ಸುರಂಗ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯಾಗಿರುವ ಬೆನ್ನಿಗೇ ಜಾರ್ಖಂಡ್ ಗ್ರಾಮದಲ್ಲಿ ಹೆಚ್ಚಿದ ಆತಂಕ
ಒರ್ಮಾಂಝಿ: ಉತ್ತರಾಖಂಡದಲ್ಲಿ ಕುಸಿದು ಬಿದ್ದಿರುವ ಸಿಲ್ಕ್ಯಾರಾ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಹಿನ್ನಡೆಯಾಗಿರುವ ಬೆನ್ನಿಗೇ ರಾಂಚಿಯ ಹೊರವಲಯದಲ್ಲಿರುವ ಖೀರಾಬೇಡ ಗ್ರಾಮದ ಮೂವರು ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿರುವುದರಿಂದ, ಈ ಕುಗ್ರಾಮದಲ್ಲಿನ ಆತಂಕ ಮುಗಿಲು ಮುಟ್ಟಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
60 ಮೀ.ಗಳಷ್ಟು ಉದ್ದದ ಅವಶೇಷಗಳ ರಾಶಿಯ ಮಧ್ಯೆ ಕೊರೆಯುವ ಕೆಲಸಕ್ಕಾಗಿ ಅಮೆರಿಕದಿಂದ ತರಿಸಲಾಗಿದ್ದ ಆಗರ್ ಯಂತ್ರವು ತಾಂತ್ರಿಕ ದೋಷದಿಂದಾಗಿ ಕೆಲಸವನ್ನು ಸ್ಥಗಿತಗೊಳಿಸಿದೆ. ಇದರಿಂದ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣೆಯು ಇನ್ನೂ ಕೆಲ ದಿನ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಬಹುಶಃ ವಾರಗಳ ಕಾಲ ಮುಂದೂಡಿಕೆಯಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ತಮ್ಮ ಏಕಮಾತ್ರ ಪುತ್ರ ರಾಜೇಂದ್ರ ಕುಸಿದಿರುವ ಸುರಂಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೆ ಪಾರ್ಶ್ವವಾಯು ಪೀಡಿತ ಶ್ರವಣ್ ಬೇಡಿಯ (55) ಅವರ ಮುಖದಲ್ಲಿ ಹತಾಶೆ ಮಡುಗಟ್ಟಿದೆ.
22 ವರ್ಷದ ರಾಜೇಂದ್ರ ಮಾತ್ರವಲ್ಲದೆ ಇದೇ ಗ್ರಾಮದ ಹದಿಹರೆಯದ ಸುಖರಾಮ್ ಹಾಗೂ ಅನಿಲ್ ಎಂಬುವವರೂ ಕೂಡಾ ಕುಸಿದಿರುವ ಸುರಂಗದಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ರಾಂಚಿಯಿಂದ ಘಟನಾ ಸ್ಥಳಕ್ಕೆ ಧಾವಿಸಿರುವ ಅನಿಲ್ ಸಹೋದರ ಸುನೀಲ್, “ಪ್ರತಿ ದಿನ ನಾವು ಇನ್ನು ಎರಡು ಗಂಟೆ ಮಾತ್ರ ಎಂದು ಕೇಳುತ್ತೇವೆ. ಕೆಲವೊಮ್ಮೆ ಮೂರು ಗಂಟೆ ಅಥವಾ ಮತ್ತೊಂದು ದಿನ ಎಂದೂ ಕೇಳುತ್ತೇವೆ. ಈ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಎಷ್ಟು ಸಮಯ ಹಿಡಿಯುತ್ತದೆ ಎಂಬುದು ನಮಗೆ ತಿಳಿಯುತ್ತಿಲ್ಲ. ನಾನು ನಾಲ್ಕು ದಿನಗಳ ಹಿಂದಷ್ಟೆ ನನ್ನ ಸಹೋದರನೊಂದಿಗೆ ಮಾತನಾಡಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ.
ಕಾರ್ಮಿಕರು ಈಗಾಗಲೇ ನಿರ್ಮಾಣಗೊಂಡಿರುವ ಎರಡು ಕಿಮೀ ಉದ್ದದ ಸುರಂಗದ ನಡುವೆ ಸಿಲುಕಿಕೊಂಡಿದ್ದಾರೆ. ಅವರಿಗೆ ನಿತ್ಯ ಆಹಾರ, ಔಷಧಗಳು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಆರು ಇಂಚು ಅಗಲದ ಕೊಳವೆ ಮೂಲಕ ರವಾನಿಸಲಾಗುತ್ತಿದೆ.