ಮಸೀದಿಗೆ ನುಗ್ಗಿ ಹೊಡೆಯುತ್ತೇವೆ ಎಂದ ಬಿಜೆಪಿ ಶಾಸಕ ನಿತೇಶ್ ರಾಣೆ ; ಪ್ರಕರಣ ದಾಖಲು

Update: 2024-09-02 13:48 GMT

 ಬಿಜೆಪಿ ಶಾಸಕ ನಿತೇಶ್ ರಾಣೆ | PTI

ಮುಂಬೈ : ಪ್ರಚೋದನಾಕಾರಿ ಭಾಷಣದ ಮೂಲಕ ಮುಸ್ಲಿಮರಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಮಹಾರಾಷ್ಟ್ರದ ಅಹ್ಮದ್ ನಗರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ತಿಂಗಳು ಇಸ್ಲಾಂ ಧರ್ಮ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿಂದೂ ಸ್ವಾಮೀಜಿ ಮಹಂತ್ ರಾಮಗಿರಿ ಮಹಾರಾಜ್ ಅವರನ್ನು ಬೆಂಬಲಿಸಿ ಶ್ರೀರಾಮ್ ಪುರ್ ಹಾಗೂ ಟೊಪ್ಖಾನಾ ಪ್ರದೇಶಗಳಲ್ಲಿ ಆಯೋಜಿಸಲಾಗಿದ್ದ ಎರಡು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ರಾಣೆ ಮಾತನಾಡುತ್ತಿದ್ದರು.

“ರಾಮಗಿರಿ ಮಹಾರಾಜ್ ವಿರುದ್ಧ ಯಾರಾದರೂ ಹೇಳಿಕೆ ನೀಡಿದರೆ, ನಾವು ನಿಮ್ಮೆಲ್ಲರನ್ನು ಮಸೀದಿಯೊಳಗೆ ನುಗ್ಗಿ ಹೊಡಯಲಿದ್ದೇವೆ. ಅದು ತಿಳಿದಿರಲಿ” ಎಂದು ನಿತೇಶ್ ರಾಣೆ ಮುಸ್ಲಿಮರಿಗೆ ಬೆದರಿಕೆ ಒಡ್ಡಿರುವ ವಿಡಿಯೊ ವೈರಲ್ ಆಗಿದ್ದು, ಈ ಸಂಬಂಧ ರಾಣೆ ವಿರುದ್ಧ ಶ್ರೀರಾಮ್ ಪುರ್ ಹಾಗೂ ಟೊಪ್ಖಾನಾ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐ ಆರ್ ದಾಖಲಾಗಿವೆ.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿರುವ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ರಾಣೆಯನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಮಾಡಿದ್ದಾರೆ.

“ರಾಣೆ ತಮ್ಮ ಸಂಪೂರ್ಣ ಭಾಷಣದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡಿದ್ದಾರೆ. ಇದು ಉದ್ರೇಕಕಾರಿ ಹಾಗೂ ದ್ವೇಷ ಭಾಷಣವಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯು ಮಹಾರಾಷ್ಟ್ರದಲ್ಲಿ ಕೋಮು ಹಿಂಸಾಚಾರವನ್ನು ಸೃಷ್ಟಿಸಲು ಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಪೈಗಂಬರ್ ಹಾಗೂ ಇಸ್ಲಾಂ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ರಾಮಗಿರಿ ಮಹಾರಾಜ್ ಗುರಿಯಾಗಿದ್ದಾರೆ. ಇದರ ಬೆನ್ನಿಗೇ ಮಹಾರಾಷ್ಟ್ರದಾದ್ಯಂತ ಅವರ ವಿರುದ್ಧ ಹಲವಾರು ಸ್ಥಳಗಳಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಬೇಕು ಎಂದು ಮುಸ್ಲಿಂ ನಾಯಕರು ಆಗ್ರಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News