91ರ ವೃದ್ಧೆಗೆ ಲೈಂಗಿಕ ಕಿರುಕುಳ: 14ರ ಬಾಲಕ ತಪ್ಪೊಪ್ಪಿಗೆ!
ಫ್ಲೋರಿಡಾ: ರಾತ್ರಿ ವೇಳೆ 91 ವರ್ಷದ ವೃದ್ಧೆಯ ಮನೆಗೆ ನುಗ್ಗಿ ಆಕೆಯನ್ನು ಥಳಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ 14 ವರ್ಷದ ಬಾಲಕ ತಪ್ಪೊಪ್ಪಿಗೆ ಮನವಿ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಜೆಸ್ಸಿ ಸ್ಟೋನ್ ಎಂಬ ಬಾಲಕ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಆರೋಪ ಎದುರಿಸುತ್ತಿದ್ದ. ಬಾಲಕನನ್ನು ಕಳೆದ ಜೂನ್ ನಲ್ಲಿ ಬಂಧಿಸಲಾಗಿತ್ತು ಎಂದು ಮರಿಯನ್ ಕೌಂಟಿ ಶ್ರಾಫ್ ಕಚೇರಿ ಹೇಳಿಕೆ ನೀಡಿದೆ. ತಮ್ಮ ಮನೆಯಲ್ಲಿ ಬಾಲಕ ಲೈಂಗಿಕ ಕಿರುಕುಳ ನೀಡಿದ ಬಗ್ಗೆ 91ರ ವೃದ್ಧೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು.
ತಾನು ಎಚ್ಚರಗೊಂಡಾಗ, 14 ವರ್ಷದ ಬಾಲಕ ಮನೆಯ ಒಳಕ್ಕೆ ನುಗ್ಗಿ ತನ್ನನ್ನು ಥಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಎಂದು ವೃದ್ಧೆ ದೂರು ನಿಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಪಕ್ಕದ ಮನೆಯವರು ಘಟನೆಯ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು ಎನ್ನಲಾಗಿದೆ. ಕಡು ಬಣ್ಣದ ಟಿ-ಷರ್ಟ್ ಮತ್ತು ಚಡ್ಡಿ ಧರಿಸಿದ್ದ ಬಾಲಕ ಈ ಪ್ರದೇಶದಲ್ಲಿ ಜಾಗಿಂಗ್ ಮಾಡುತ್ತಿದ್ದ ಎನ್ನುವುದು ಈ ವಿಡಿಯೊದಿಂದ ಕಂಡುಬಂದಿತ್ತು. ಆದರೆ ದೃಶ್ಯ ತುಣುಕಿನಲ್ಲಿರುವ ವ್ಯಕ್ತಿ ತಾನಲ್ಲ ಎಂದು ಬಾಲಕ ಹೇಳಿದ್ದ. ಆದರೆ ಡಿಎನ್ಎ ಪುರಾವೆಗಳ ಮೂಲಕ ವಿಧಿವಿಜ್ಞಾನ ಸಂಶೋಧಕರು ಜೆಸ್ಸಿ ಸ್ಟೋನ್ ಈ ಕೃತ್ಯ ಎಸಗಿದ್ದನ್ನು ದೃಢಪಡಿಸಿದ ಬಳಿಕ ಆತನನ್ನು ಬಂಧಿಸಲಾಗಿತ್ತು.
"ಸಂತ್ರಸ್ತೆಯ ಮನೆಗೆ ಬಲವಂತವಾಗಿ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ವೃದ್ಧೆಯ ಲಿವಿಂಗ್ ರೂಂ ಬಾಗಿಲಿನ ಮೂಲಕ ನುಗ್ಗಿ ಆಕೆಯ ಐಪ್ಯಾಡ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾಗಿ ತಿಳಿಸಿದ್ದ"
ಈ ಬಗೆಯ ದೌರ್ಜನ್ಯ ಕಲ್ಪನೆಗೂ ನಿಲುಕದ್ದು ಎಂದು ಶ್ರಾಫ್ ಬಿಲ್ಲಿ ವುಡ್ಸ್ ಹೇಳಿದ್ದಾರೆ. 91 ವರ್ಷದ ವೃದ್ಧೆ ಮೇಲೆ ಇಂಥ ಕೃತ್ಯ ಎಸಗಲಾಗುತ್ತದೆ ಎನ್ನುವುದು ಆಘಾತಕಾರಿ. ಇಷ್ಟು ಸಣ್ಣ ವಯಸ್ಸಿನಲ್ಲಿ ಅಂಥ ಕೃತ್ಯ ಎಸಗಿರುವುದು ಆಘಾತ ತಂದಿದೆ. ಇದಕ್ಕೆ ಆತನನ್ನು ಹೊಣೆ ಮಾಡಬೇಕು ಎನ್ನುವುದು ನನ್ನ ದೃಢ ಅಭಿಪ್ರಾಯವಾದರೂ, ಒಬ್ಬ ತಂದೆಯಾಗಿ ಆತನ ಕುಟುಂಬದ ಬಗ್ಗೆ ಅನುಕಂಪವಿದೆ. ಮತ್ತೆ ಇಂಥ ಕೃತ್ಯಗಳನ್ನು ಎಸಗದಂತೆ ತಡೆಯಲು ಈ ಬಂಧನ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದರು.