ಮಧ್ಯಪ್ರದೇಶದಲ್ಲಿ ನಡೆಯಬೇಕಿದ್ದ ‘ಇಂಡಿಯಾ’ ಮೈತ್ರಿಕೂಟದ ಮೊದಲ ರ‍್ಯಾಲಿ ರದ್ದು
ಭೋಪಾಲ: ಅಕ್ಟೋಬರ್ ನಲ್ಲಿ ಭೋಪಾಲದಲ್ಲಿ ನಡೆಯಬೇಕಿದ್ದ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಮೊದಲ ಜಂಟಿ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಶನಿವಾರ ತಿಳಿಸಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್, ಅವರು (ಪ್ರತಿಪಕ್ಷ) ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಜನರು ಆಕ್ರೋಶಿತರಾಗಿದ್ದಾರೆ. ಆದುದರಿಂದ ‘ಇಂಡಿಯಾ’ ಮೈತ್ರಿಕೂಟದ ಮೊದಲ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಈ ರ‍್ಯಾಲಿಯನ್ನು ಯಾವಾಗ ಹಾಗೂ ಎಲ್ಲಿ ಆಯೋಜಿಸುವುದು ಎಂಬ ಬಗ್ಗೆ ಇದುವರೆಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಈ ನಡುವೆ ಶಿವರಾಜ್ ಸಿಂಗ್ ಚೌಹಾಣ್, ಸನಾತನ ಧರ್ಮಕ್ಕೆ ಆದ ಈ ಅವಮಾನವನ್ನು ಮಧ್ಯಪ್ರದೇಶದ ಜನರು ಸಹಿಸಲಾರರು ಎಂದು ಹೇಳಿದ್ದಾರೆ.
‘‘ನಮ್ಮ ನಂಬಿಕೆ ಮೇಲೆ ದಾಳಿ ಮಾಡಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಈ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದುದರಿಂದ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ. ಜನರು ಈ ರ‍್ಯಾಲಿಗೆ ಅವಕಾಶ ನೀಡಲಾರರು’’ ಎಂದು ಅವರು ತಿಳಿಸಿದ್ದಾರೆ.
ವಿಧಾನ ಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಮೊದಲ ಜಂಟಿ ಸಾರ್ವಜನಿಕ ಸಭೆಯನ್ನು ಅಕ್ಟೋಬರ್ ಮೊದಲ ವಾರ ನಡೆಸಲು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸೆಪ್ಟಂಬರ್ 13ರಂದು ನಿರ್ಧರಿಸಿತ್ತು.