‘ಎಚ್ಎಸ್ಆರ್ಪಿ’ ಅಳವಡಿಕೆ: ಗ್ರಾಮೀಣ ಭಾಗದ ವಾಹನಿಗರಿಗೆ ಮಾಹಿತಿ ಕೊರತೆ

Update: 2023-11-09 04:31 GMT

ಮಂಗಳೂರು: ಕೇಂದ್ರ ಸರಕಾರದ ಆದೇಶದಂತೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸುವ ಪ್ರಕ್ರಿಯೆಗೆ ದ.ಕ. ಜಿಲ್ಲೆಯ ನಗರ ಪ್ರದೇಶದಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ಆದರೆ ಗ್ರಾಮೀಣ ಭಾಗದದಲ್ಲಿ ಅಷ್ಟೊಂದು ಸ್ಪಂದನ ಸಿಕ್ಕಿಲ್ಲ ಎನ್ನಲಾಗಿದೆ. ವಾಹನಿಗರಿಗೆ ಸಕಾಲದಲ್ಲಿ ಸಿಗದ ಮಾಹಿತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

೨೦೧೯ರ ಎಪ್ರಿಲ್ ೧ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳು ೨೦೨೩ರ ನ.೧೭ರೊಳಗೆ ಎಚ್ಎಸ್ಆರ್ಪಿ ಅಳವಡಿ ಸಬೇಕು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಅದರಂತೆ ಬಹುತೇಕ ವಾಹನಗಳ ಮಾಲಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದ ವಾಹನಿಗರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮುಂದಿದ್ದು, ಅರ್ಜಿ ಸಲ್ಲಿಸಿ ಕನಿಷ್ಠ 10 ದಿನಗಳ ಕಾಲ ಕಾಯುವ ಅನಿವಾರ್ಯತೆ ಎದುರಾಗಿವೆ.

ದ.ಕ. ಜಿಲ್ಲೆಯಲ್ಲಿ 2019ರ ಎಪ್ರಿಲ್ 1ರ ಮೊದಲು ಆನ್ಲೈನ್ ವ್ಯವಸ್ಥೆಯಡಿ ನೋಂದಣಿಯಾದ 8,22,941 ವಾಹನಗಳಿವೆ ಎಂದು ಮೂಲಗಳು ತಿಳಿಸಿವೆ. ಆನ್ಲೈನ್ ವ್ಯವಸ್ಥೆಗೆ ಒಳಪಡದ ಮತ್ತು ಆರ್ಸಿ ದಾಖಲೆ ಪುಸ್ತಕ ರೂಪದಲ್ಲಿರುವ ಸಾವಿರಾರು ವಾಹನಗಳು ಜಿಲ್ಲೆಯಲ್ಲಿದೆ. ಅಧಿಕೃತ ದಾಖಲೆ ಹೊಂದಿರುವ ಈ ವಾಹನ ಮಾಲಕರು ಕಡ್ಡಾಯವಾಗಿ ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕಿದೆ.

ಆನ್ಲೈನ್ ವ್ಯವಸ್ಥೆಗೆ ಒಳಪಡದ ಮತ್ತು ಆರ್ಸಿ ದಾಖಲೆಗಳು ಪುಸ್ತಕ ರೂಪದಲ್ಲಿರುವ ವಾಹನ ಮಾಲಕರು ಆಯಾ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕಿದೆ. ಇದರಿಂದ ವಾಹನಗಳ ದಾಖಲೆಗಳೂ ಸುರಕ್ಷಿತವಾಗಿರುತ್ತದೆ. ಈ ನಂಬರ್ ಪ್ಲೇಟ್ಗಳ ನಕಲಿ ಮಾಡಲು ಸಾಧ್ಯವಿಲ್ಲವಾಗಿದೆ ಎಂದು ಆರ್ಟಿಒ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವಾಹನ ಕಳವು ಇತ್ಯಾದಿ ಅಪರಾಧ ಕೃತ್ಯಗಳಿಗೆ ಕಳವುಗೈದ ವಾಹನಗಳ ಬಳಕೆ ದೇಶಾದ್ಯಂತ ಹೆಚ್ಚುತ್ತಿದೆ. ಈ ಅಕ್ರಮ, ಅಪರಾಧಗಳಿಗೆ ಕಡಿವಾಣ ಹಾಕಲು ಹಳೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸುವ ಸಲುವಾಗಿ ಕೇಂದ್ರ ಸರಕಾರ ಹೊಸ ನಿಯಮಾವಳಿ ರೂಪಿಸಿದೆ.

ಹೊಸ ನಂಬರ್ ಪ್ಲೇಟ್ನಲ್ಲಿ ವಾಹನದ ಸಂಪೂರ್ಣ ಮಾಹಿತಿ ಇರುತ್ತದೆ. ಪ್ರತಿಯೊಂದು ಮಾಹಿತಿಯೂ ಕೇಂದ್ರೀಯ ಡೆಟಾ ಬೇಸ್ನಲ್ಲಿ ಸಂಗ್ರಹವಾಗುತ್ತದೆ. ವಾಹನ ಕಳ್ಳತನವಾದರೆ ಈ ಮಾಹಿತಿಯನ್ನ ಬಳಸಿ ಆದಷ್ಟು ಬೇಗ ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ ಈ ನಂಬರ್ ಪ್ಲೇಟ್ ಅನ್ನು ನಕಲಿ ಮಾಡಲು ಸಾಧ್ಯವಿಲ್ಲವಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ Book HSRP ಕ್ಲಿಕ್ ಮಾಡಿ ಸಂಬಂಧಿಸಿದ ವಾಹನದ ವಿವರವನ್ನು ತುಂಬಬೇಕು. ಬಳಿಕ ತಮಗೆ ಬೇಕಾದ ಡೀಲರ್ಗಳ ಸ್ಥಳ ಆಯ್ಕೆ ಮಾಡಬೇಕು. ಮತ್ತು ಶುಲ್ಕವನ್ನು ಆನ್ಲೈನ್ನಲ್ಲೇ ಪಾವತಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ವೇಳೆ ವಾಹನ ಮಾಲಕರ ಮೊಬೈಲ್ಗೆ ಒಟಿಪಿ ಕಳುಹಿಸಲಾಗುತ್ತದೆ. ಅಲ್ಲದೆ ನಂಬರ್ ಪ್ಲೇಟ್ ಅಳವಡಿಸಲು ತಮಗೆ ಬೇಕಾದ ದಿನಾಂಕ ಮತ್ತು ಸಮಯ ಆಯ್ಕೆ ಮಾಡಬಹುದು. ಅರ್ಜಿದಾರರು ಯಾವುದೇ ವಾಹನ ತಯಾರಕ ಅಥವಾ ನಂಬರ್ ಪ್ಲೇಟ್ ಅಳವಡಿ ಸುವ ಡೀಲರ್ಗಳನ್ನು ಆಯ್ಕೆ ಮಾಡಬಹುದಾಗಿದೆ.

ನಮಗೆ ಎಚ್ಎಸ್ಆರ್ಪಿ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ. ಇತ್ತೀಚೆಗೆ ಪರಿಚಯದ ವ್ಯಕ್ತಿಯೊಬ್ಬರು ಹೇಳಿದ ಬಳಿಕ ವಿಷಯ ತಿಳಿಯಿತು. ಅಲ್ಲದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಮಗೆ ತಿಳಿದಿಲ್ಲ. ಇತರರ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕಿದೆ. ಹೀಗೆ ಅರ್ಜಿ ಸಲ್ಲಿಸಿದರೂ ಸದ್ಯಕ್ಕೆ ಅದರ ಅಳವಡಿಕೆಗೆ ದಿನಾಂಕ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿದರೆ ಉತ್ತಮ.

ನಾರಾಯಣ,

ದ್ವಿಚಕ್ರ ವಾಹನ ಸವಾರ


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News