ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ ದಿಲ್ಲಿ ನ್ಯಾಯಾಲಯ ಸಮನ್ಸ್
Update: 2023-07-07 09:42 GMT
ಹೊಸದಿಲ್ಲಿ: ಆರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಹಿಂಬಾಲಿಸಿದ ಆರೋಪದ ಮೇಲೆ ಸಲ್ಲಿಸಲಾದ ಆರೋಪಪಟ್ಟಿಯನ್ನು ಗಮನಕ್ಕೆ ತಂದ ನಂತರ ದಿಲ್ಲಿ ನ್ಯಾಯಾಲಯವು ಶುಕ್ರವಾರ ಬಿಜೆಪಿ ಸಂಸದ ಹಾಗೂ ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ವಿನೋದ್ ತೋಮರ್ ಅವರಿಗೆ ಸಮನ್ಸ್ ನೀಡಿದೆ.
ರೂಸ್ ಅವೆನ್ಯೂ ನ್ಯಾಯಾಲಯವು ಜುಲೈ 18, ಮಧ್ಯಾಹ್ನ 2.30 ಕ್ಕೆ ಮುಂದಿನ ವಿಚಾರಣೆಯನ್ನು ಪಟ್ಟಿ ಮಾಡಿದ್ದು, ಜುಲೈ 18ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬ್ರಿಜ್ ಭೂಷಣ್ ಸಿಂಗ್ ಗೆ ಸಮನ್ಸ್ ನೀಡಿದೆ.
ಎಪ್ರಿಲ್ 21 ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆಯ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು.