ಇರಾಕ್: ಸ್ವೀಡನ್ ದೂತಾವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Update: 2023-07-20 16:54 GMT

ಬಗ್ದಾದ್: ಸ್ವೀಡನ್‍ನಲ್ಲಿ ಕುರಾನ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಇರಾಕ್ ರಾಜಧಾನಿ ಬಗ್ದಾದ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ವೀಡನ್‍ನ ದೂತಾವಾಸಕ್ಕೆ ಬೆಂಕಿ ಹಚ್ಚಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸ್ವೀಡನ್‍ನಲ್ಲಿ ನೆಲೆಸಿರುವ ಇರಾಕ್ ನಿರಾಶ್ರಿತ ಸಲ್ವಾನ್ ಮೊಮಿಕ ಎಂಬಾತ ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿರುವ ಇರಾಕ್ ರಾಯಭಾರ ಕಚೇರಿಯೆದುರು ತನ್ನ ಬೆಂಬಲಿಗರ ಜತೆಸೇರಿ ಕುರಾನ್ ಹಾಗೂ ಇರಾಕ್ ಧ್ವಜಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಸ್ವೀಡನ್ ಸರಕಾರ ಅನುಮತಿ ನೀಡಿದೆ. ಇರಾಕ್ ಸರಕಾರದ ವಿರುದ್ಧ ಅಸಮಾಧಾನಗೊಂಡಿರುವ ಮೊಮಿಕ ಜೂನ್ 28ರಂದು ಬೆಂಬಲಿಗರ ಜತೆಸೇರಿ ಸ್ಟಾಕ್‍ಹೋಮ್‍ನಲ್ಲಿ ಕುರಾನ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.

ಗುರುವಾರ ಬಗ್ದಾದ್‍ನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಜಲಫಿರಂಗಿ ಹಾಗೂ ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು. ಕುರಾನ್‍ಗೆ ಬೆಂಕಿ ಹಚ್ಚುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಇರಾಕ್ ಮತ್ತು ಸ್ವೀಡನ್ ಸರಕಾರ ಇಂತಹ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಗ್ದಾದ್‍ನಲ್ಲಿನ ದೂತಾವಾಸದ ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ವೀಡನ್‍ನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ದೂತಾವಾಸಕ್ಕೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಖಂಡಿಸಿರುವ ಇರಾಕ್‍ನ ವಿದೇಶಾಂಗ ಸಚಿವಾಲಯ, ತಪ್ಪಿತಸ್ತರನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News