ಬಿಜೆಪಿ 'INDIA'ಗೆ ಸವಾಲು ಹಾಕಲಿದೆಯೇ?: ಮಮತಾ ಬ್ಯಾನರ್ಜಿ ಪ್ರಶ್ನೆ
ಬೆಂಗಳೂರು: ನಮ್ಮ ಮೈತ್ರಿಕೂಟಕ್ಕೆ INDIA ಎಂದು ಹೆಸರಿಸಲಾಗಿದ್ದು, ಈ ಇಂಡಿಯಾಗೆ ಬಿಜೆಪಿಗೆ ಸವಾಲು ಹಾಕುತ್ತದೆಯೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ವಿಪಕ್ಷ ಸಭೆಯ ಬಳಿಕ ಮಾತನಾಡಿದ ಅವರು, ನಿಜವಾದ ಸವಾಲು ಈಗಾಗಲೇ ಆರಂಭವಾಗಿದೆ. ನಮ್ಮ ಮೈತ್ರಿಯ 26 ಪಕ್ಷಗಳ ಸಭೆ ನಡೆದಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರು, ದಲಿತರು, ಹಿಂದೂಗಳು, ಸಿಖ್ಖರು, ಮಣಿಪುರದ, ದಿಲ್ಲಿಯ, ಬಂಗಾಳದ, ಮಹಾರಾಷ್ಟ್ರದ ಎಲ್ಲಾ ಜನರಿಗಾಗಿ ನಾವು ಒಂದುಗೂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಸರ್ಕಾರವನ್ನು ಖರೀದಿಸಿ ಉರುಳಿಸುವ ವಿರುದ್ಧ ಸವಾಲು ಹಾಕಲು INDIA ರೂಪುಗೊಂಡಿದೆ. ಈ ಇಂಡಿಯಾವನ್ನು ಬಿಜೆಪಿ ಎದುರಿಸುತ್ತದೆಯೇ? ಮುಂದಿನ ಎಲ್ಲಾ ಕಾರ್ಯಕ್ರಮಗಳು INDIA ದ ಅಡಿಯಲ್ಲಿ ನಡೆಯುತ್ತವೆ, ಸಾಧ್ಯವಿದ್ದರೆ ನಮ್ಮನ್ನು ತಡೆಯಿರಿ ಎಂದು ಮಮತಾ ಬ್ಯಾನರ್ಜಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಕೇಂದ್ರದ ಆಡಳಿತವು ಇಂದು ಮಾಡುತ್ತಿರುವ ಏಕೈಕ ಕೆಲಸವೆಂದರೆ ಸರ್ಕಾರಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ʼಸೇವ್ ಇಂಡಿಯಾ, ಸೇವ್ ದ ಪೀಪಲ್ ಆಫ್ ಇಂಡಿಯಾʼ ಎಂದು ಕರೆ ನೀಡಿದ ಅವರು, ಇಂಡಿಯಾವನ್ನು ಉಳಿಸುವುದು ದೇಶವನ್ನು ಉಳಿಸಿದಂತೆ, ಸರ್ಕಾರಗಳನ್ನು ಖರೀದಿಸಿ ಉರುಳಿಸುವುದರಿಂದ ದೇಶವನ್ನು ಉಳಿಸಬೇಕು, ಇಂಡಿಯಾ ಗೆದ್ದರೆ ದೇಶ ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.