ್ ಸ್ಪಷ್ಟನೆ

Update: 2023-08-17 02:46 GMT

ಮುಂಬೈ: ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತು ಅಳಿಯ ಅಜಿತ್ ಪವಾರ್ ನಡುವಿನ ರಹಸ್ಯ ಭೇಟಿ ರಾಜಕೀಯ ವಿಪ್ಲವ ಸೃಷ್ಟಿಸಿ ಹಲವು ಗೊಂದಲಗಳಿಗೆ ಕಾರಣವಾದ ಬೆನ್ನಲ್ಲೇ, ಅಳಿಯ ಅಜಿತ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಬೀಡ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, "ಅಜಿತ್ ಪವಾರ್ ನೇತೃತ್ವದ ಬಣ ನನ್ನ ಭಾವಚಿತ್ರವನ್ನು ಬ್ಯಾನರ್ ಹಾಗೂ ಹೋರ್ಡಿಂಗ್ ಗಳಲ್ಲಿ ಬಳಸುವುದನ್ನು ತಕ್ಷಣ ನಿಲ್ಲಿಸದಿದ್ದಲ್ಲಿ, ನ್ಯಾಯಾಂಗದ ಮೊರೆ ಹೋಗುತ್ತೇನೆ" ಎಂದು ಸ್ಪಷ್ಟಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶಾದ್ಯಂತ ಕೋಮು ಸಾಮರಸ್ಯಕ್ಕೆ ಬಿಜೆಪಿ ಧಕ್ಕೆ ತಂದಿದೆ. ಪ್ರಧಾನಿ ನರೇಂದ್ರ ಮೋದಿಗೆ 90 ದಿನಗಳಿಂದ ಹಿಂಸಾಚಾರದಿಂದಾಗಿ ಕಂಗೆಟ್ಟಿರುವ ಮಣಿಪುರ ಸಮಸ್ಯೆಗಿಂತ 2024ರಲ್ಲಿ ಅಧಿಕಾರಕ್ಕೆ ಮರಳುವುದೇ ಚಿಂತೆಯಾಗಿದೆ ಎಂದು ಲೇವಡಿ ಮಾಡಿದರು.

ಮಾವ- ಅಳಿಯ ರಹಸ್ಯ ಭೇಟಿ ಬಳಿಕ ಪವಾರ್ ಅವರ ಮುಂದಿನ ನಡೆ ಬಗ್ಗೆ ಅನಿಶ್ಚಿತತೆಯ ಕಾರ್ಮೋಡ ಕವಿದಿತ್ತು. ಮೊದಲ ಬಾರಿಗೆ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಶಿವಸೇನೆ (ಯುಬಿಟಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು.

"ಪ್ರಧಾನಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಣಿಪುರ ಹಿಂಸಾಚಾರವನ್ನು ಉಲ್ಲೇಖಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ 2019ರ ಚುನಾವಣೆಗಿಂತ ಮುನ್ನ ದೇವೇಂದ್ರ ಫಡ್ನವೀಸ್ ಮತ್ತೆ ಅಧಿಕಾರಕ್ಕೆ ಮರಳುತ್ತೇವೆ ಎಂದು ಹೇಳುತ್ತಾ ಬಂದಂತೆ ಅವರಿಂದ ಮೋದಿ ಮಾರ್ಗದರ್ಶನ ಪಡೆದಂತಿದೆ" ಎಂದು ಔರಂಗಾಬಾದ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News