ಜಗತ್ತಿಗೆ ಇನ್ನಷ್ಟು ತೀವ್ರ ಉಷ್ಣಮಾರುತದ ಅಪಾಯ ಎದುರಾಗಲಿದೆ: ವಿಶ್ವಸಂಸ್ಥೆ ಎಚ್ಚರಿಕೆ
World at risk of more extreme heat waves: UN warns
ಜಿನೆವಾ: ಉತ್ತರ ಗೋಳಾರ್ಧದಾದ್ಯಂತ ದೇಶಗಳು ಬಿಸಿಗಾಳಿಯ ಹೊಡೆತಕ್ಕೆ ತತ್ತರಿಸುತ್ತಿರುವಂತೆಯೇ, ಇನ್ನಷ್ಟು ತೀವ್ರ ಉಷ್ಣಮಾರುತದ ಪ್ರಹಾರಕ್ಕೆ ಜಾಗತಿಕ ಸಮುದಾಯ ಸಿದ್ಧವಾಗಬೇಕಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಸಿದೆ.
ಉತ್ತರ ಅಮೆರಿಕಾದಿಂದ ಯುರೋಪ್ ಮತ್ತು ಏಶ್ಯಾ ಖಂಡದವರೆಗೂ ಸುಡುಬಿಸಿಲಿನ ತಾಪ ಹೆಚ್ಚಲಿದ್ದು ಜನತೆ ಸಾಧ್ಯವಾದಷ್ಟು ನೀರು ಕುಡಿಯುವ ಜತೆಗೆ ಸುಡು ಬಿಸಿಲಿನಿಂದ ದೂರ ಇರುವಂತೆ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಉಷ್ಣಮಾರುತದ ತಾಪ ಮತ್ತಷ್ಟು ತೀವ್ರಗೊಳ್ಳಲಿದ್ದು ಜನತೆ ಇದಕ್ಕೆ ಸನ್ನದ್ಧರಾಗಬೇಕಿದೆ.
ಹೆಚ್ಚುತ್ತಿರುವ ನಗರೀಕರಣ, ತೀವ್ರ ತಾಪಮಾನದ ಸಮಸ್ಯೆಯಿಂದ ಅನಾರೋಗ್ಯದ ಅಪಾಯ ತ್ವರಿತ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾರೆ, ಪ್ರತೀ 2ರಿಂದ 7 ವರ್ಷದ ಅವಧಿಯಲ್ಲಿ ಸಂಭವಿಸುವ ಹವಾಮಾನ ವೈಪರೀತ್ಯವಾದ ಎಲ್‍ನಿನೊ ಮತ್ತಷ್ಟು ಬೇಗ ಮತ್ತು ತೀವ್ರ ರೂಪದಲ್ಲಿ ಮರುಕಳಿಸಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯ ಹಿರಿಯ ಸಲಹೆಗಾರ ಜಾನ್ ನೈರ್ನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಉತ್ತರ ಗೋಳಾರ್ಧದಲ್ಲಿ 1980ರ ಬಳಿಕ ಬಿಸಿಗಾಳಿಯ ಪ್ರಮಾಣ 6 ಪಟ್ಟು ಹೆಚ್ಚಿದೆ. ಈ ಪ್ರವೃತ್ತಿ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಉಷ್ಣಮಾರುತವು ಮಾನವರ ಆರೋಗ್ಯ ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತಿದೆ. ಹಗಲಿನ ತಾಪಮಾನದಲ್ಲಿ ಮಾತ್ರವಲ್ಲ ರಾತ್ರಿಯ ತಾಪಮಾನದಲ್ಲೂ ಭಾರೀ ಹೆಚ್ಚಳವಾಗುತ್ತಿದೆ. ಹಗಲು-ರಾತ್ರಿಯ ತೀವ್ರ ತಾಪಮಾನವು ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
ಯಾಕೆಂದರೆ ನಿರಂತರ ಉಷ್ಣತೆಯಿಂದ ಚೇತರಿಸಿಕೊಳ್ಳಲು ಮಾನವ ದೇಹಕ್ಕೆ ಅವಕಾಶ ದೊರಕುವುದಿಲ್ಲ. ಇದು ಹೃದಯಾಘಾತ ಮತ್ತು ಸಾವಿ ನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. 2021ರಲ್ಲಿ ಇಟಲಿಯ ಸಿಸಿಲಿಯಲ್ಲಿ ದಾಖಲಾದ 48.8 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದುವರೆಗೆ ಯುರೋಪ್‍ನಲ್ಲಿನ ದಾಖಲೆ ತಾಪಮಾನವಾಗಿದ್ದು ಈ ದಾಖಲೆಯೂ ಮುರಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
ಮಾನವ ಪ್ರೇರಿತ ಹವಾಮಾನ ಬದಲಾವಣೆಯು ಶಾಖದ ಅಲೆಗಳನ್ನು ಉಲ್ಬಣಗೊಳಿಸುತ್ತದೆ, ಅಧಿಕ ತಾಪಮಾನ ಮತ್ತು ಬಿಸಿ ಹವಾಮಾನ ವ್ಯವಸ್ಥೆ ದೀರ್ಘ ಕಾಲದವರೆಗೆ ಉಳಿದುಕೊಳ್ಳಲು ಕಾರಣವಾಗುತ್ತದೆ. ಇಂಗಾಲ ಇಂಧನಗಳ ಬಳಕೆ ನಿಲ್ಲಿಸಿ ಎಲ್ಲಾ ಕ್ಷೇತ್ರಗಳನ್ನೂ ವಿದ್ಯುನ್ಮಾನಗೊಳಿಸುವುದು ಇದಕ್ಕೆ ಇರುವ ಸರಳ ಪರಿಹಾರವಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.