ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

Update: 2023-09-20 17:17 GMT

Photo: X \ ANI 

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯು ಬುಧವಾರ 452 ವಿರುದ್ಧ 2 ಮತಗಳ ಭಾರೀ ಬಹುಮತದಿಂದ ಅಂಗೀಕರಿಸಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸಲಿರುವ ಮಸೂದೆಯು ಈಗ ಚರ್ಚೆ ಮತ್ತು ಮತದಾನಕ್ಕಾಗಿ ರಾಜ್ಯಸಭೆಗೆ ಸಲ್ಲಿಕೆಯಾಗಲಿದೆ. ರಾಜ್ಯಸಭೆಯಲ್ಲಿಯೂ ಅದು ಸುಲಭವಾಗಿ ಅಂಗೀಕರಿಸಲ್ಪಡುವ ವ್ಯಾಪಕ ನಿರೀಕ್ಷೆಯಿದೆ.

ಈ ನಡುವೆ ಬುಧವಾರ ಮಸೂದೆಯ ಮೇಲೆ ಕಾವೇರಿದ ಚರ್ಚೆಗಳಿಗೆ ಲೋಕಸಭೆಯು ಸಾಕ್ಷಿಯಾಗಿತ್ತು. ಹಲವಾರು ಷರತ್ತುಗಳಿಂದ ಕೂಡಿರುವ ‘ನಕಲಿ ’ ಮಸೂದೆಯನ್ನು ಸರಕಾರವು ಮಂಡಿಸಿದ್ದು, ಮುಂದಿನ 10 ವರ್ಷಗಳಲ್ಲಿಯೂ ಅದನ್ನು ಜಾರಿಗೊಳಿಸುವುದು ಅಸಾಧ್ಯ ಎಂದು ಕೆಲವು ಪ್ರತಿಪಕ್ಷಗಳು ಆರೋಪಿಸಿದವು.

ನೀವು ಇಷ್ಟೊಂದು ವಿಳಂಬವನ್ನು ಮಾಡಿದ್ದು ಏಕೆ? 2014ರಲ್ಲಿ ಅಧಿಕಾರಕ್ಕೆ ಬಂದಾಗಲೇ ಏಕೆ ಮಾಡಿರಲಿಲ್ಲ? ನೀವು ಜನತೆಗೆ ಏನನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತಿದ್ದೀರಿ? ಇದು ಹ್ಯಾಟಿನಿಂದ ಮೊಲವನ್ನು ಹೊರತೆಗೆದು ದೇಶದ ಮುಂದಿಡುವ ತಂತ್ರವೇ ಎಂದು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗಿಯಾದ ಟಿಎಂಸಿಯ ಮೊದಲ ಸದಸ್ಯೆ ಕಾಕೋಲಿ ಘೋಷ್ ದಸ್ತಿದಾರ್ ಪ್ರಶ್ನಿಸಿದರು.

ದಕ್ಷಿಣ ಭಾರತದ ಹಲವಾರು ಸಂಸದರೂ ಕ್ಷೇತ್ರ ಮರುವಿಂಗಡಣೆ ಅಥವಾ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆಗಳಿಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳ ಮರುಹಂಚಿಕೆಯಂತಹ ಷರತ್ತುಗಳಿಂದಾಗಿ ಮಸೂದೆಯ ಜಾರಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗೃಹಸಚಿವ ಅಮಿತ್ ಶಾ ಅವರು, ಮುಂದಿನ ಸರಕಾರವು ಚುನಾವಣೆಗಳ ಬಳಿಕ ತಕ್ಷಣವೇ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ನಡೆಸಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News