ಚಿಕನ್ ಶವರ್ಮ ಸೇವಿಸಿದ ಯುವಕ ಮೃತ್ಯು: ಇಬ್ಬರು ಮಾರಾಟಗಾರರ ಬಂಧನ
Update: 2024-05-08 11:40 GMT
ಮುಂಬೈ: ನಗರದ ಸ್ಟಾಲ್ ಒಂದರಿಂದ ಖರೀದಿಸಿದ ಚಿಕನ್ ಶವರ್ಮ ಸೇವಿಸಿದ 19 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆಯ ನಂತರ ಪೊಲೀಸರು ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಥಮೇಶ್ ಭೊಕ್ಸೆ ಎಂಬಾತ ಟ್ರಾಂಬೆ ಪ್ರದೇಶದ ಸ್ಟಾಲ್‌ನಿಂದ ಮೇ 3ರಂದು ಆಹಾರ ಖರೀದಿಸಿದ್ದರೆಂದು ತಿಳಿದು ಬಂದಿದೆ. ಮರುದಿನವೇ ಆತನಿಗೆ ಹೊಟ್ಟೆ ನೋವು, ವಾಂತಿ ಸಮಸ್ಯೆ ಕಾಣಿಸಿಕೊಂಡು ಹತ್ತಿರದ ಮುನಿಸಿಪಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಅದೇ ಸಮಸ್ಯೆ ಕಾಡಿದಾಗ ಮೇ 5ರಂದು ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದರೂ ಸಮಸ್ಯೆ ಮುಂದುವರಿದಾಗ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸೋಮವಾರ ಮೃತಪಟ್ಟಿದ್ದಾರೆ.
ಇದರ ಬೆನ್ನಲ್ಲೇ ಸ್ಟಾಲ್ ನಡೆಸುತ್ತಿದ್ದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.