ಜುಲೈ 1 ರಿಂದ ನೂತನ ಭಾರತ ದಂಡ ಸಂಹಿತೆ ಜಾರಿ
ಹೊಸದಿಲ್ಲಿ: ಭಾರತೀಯ ನ್ಯಾಯ ಸಂಹಿತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಈ ಕಾಯ್ದೆಯು 163 ವರ್ಷಗಳಷ್ಟು ಹಳತಾದ ಭಾರತೀಯ ದಂಡ ಸಂಹಿತೆಗೆ ಬದಲಿಯಾಗಿ ಜಾರಿಗೆ ಬರಲಿದೆ. ಜುಲೈ 1ರಿಂದ ಕಾನೂನಾಗಿ ಜಾರಿಯಾಗಲಿರುವ ಈ ನೂತನ ಕಾಯ್ದೆಯು, ಭಾರತೀಯ ದಂಡ ಸಂಹಿತೆಯ 511ರಿಂದ 358ರವರೆಗಿನ ಸೆಕ್ಷನ್‌ಗಳಿಗೆ ಕತ್ತರಿ ಹಾಕಿದ್ದು, ಈ ಕಾಯ್ದೆಯ ವ್ಯಾಪ್ತಿಗೆ 20 ಹೊಸ ಅಪರಾಧಗಳನ್ನು ಸೇರ್ಪಡೆ ಮಾಡುವ ಮೂಲಕ ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳಿಗೆ ಗಮನಾರ್ಹ ಬದಲಾವಣೆ ತರಲಾಗಿದೆ.
ಈ ಶಾಸನದಡಿ ಬದಲಾಗಲಿರುವ ಪ್ರಮುಖ ಕಾನೂನುಗಳು ಹೀಗಿವೆ:
ಕಲಮ್ಗಳು: ಐಪಿಸಿ 511 ಕಲಮ್ಗಳನ್ನು ಹೊಂದಿದ್ದರೆ ಅದರ ಉತ್ತರಾಧಿಕಾರಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 358 ಕಲಮ್ಗಳನ್ನು ಹೊಂದಿದೆ. ಇದೇ ರೀತಿ ಸಿಆರ್ಪಿಸಿಯಲ್ಲಿ 484 ಕಲಮ್ಗಳಿದ್ದರೆ ಭಾರತೀಯ ನಾಗರಿಕ ನ್ಯಾಯ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್)ದಲ್ಲಿ 531 ಕಲಮ್ಗಳಿವೆ. ಭಾರತೀಯ ಸಾಕ್ಷ್ಯ ಕಾಯ್ದೆ,1872ಯಲ್ಲಿ 166ರಷ್ಟಿದ್ದ ಕಲಮ್ಗಳ ಸಂಖ್ಯೆ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ)ದಲ್ಲಿ 170ಕ್ಕೆ ಏರಿಕೆಯಾಗಿದೆ.
‘ದೇಶದ್ರೋಹ’ಕ್ಕೆ ವಿದಾಯ: ನೂತನ ಕಾನೂನಿನಲ್ಲಿ ‘ದೇಶದ್ರೋಹ’ವನ್ನು ಕೈಬಿಡಲಾಗಿದೆಯಾದರೂ, ಸಶಸ್ತ್ರ ಕ್ರಾಂತಿಯಿಂದ ಉಂಟಾದ ದೇಶದ್ರೋಹ,ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಅಪರಾಧೀಕರಿಸಲಾಗಿದೆ.
ಯಾವುದೇ ಚಟುವಟಿಕೆಯು ದೇಶದ ಸಮಗ್ರತೆ,ಸಾರ್ವಭೌಮತೆ ಮತ್ತು ಏಕತೆಯ ವಿರುದ್ಧವಾಗಿದ್ದರೆ ಅದನ್ನು ದೇಶದ್ರೋಹವೆಂದು ಪರಿಗಣಿಲಾಗುವುದು ಮತ್ತು ಅದು ಕೇವಲ ಸರಕಾರದ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಅಲ್ಲ. ಸರಕಾರದ ವಿರುದ್ಧ ಯಾರೂ ಏನು ಬೇಕಾದರೂ ಹೇಳಬಹುದು. ಆದರೆ ದೇಶದ ಧ್ವಜ, ಭದ್ರತೆ ಅಥವಾ ಆಸ್ತಿಯಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಅವರು ಜೈಲಿಗೆ ಹೋಗುತ್ತಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಸೂದೆಗಳ ಮಂಡನೆ ವೇಳೆ ಸಂಸತ್ತಿನಲ್ಲಿ ವಿವರಿಸಿದ್ದರು.
ಭಯೋತ್ಪಾದಕರು ಮತ್ತು ಭಯೋತ್ಪಾದನೆ: ಕಾನೂನುಗಳಡಿ, ದೇಶದ ಹಿತಾಸಕ್ತಿಯ ವಿರುದ್ಧ ಡೈನಮೈಟ್, ವಿಷಕಾರಿ ಅನಿಲ ಇತ್ಯಾದಿಗಳನ್ನು ಬಳಸುವ ಯಾವುದೇ ವ್ಯಕ್ತಿಯು ಭಯೋತ್ಪಾದಕನಾಗಿದ್ದಾನೆ. ಭಾರತ ಸರಕಾರ,ಯಾವುದೇ ರಾಜ್ಯ ಅಥವಾ ಯಾವುದೇ ವಿದೇಶಿ ಸರಕಾರ ಅಥವಾ ಯಾವುದೇ ಅಂತರರಾಷ್ಟ್ರೀಯ ಸರಕಾರಿ ಸಂಸ್ಥೆಗಳ ಭದ್ರತೆಗೆ ಬೆದರಿಕೆಯೊಡ್ಡುವುದು ಭಯೋತ್ಪಾದಕ ಚಟುವಟಿಕೆಯಾಗಿದೆ.
ಗೈರುಹಾಜರಿಯಲ್ಲಿ ವಿಚಾರಣೆ: ಭಾರತದ ಹೊರಗೆ ತಲೆಮರೆಸಿಕೊಂಡಿರುವ ಆರೋಪಿ ಇಲ್ಲಿರಬೇಕಿಲ್ಲ. ವ್ಯಕ್ತಿಯು 90 ದಿನಗಳಲ್ಲಿ ನ್ಯಾಯಾಲಯದ ಎದುರು ಹಾಜರಾಗದಿದ್ದರೆ ಆತನ ಅನುಪಸ್ಥಿತಿಯ ಹೊರತಾಗಿಯೂ ವಿಚಾರಣೆಯು ಮುಂದುವರಿಯುತ್ತದೆ. ಕಾನೂನು ಕ್ರಮವನ್ನು ಜರುಗಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ನ್ನು ನೇಮಿಸಲಾಗುವುದು.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ: ಆರೋಪಿಗಳು ದಂಡ ಸಂಹಿತೆಯ ಉದಾರ ನಿಬಂಧನೆಗಳ ಲಾಭವನ್ನು ಪಡೆದುಕೊಳ್ಳುವುದನ್ನು ತಡೆಯಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳ ಕುರಿತು ನಿಬಂಧನೆಗಳನ್ನು ಪೊಕ್ಸೊ ಕಾಯ್ದೆಯೊಂದಿಗೆ ತಳುಕು ಹಾಕಲಾಗಿದೆ. ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚುವರಿಯಾಗಿ,ಅಪ್ರಾಪ್ತ ವಯಸ್ಕ ಬಾಲಕರ ಮಾರಾಟವನ್ನು ಅಪರಾಧವಾಗಿ ಸೇರಿಸುವ ಮೂಲಕ ಕಾನೂನುಗಳನ್ನು ಲಿಂಗ ತಟಸ್ಥವನ್ನಾಗಿಸಲಾಗಿದೆ.