ಪೇಟೆಂಟ್ ಕಾಯ್ದೆಗೆ ತಿದ್ದುಪಡಿ: ಜನಾರೋಗ್ಯದ ಮರಣಶಾಸನ

ಭಾರತೀಯ ಪೇಟೆಂಟ್ ವ್ಯವಸ್ಥೆ 2005ರಲ್ಲಿ ಜಾರಿಗೊಂಡ ಬಳಿಕ ಹಲವು ತಿದ್ದುಪಡಿಗಳನ್ನು ಕಂಡಿದೆ. 2023ರ ಕರಡು ಅತ್ಯಂತ ಪ್ರಮುಖ ತಿದ್ದುಪಡಿ ಆಗಿರಲಿದೆ. ಕಾಯ್ದೆಯಾದಲ್ಲಿ ಭಾರತದ ಔಷಧಗಳನ್ನು ಆಧರಿಸಿರುವ ದಕ್ಷಿಣ ದೇಶಗಳ ಬಡ ರೋಗಿಗಳು ಹಾಗೂ ಜನೆರಿಕ್ ಔಷಧ ಉತ್ಪಾದಕ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕುತ್ತವೆ.

Update: 2023-10-27 06:27 GMT

ಪೇಟೆಂಟ್‌ಗಳು ಸೃಜನಶೀಲತೆ ಮತ್ತು ಅನ್ವೇಷಣೆಯೊಂದಿಗೆ ತಳಕು ಹಾಕಿಕೊಂಡಿವೆ. ಸಾರ್ವಭೌಮ ರಾಜರು ವಿಶೇಷ ಸೌಲಭ್ಯ, ಹಕ್ಕು ಮತ್ತು ಪದವಿ ಎಂದು ನೀಡುತ್ತಿದ್ದ ಪತ್ರಗಳೇ ಲೆಟರ್ಸ್ ಪೇಟೆಂಟ್. ಯುರೋಪಿನಲ್ಲಿ ಆರನೇ ಶತಮಾನದಲ್ಲಿ ಚಕ್ರವರ್ತಿ ವಿದೇಶಿ ನೆಲ ವಶಪಡಿಸಿಕೊಂಡವರಿಗೆ ಇಲ್ಲವೇ ಶೋಧಿಸಿದವರಿಗೆ ಪತ್ರ, ಸನ್ನದು ನೀಡುತ್ತಿದ್ದ. ಇದಕ್ಕೊಂದು ಉದಾಹರಣೆ, ಕ್ರಿಸ್ಟೋಫರ್ ಕೊಲಂಬಸ್‌ಗೆ ನೀಡಿದ ಸನ್ನದು. ಇದರಲ್ಲಿ ‘ಶೋಧನೆ’, ‘ವಿಜಯ’ ಪದಗಳು ಏಳು ಬಾರಿ ಬಳಕೆಯಾಗಿದ್ದವು. ಇಂಡಿಯಾಕ್ಕೆ ಹೊರಟಿದ್ದ ಕೊಲಂಬಸ್ ದಾರಿ ತಪ್ಪಿ ಅಮೆರಿಕ ತಲುಪಿದ. ಹತ್ಯಾಕಾಂಡ ನಡೆಸಿ, ಮೂಲವಾಸಿಗಳ ನೆಲವನ್ನು ಸ್ವಾಧೀನಪಡಿಸಿಕೊಂಡ.

ಪೇಟೆಂಟ್‌ಗಳು ವಸಾಹತೀಕರಣದೊಂದಿಗೆ ತಳಕು ಹಾಕಿಕೊಂಡಿವೆ. ಪೇಟೆಂಟ್ ಎನ್ನುವುದು ಉತ್ಪನ್ನ ಇಲ್ಲವೇ ಉತ್ಪಾದನಾ ವಿಧಾನವೊಂದರ ಅನ್ವೇಷಕನಿಗೆ ಕೊಡಮಾಡುವ ಹಕ್ಕು. ಬೌದ್ಧಿಕ ಆಸ್ತಿಯಾಗಿ ಪೇಟೆಂಟ್ ನೀಡುವಿಕೆಯನ್ನು ಆರಂಭಿಸಿದ್ದು ಇಟಲಿ. ಪೇಟೆಂಟ್ ಹೊಂದಿದವ ರಾಜಧನ ನೀಡುವವನಿಗೆ ತನ್ನ ಉತ್ಪನ್ನ/ಶೋಧನೆಯನ್ನು ಬಳಸಿಕೊಳ್ಳಲು ಪರವಾನಿಗೆ ನೀಡುವ ಪದ್ಧತಿಗೆ ಮುನ್ನುಡಿ ಬರೆದಿದ್ದು ವೆನೇಷಿಯನ್ ಸಂಸತ್ತು. ಮಾರ್ಚ್ 1474ರಲ್ಲಿ ಮೊದಲ ಪೇಟೆಂಟ್ ಕಾಯ್ದೆ ಜಾರಿಗೊಂಡಿತು. ಇಂಗ್ಲೆಂಡ್‌ನಲ್ಲಿ ಅನ್ವೇಷಣಾ ಪೇಟೆಂಟ್ ಮತ್ತು ಆಮದು ಪೇಟೆಂಟ್ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗುರುತಿಸಲ್ಪಟ್ಟಿದ್ದು 17ನೇ ಶತಮಾನದಲ್ಲಿ.

ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ 1859ರಲ್ಲಿ ಮೊದಲ ಪೇಟೆಂಟ್ ಕಾಯ್ದೆಯನ್ನು ಪರಿಚಯಿಸಿತು; 1911ರಲ್ಲಿ ಮೊದಲ ಕಾಯ್ದೆ ಜಾರಿಗೆ ಬಂದಿತು. ಇದಕ್ಕೆ 1930 ಮತ್ತು 1945ರಲ್ಲಿ ತಿದ್ದುಪಡಿ ತರಲಾಯಿತು. ಸ್ವಾತಂತ್ರ್ಯಾನಂತರ ಪೇಟೆಂಟ್ ಕಾಯ್ದೆಯನ್ನು ಬದಲಿಸಲು ಬಕ್ಷಿ ಟೇಕ್‌ಚಂದ್ ಸಮಿತಿಯನ್ನು ರಚಿಸಲಾಯಿತು. 1950ರಲ್ಲಿ ಸಂಸತ್ತಿನಲ್ಲಿ ಪೇಟೆಂಟ್ ಮತ್ತು ವಿನ್ಯಾಸಗಳು(ತಿದ್ದುಪಡಿ)ಕಾಯ್ದೆ ಮಂಡನೆಯಾಯಿತು. ಎಪ್ರಿಲ್ 1957ರಲ್ಲಿ ನೇಮಕಗೊಂಡ ಎನ್.ರಾಜಗೋಪಾಲ್ ಅಯ್ಯಂಗಾರ್ ನೇತೃತ್ವದ ಸಮಿತಿ, 1959ರಲ್ಲಿ ವರದಿ ಸಲ್ಲಿಸಿತು. 1970ರಲ್ಲಿ ಹೊಸ ಪೇಟೆಂಟ್ ಕಾಯ್ದೆ ಜಾರಿಗೊಂಡಿತು. 1999ರಲ್ಲಿ ಇನ್ನೊಮ್ಮೆ ತಿದ್ದುಪಡಿ ತಂದು, ಮೇ 20, 2003ರಿಂದ ಜಾರಿಗೊಳಿಸಲಾಯಿತು. ಈ ಕಾಯ್ದೆಯು ಉತ್ಪನ್ನದ ಬದಲು ತಯಾರಿಕೆ ವಿಧಾನಕ್ಕೆ ಪೇಟೆಂಟ್ ನೀಡುತ್ತದೆ. ಅಂದರೆ, ಔಷಧಗಳನ್ನು ಪೇಟೆಂಟ್ ಆದ ವಿಧಾನ ಹೊರತುಪಡಿಸಿ ಬೇರೆ ವಿಧಾನದಲ್ಲಿ ಉತ್ಪಾದಿಸಲು ಅನುಮತಿ ನೀಡುತ್ತದೆ. ದೇಶ ಔಷಧ ತಯಾರಿಕೆ ಕ್ಷೇತ್ರದಲ್ಲಿ ದೊಡ್ಡ ಶಕ್ತಿ ಎನ್ನಿಸಿಕೊಳ್ಳಲು ಈ ಕಲಮು ಕಾರಣ.

ಈಗ 2023ಕ್ಕೆ ಬರೋಣ. ಬಹು ಔಷಧ ಪ್ರತಿರೋಧ ಇರುವ ಕ್ಷಯ(ಎಂಡಿಆರ್-ಟಿಬಿ)ಕ್ಕೆ ನೀಡುವ ಸರ್ಟುರೋ(ಬೆಡಾಕ್ವಿಲಿನ್‌ನ ಬ್ರ್ಯಾಂಡ್ ಹೆಸರು) ಪೇಟೆಂಟನ್ನು ಕಡಿಮೆ ಮತ್ತು ಮಧ್ಯಮ ಆದಾಯದ 134 ದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಮೂಲದ ಜಾನ್‌ಸನ್ ಆ್ಯಂಡ್ ಜಾನ್‌ಸನ್ ಇತ್ತೀಚೆಗೆ ಹೇಳಿಕೊಂಡಿದೆ. ಅಮೆರಿಕ ಎಫ್‌ಡಿಎಯಿಂದ ಡಿಸೆಂಬರ್ 2012ರಲ್ಲಿ ಅಂಗೀಕರಿಸ್ಪಟ್ಟ ಬೆಡಾಕ್ವಿಲಿನ್, ಕ್ಷಯಕ್ಕೆ ಬಳಸುವ ಸಾಂಪ್ರದಾಯಿಕ ಔಷಧಗಳಿಗೆ ಹೋಲಿಸಿದರೆ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಅಡ್ಡ ಪರಿಣಾಮ ಉಂಟುಮಾಡುತ್ತದೆ. ಜೆ ಆ್ಯಂಡ್ ಜೆ ನಿರ್ಧಾರದಿಂದ ಬೆಡಾಕ್ವಿಲಿನ್‌ನ ಜನೆರಿಕ್ ರೂಪಗಳು ಕೈಗೆಟಕುವ ದರದಲ್ಲಿ ಜನರಿಗೆ ಲಭ್ಯವಾಗಲಿವೆ. ಇದು ಆರೋಗ್ಯ ಕಾರ್ಯಕರ್ತರು, ನಾಗರಿಕ ಸಮಾಜ ಹಾಗೂ ಜನಾರೋಗ್ಯದ ಬಗ್ಗೆ ಕಾಳಜಿ ಇರುವ ದೇಶಗಳ ಪ್ರಯತ್ನದ ಫಲ ಎಂದು ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್‌ನ ಭಾಗವಾದ ಅಕ್ಸೆಸ್ ಕ್ಯಾಂಪೇನ್ ಹೇಳಿದೆ. ಲ್ಯೂಪಿನ್, ನಾಟ್ಕೋ ಮತ್ತು ಮ್ಯಾಕ್‌ಲಿಯಾಡ್ ಬೆಡಾಕ್ವಿನ್‌ನ ಜನೆರಿಕ್ ಆವೃತ್ತಿಯನ್ನು ಉತ್ಪಾದಿಸಲು ತಯಾರಿ ನಡೆಸಿವೆ.

ಜೆ ಆಂಡ್ ಜೆ ಇಂಥ ದಾನಶೂರತ್ವ ಪ್ರದರ್ಶಿಸಲು ಒತ್ತಡ ಕಾರಣ. ಭಾರತದ ಪೇಟೆಂಟ್ ಕಚೇರಿ ಮಾರ್ಚ್ 2023ರಲ್ಲಿ ಬೆಡಾಕ್ವಿಲಿನ್‌ನ ಲವಣ (ಫ್ಯುಮರೇಟ್)ದ ಸೃಷ್ಟಿ ಅನ್ವೇಷಣಾತ್ಮಕ ಕ್ರಿಯೆ ಆಗುವುದಿಲ್ಲವಾದ್ದರಿಂದ, ಪೇಟೆಂಟ್ ನೀಡಲು ಆಗುವುದಿಲ್ಲ ಎಂದು ಜೆ ಆ್ಯಂಡ್ ಜೆ ಅರ್ಜಿಯನ್ನು ವಜಾಗೊಳಿಸಿತು. ಅಪ್ರಧಾನ(ಸೆಕೆಂಡರಿ)ಪೇಟೆಂಟನ್ನು ನಿರಾಕರಿಸಿತು. ದಕ್ಷಿಣ ಆಫ್ರಿಕಾದ ಸ್ಪರ್ಧಾತ್ಮಕ ಆಯೋಗವು ಬೆಡಾಕ್ವಿಲಿನ್‌ಗೆ ಹೆಚ್ಚು ದರ ವಿಧಿಸಿರುವುದರ ಬಗ್ಗೆ ಮತ್ತು ದೇಶಕ್ಕೆ ಅಗ್ಗದ ಜನೆರಿಕ್ ಔಷಧಗಳು ಬರುವುದನ್ನು ತಡೆಯಲು ಪೇಟೆಂಟನ್ನು 2027ರವರೆಗೆ ವಿಸ್ತರಿಸಿರುವ ಕುರಿತು ತನಿಖೆ ಆರಂಭಿಸಿರುವುದು ಕಂಪೆನಿ ಮೇಲೆ ಒತ್ತಡ ಹೇರಿದೆ. ಉಕ್ರೇನ್ ಮತ್ತು ಬೆಲಾರುಸ್ ಕೂಡ ತಮ್ಮ ದೇಶದಲ್ಲಿ ಅಪ್ರಧಾನ ಪೇಟೆಂಟ್‌ನ್ನು ಅನ್ವಯಿಸಬಾರದು ಎಂದು ಒತ್ತಾಯಿಸಿವೆ. ಇದೆಲ್ಲದರಿಂದ ಜೆ ಆ್ಯಂಡ್ ಜೆ ಒಂದು ಹೆಜ್ಜೆ ಹಿಂದಿರಿಸಿದೆ. ಬಹುಔಷಧ ಪ್ರತಿರೋಧ ಕ್ಷಯದ ಇನ್ನೊಂದು ಪ್ರಮುಖ ಔಷಧ ಡೆಲಾಮಿನಿಡ್‌ನ ಅಪ್ರಧಾನ ಪೇಟೆಂಟನ್ನು ಸಣ್ಣ-ಮಧ್ಯಮ ದೇಶಗಳಿಗೆ ಅನ್ವಯಿಸಬಾರದು ಎಂದು ಜಪಾನಿನ ಬೃಹತ್ ಸಂಸ್ಥೆ ಒಟ್ಸುಕ ಮೇಲೆ ಒತ್ತಡ ಹೆಚ್ಚುತ್ತಿದೆ. ಭಾರತ ಮತ್ತು ಇನ್ನಿತರ ದೇಶಗಳಲ್ಲಿ ಡೆಲಾಮಿನಿಡ್‌ನ ಪೇಟೆಂಟ್ ಅವಧಿ ಇನ್ನೇನು ಅಂತ್ಯಗೊಳ್ಳಲಿರುವುದು ಇದಕ್ಕೆ ಕಾರಣ. ಮಕ್ಕಳ ಕ್ಷಯದ ಉಪಚಾರದಲ್ಲಿ ಡೆಲಾಮಿನಿಡ್ ಅನ್ನು ಬೆಡಾಕ್ವಿಲಿನ್ ಜೊತೆಗೆ ನೀಡಲಾಗುತ್ತದೆ. ಸ್ವದೇಶಿ ಕಂಪೆನಿಗಳಾದ ಲ್ಯೂಪಿನ್, ನಾಟ್ಕೋ ಮತ್ತು ಮ್ಯಾಕ್‌ಲಿಯಾಡ್ ಮುಂತಾದವು ಬೆಡಾಕ್ವಿಲಿನ್‌ನ ಜನೆರಿಕ್ ಆವೃತ್ತಿಯನ್ನು ಉತ್ಪಾದಿಸಲು ತಯಾರಿ ನಡೆಸಿವೆ. ಆದರೆ, ಪೇಟೆಂಟ್ ತಿದ್ದುಪಡಿ ಇಂಥ ಪ್ರಯತ್ನಗಳಿಗೆ ಅಡ್ಡಗಾಲು ಹಾಕಲಿದೆ.

ಮತ್ತೊಮ್ಮೆ ತಿದ್ದುಪಡಿ

ವಾಣಿಜ್ಯ ಮತ್ತು ಉದ್ಯಮ ಮಂತ್ರಾಲಯದಡಿ ಬರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಡಿಪಿಐಐಟಿ) ಆಗಸ್ಟ್ 23ರಂದು ಪೇಟೆಂಟ್ ತಿದ್ದುಪಡಿ ನಿಯಮ 2023 ಕರಡು ಸಿದ್ಧಗೊಳಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದೆ. ಈ ತಿದ್ದುಪಡಿ ಬಡ ದೇಶಗಳ ರೋಗಿಗಳು ಹಾಗೂ ದೇಶಿ ಔಷಧ ಉದ್ಯಮಕ್ಕೆ ಕುಠಾರಪ್ರಾಯ ಆಗಲಿದೆ.

ಮೊದಲಿಗೆ, ಅನುಮತಿಪೂರ್ವ ವಿರೋಧ ಅರ್ಜಿಗೆ ಶುಲ್ಕ ನಿಗದಿ. ಈ ಹಿಂದೆ ಔಷಧ ಕಂಪೆನಿ ಸಲ್ಲಿಸಿದ ಪೇಟೆಂಟ್ ಅರ್ಜಿಯಲ್ಲಿ ಯಾವುದೇ ಲೋಪ-ವ್ಯತ್ಯಯ ಕಂಡುಬಂದಲ್ಲಿ ಯಾರು ಬೇಕಾದರೂ ಆ ಬಗ್ಗೆ ಪೇಟೆಂಟ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಬಹುದಿತ್ತು. ಆದರೆ, ಪ್ರಸ್ತಾವಿತ ತಿದ್ದುಪಡಿ ಪ್ರಕಾರ, 40,000 ರೂ. ಶುಲ್ಕ ವಿಧಿಸಬಹುದು. ಇದು ಪೇಟೆಂಟ್ ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕೆಂದುಕೊಂಡವರಿಗೆ ದುಬಾರಿಯಾಗಲಿದೆ. ಇಂಥ ಅರ್ಜಿ ಅಗತ್ಯವಿತ್ತೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪೇಟೆಂಟ್ ನಿಯಂತ್ರಕರಿಗೆ ನೀಡಲಾಗಿದೆ.

ಇದು ಭಾರತದ ಪೇಟೆಂಟ್ ಕಾಯ್ದೆಗೆ ತರುತ್ತಿರುವ ಪ್ರಮುಖ ತಿದ್ದುಪಡಿ ಆಗಲಿದೆ. ಚಾಲ್ತಿಯಲ್ಲಿರುವ ಪೇಟೆಂಟ್ ಕಾಯ್ದೆಯು ಯಾವುದೇ ವ್ಯಕ್ತಿಗೆ ಮಂಜೂರುಪೂರ್ವ ವಿರೋಧ ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ಅದಕ್ಕೆ ಔಷಧ ನಿಯಂತ್ರಕನ ಅನುಮತಿ ಅಗತ್ಯವಿಲ್ಲ. ಮಂಜೂರುಪೂರ್ವ ವಿರೋಧ ಭಾರತದ ಪೇಟೆಂಟ್ ಕಾಯ್ದೆಯ ವೈಶಿಷ್ಟ್ಯ. ಇದಕ್ಕೆ ಮೊದಲಿನಿಂದಲೂ ಔಷಧ ತಯಾರಕರ ವಿರೋಧ ಇದೆ. ಅನುಮತಿಪೂರ್ವ ವಿರೋಧ ಅರ್ಜಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮುಖ್ಯ ಅಂಶವಾಗಿದ್ದು, ಪೇಟೆಂಟ್‌ಗಳ ಎವರ್‌ಗ್ರೀನಿಂಗ್(ಸೂತ್ರದಲ್ಲಿ ಸಣ್ಣ ಬದಲಾವಣೆ ಮಾಡಿ ಅಥವಾ ಬೇರೊಂದು ಸಣ್ಣ ಔಷಧ ಘಟಕವನ್ನು ಸೇರಿಸುವ ಮೂಲಕ ಪೇಟೆಂಟ್‌ಗಳ ಜೀವಿತಾವಧಿಯನ್ನು ವಿಸ್ತರಿಸುವುದು) ಮತ್ತು ಏಕಸ್ವಾಮ್ಯವನ್ನು ತಡೆಯುತ್ತದೆ. ಗುಣಮಟ್ಟ ಖಾತ್ರಿ ಇರುವ ಹಾಗೂ ಕೈಗೆಟಕುವ ದರದಲ್ಲಿ ಔಷಧ ಲಭ್ಯವಾಗಲು ಇರುವ ಖಚಿತ ಮಾರ್ಗ ಅದು. ತಿದ್ದುಪಡಿ ಕರಡಿನ ಪ್ರಕಾರ, ಮಂಜೂರುಪೂರ್ವ ವಿರೋಧ ಅರ್ಜಿ ಸಮರ್ಥನೀಯವೇ ಎಂಬುದನ್ನು ಔಷಧ ನಿಯಂತ್ರಕರು ನಿರ್ಧರಿಸುತ್ತಾರೆ. ಅರ್ಜಿ ಸಮರ್ಥನೀಯವಲ್ಲ ಎಂದು ಔಷಧ ನಿಯಂತ್ರಕರು ಹೇಗೆ ಮತ್ತು ಯಾವ ಆಧಾರದ ಮೇಲೆ ನಿರ್ಧರಿಸುತ್ತಾರೆ? ಈ ಬಗ್ಗೆ ಯಾವುದೇ ಮಾರ್ಗದರ್ಶಿ ಸೂತ್ರಗಳಿಲ್ಲದೆ ಇರುವುದರಿಂದ, ಇನ್ನಷ್ಟು ಗೊಂದಲಕ್ಕೆ ಕಾರಣವಾಗಲಿದೆ. ಮಂಜೂರುಪೂರ್ವ ವಿರೋಧವು ಸಮರ್ಥನೀಯವಾಗಿದ್ದರೆ, ಅದಕ್ಕೆ ತಾರ್ಕಿಕ ಆಧಾರ ಇರುತ್ತದೆ. ಔಷಧ ನಿಯಂತ್ರಕರು ಸ್ವೇಚ್ಛಾನುಸಾರ ನಿರ್ಧರಿಸುತ್ತಾರೆ. ಅದು ಸರಿಯಲ್ಲ.

ಎರಡನೆಯದಾಗಿ, ಈವರೆಗೆ ಔಷಧ ಉತ್ಪಾದಕ ಸಂಸ್ಥೆಗಳು ಔಷಧದಿಂದ ಬಂದ ಆದಾಯ ಸೇರಿದಂತೆ ಪೇಟೆಂಟ್ ಹೇಗೆ ಬಳಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತೀ ವರ್ಷ ನೀಡಬೇಕಿತ್ತು. ಪೇಟೆಂಟ್ ಪಡೆದವರು ಅದನ್ನು ಬಳಸದೆ ಇದ್ದಲ್ಲಿ, ಪೇಟೆಂಟನ್ನು ವಾಪಸ್ ಪಡೆಯಬಹುದು(ಕಡ್ಡಾಯ ಪರವಾನಿಗೆ-ಕಂಪಲ್ಸರಿ ಲೈಸೆನ್ಸಿಂಗ್-ಸಿಎಲ್). ಆದರೆ, ತಿದ್ದುಪಡಿ ಪ್ರಕಾರ, ಮಾಹಿತಿ ನೀಡುವ ಅವಧಿಯನ್ನು 3 ವರ್ಷಕ್ಕೆ ವಿಸ್ತರಿಸಲಾಗಿದೆ. ಇದರಿಂದ ಪೇಟೆಂಟನ್ನು ಪ್ರಶ್ನಿಸಲು ಮಾಹಿತಿಯ ಕೊರತೆ ಉಂಟಾಗಲಿದೆ. ಉದಾಹರಣೆಗೆ, ಜಪಾನಿನ ಒಟ್ಸುಕ ಬಳಿ ವಿಶ್ವ ಸಂಸ್ಥೆ ಅಂಗೀಕರಿಸಿದ ಕ್ಷಯರೋಗ ಔಷಧ ಡೆಲಾಮಿನಿಡ್‌ನ ಆರು ಪೇಟೆಂಟ್ ಇದೆ. ಕಂಪೆನಿಯ ಮಾಹಿತಿಯಂತೆ, ಫೆಬ್ರವರಿ 2016ರಿಂದ ಔಷಧ ಉತ್ಪಾದಿಸಿಲ್ಲ. ಇದನ್ನು ಬಳಸಿಕೊಂಡು ಕಡ್ಡಾಯ ಪರವಾನಿಗೆ ಪಡೆದುಕೊಳ್ಳಬಹುದು. ಪೇಟೆಂಟ್ ಬಗೆಗಿನ ಸಕಾಲಿಕ ಮಾಹಿತಿಗಳು ಔಷಧ ಕೈಗೆಟಕುವಂತೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಿವೆ. ಒಂದುವೇಳೆ ತಿದ್ದುಪಡಿಯನ್ವಯ ಮಾಹಿತಿ ನೀಡುವ ಅವಧಿಯನ್ನು 3 ವರ್ಷಕ್ಕೆ ಹೆಚ್ಚಿಸಿದರೆ, ಪೇಟೆಂಟ್ ವಿರೋಧಿಸಲು ಗ್ರಾಹಕ ಗುಂಪುಗಳಿಗೆ ಅಗತ್ಯ ಮಾಹಿತಿ ಸಿಗುವುದಿಲ್ಲ.

ಮೂರನೆಯದಾಗಿ, ಔಷಧ ಉತ್ಪಾದಕ ಕಂಪೆನಿಗಳು ಸಲ್ಲಿಸಿದ ವಿದೇಶಿ ಪೇಟೆಂಟ್ ಅರ್ಜಿಗಳು ಮತ್ತು ಅವುಗಳ ಶಾಸನಾತ್ಮಕ ಸ್ಥಾನಮಾನ ಕುರಿತ ಮಾಹಿತಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ದೇಶಿ ಪೇಟೆಂಟ್ ಅಧಿಕಾರಿಗಳಿಗೆ ನೀಡಬೇಕು. ಇದು ಪಾರದರ್ಶಕತೆ ಹಾಗೂ ಉತ್ತರದಾಯಿತ್ವಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ, ತಿದ್ದುಪಡಿ ಕರಡಿನ ಪ್ರಕಾರ, ಮೊದಲ ಪರೀಕ್ಷಾ ವರದಿ(ಎಫ್‌ಇಆರ್) ನೀಡಿದ 2 ತಿಂಗಳೊಳಗೆ ಹೇಳಿಕೆಯೊಂದನ್ನು ಸಲ್ಲಿಸಿದರೆ ಸಾಕು. ಉದಾಹರಣೆಗೆ, ಬೆಡಾಕ್ವಿಲಿನ್‌ನ ಪೇಟೆಂಟ್ ಬ್ರೆಝಿಲ್ ಮತ್ತು ಅರ್ಜೆಂಟೀನಾದಲ್ಲಿ ತಿರಸ್ಕೃತವಾಗಿದೆ. ಆದರೆ, ಈ ಅಂಶ ಬಹಿರಂಗಗೊಂಡಿದ್ದು ರೋಗಿಗಳ ಗುಂಪು ಅನುಮತಿಪೂರ್ವ ವಿರೋಧ ಅರ್ಜಿ ಸಲ್ಲಿಸಿದ ಬಳಿಕವಷ್ಟೇ. ಪೇಟೆಂಟ್ ಕುರಿತ ಮಾಹಿತಿಗಳು ಅಪಾರದರ್ಶಕವಾಗಿದ್ದರೆ ಮತ್ತು ಲಭ್ಯವಾಗದಿದ್ದರೆ, ಅನುಪಯುಕ್ತ ಔಷಧಕ್ಕೆ ಪೇಟೆಂಟ್ ಸಿಗುವ ಸಾಧ್ಯತೆ ಇರುತ್ತದೆ.

ಪೊಳ್ಳು ಸಬೂಬು

ಪೇಟೆಂಟ್ ಕಚೇರಿ ಮೇಲಿನ ಕಾರ್ಯಭಾರ ಕಡಿಮೆ ಮಾಡಲು ತಿದ್ದುಪಡಿ ತರಲಾಗುತ್ತಿದೆ ಎಂದು ಸರಕಾರ ಹೇಳಿಕೊಂಡಿದೆ. 2022ರಲ್ಲಿ ದೇಶದಲ್ಲಿ 66,400 ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ದೊಡ್ಡ ಸಂಖ್ಯೆ ಎನ್ನುವುದು ನಿಜ. ಆದರೆ, ಮೇಲ್ನೋಟಕ್ಕೆ ತಿದ್ದುಪಡಿಗಳು ಉದ್ಯಮಿಗಳ ಕಿಸೆ ತುಂಬಿಸಲು ರಚನೆಯಾದಂತಿವೆ. ಭಾರೀ ಔಷಧ ಕಂಪೆನಿಗಳು ಪೇಟೆಂಟ್ ಕಾಯ್ದೆಗಳಲ್ಲಿನ ಸುರಕ್ಷಾ ತಡೆಗಳನ್ನು ನಿವಾರಿಸಬೇಕೆಂದು ಹಲವು ವರ್ಷಗಳಿಂದ ಲಾಬಿ ಮಾಡುತ್ತಿವೆ. ಇವುಗಳಿಗೆ ಮಂಜೂರುಪೂರ್ವ ವಿರೋಧ ಶರತ್ತು ಬೇಕಿಲ್ಲ. ಅದನ್ನು ತೆಗೆದುಹಾಕಲು ಸಾಧ್ಯವಿಲ್ಲದ ಕಾರಣ ಇಡೀ ಪ್ರಕ್ರಿಯೆಯನ್ನು ಕಠಿಣಗೊಳಿಸಲು ಪ್ರಯತ್ನಿಸುತ್ತಿವೆ. ಈ ಪ್ರಕ್ರಿಯೆಯಿಂದ ವೃಥಾ ವಿಳಂಬವಾಗುತ್ತದೆ ಎಂದು ದೂರುತ್ತವೆ.

ಬೆಡಾಕ್ವಿಲಿನ್ ಪೇಟೆಂಟ್ ವಿಸ್ತರಣೆ ತಡೆದ ಶ್ರೇಯಸ್ಸು ನಂದಿತಾ ವೆಂಕಟೇಶ್ ಮತ್ತು ದಕ್ಷಿಣ ಆಫ್ರಿಕಾದ ಫುಮೆಝಾ ಟಿಸಿಲ್‌ಗೆ ಸೇರುತ್ತದೆ. ಬಹುಔಷಧ ಪ್ರತಿರೋಧ ಕ್ಷಯದಿಂದ ಬಳಲುತ್ತಿದ್ದ ಇವರಿಬ್ಬರು, ಕನಮೈಸಿನ್ ಬಳಸಿದ್ದರಿಂದ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದರು. ಮಹಾರಾಷ್ಟ್ರ ಪೀಪಲ್ ನೆಟ್‌ವರ್ಕ್ (ಎನ್‌ಎಂಪಿ+) ಜೊತೆಗೂಡಿ ಮಂಜೂರುಪೂರ್ವ ವಿರೋಧ ಅರ್ಜಿ ಹಾಕಿ ದ್ದರು; ಮೆಡಿಕಲ್ ಸ್ಯಾನ್ಸ್ ಫ್ರಾಂಟಿಯರ್ ಬೆಂಬಲ ನೀಡಿತ್ತು. ಇಬ್ಬರನ್ನು ಟೈಮ್ ಮ್ಯಾಗಜಿನ್ ‘ಭವಿಷ್ಯದ ಹೊಮ್ಮುತ್ತಿರುವ ನಾಯಕರು’ ಎಂದು ಗುರುತಿಸಿದೆ(ಸೆಪ್ಟಂಬರ್ 13ರ ಸಂಚಿಕೆ).

ಔಷಧ ಸಂಸ್ಥೆಗಳ ಕೈತಿರುಚುವ ಪ್ರಯತ್ನಗಳು ನಾಗರಿಕ ಸಂಘಟನೆಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂಸೇವಾ ಸಂಘಟನೆಗಳ ಪ್ರಯತ್ನದಿಂದ ವಿಫಲವಾದ ಹಲವು ಪ್ರಕರಣಗಳಿವೆ. ಮೇ 2006ರಲ್ಲಿ ಸಹಾರಾ ಉತ್ಪನ್ನವಾದ ಎಚ್‌ಐವಿ ಔಷಧ ಟೆನೊಫೊವಿರ್ ಡಿಸೊಪ್ರೊಕ್ಸಿಲ್ ಫ್ಯುಮರೇಟ್(ಟಿಡಿಎಫ್) ವಿರುದ್ಧ ಮಂಜೂರುಪೂರ್ವ ವಿರೋಧ ಅರ್ಜಿಯನ್ನು ಇಂಡಿಯನ್ ನೆಟ್‌ವರ್ಕ್ ಆಫ್ ಪೀಪಲ್ ವಿಥ್ ಎಚ್‌ಐವಿ/ಏಡ್ಸ್ ದಾಖಲಿಸಿತು. ಈ ಮೊದಲೇ ಬಳಕೆಯಲ್ಲಿದ್ದ ಘಟಕ ಔಷಧದಲ್ಲಿದೆ ಎಂದು ದೂರಲಾಯಿತು. ಇಂಥ ಇನ್ನೊಂದು ಪ್ರಕರಣ-ಬೊಹಿಂಗರ್ ಇಂಗಲ್‌ಹೀಮ್‌ನ ಏಡ್ಸ್ ಔಷಧ ನೆವಿರಫಿನ್‌ನ ಪೇಟೆಂಟ್ ಅರ್ಜಿಯನ್ನು ಲಾಯರ್ಸ್ ಕಲೆಕ್ಟಿವ್ ಮೇ 2006ರಲ್ಲಿ ವಿರೋಧಿಸಿತು. 2008ರಲ್ಲಿ ಪೇಟೆಂಟ್ ತಿರಸ್ಕೃತಗೊಂಡಿತು. ಗ್ಲಿವೆಕ್(ಇಮಾಟಿನಿಬ್ ಮಿಸೈಲೇಟ್), ಜೈಡೋವುಡಿನ್-ಲಾಮಿವುಡಿನ್(ಎಚ್‌ಐವಿ ಪ್ರಥಮ ಹಂತದ ಔಷಧ) ಮತ್ತು ಲೋಪಿನವಿರ್/ರಿಟೊನವಿರ್(ಎಚ್‌ಐವಿ ದ್ವಿತೀಯ ಹಂತದ ಔಷಧ) ಇವೆಲ್ಲದರ ಪೇಟೆಂಟ್ ವಜಾಗೊಳಿಸಲಾಯಿತು.

ಭಾರತದ ಔಷಧ ಉದ್ಯಮದ ಮೌಲ್ಯ 2030ರೊಳಗೆ ಅಂದಾಜು 130 ಶತಕೋಟಿ ಡಾಲರ್ ಆಗಲಿದೆ. ದೇಶ ಜಗತ್ತಿನ ಅತಿ ದೊಡ್ಡ ಜನೆರಿಕ್ ಔಷಧಗಳ ಉತ್ಪಾದಕವಾಗಿದ್ದು, ಜಾಗತಿಕ ಔಷಧ ರಫ್ತಿನಲ್ಲಿ ಶೇ.20 ಪಾಲು ಹೊಂದಿದೆ. ಅಮೆರಿಕ, ಆಸ್ಟ್ರೇಲಿಯ ಮತ್ತು ಜಪಾನ್‌ನಂಥ ನಿಯಂತ್ರಿತ ಮಾರುಕಟ್ಟೆಗಳಿಗೆ ಹಾಗೂ ಆಫ್ರಿಕಾ, ಲ್ಯಾಟಿನ್ ಅಮೆರಿಕ ಸೇರಿದಂತೆ 200ಕ್ಕೂ ಅಧಿಕ ದೇಶಗಳಿಗೆ 2023ರಲ್ಲಿ 25.4 ಶತಕೋಟಿ ಡಾಲರ್ ಮೌಲ್ಯದ ಜನೆರಿಕ್ ಔಷಧ ರಫ್ತು ಮಾಡಿದೆ.

ಭಾರತೀಯ ಪೇಟೆಂಟ್ ವ್ಯವಸ್ಥೆ 2005ರಲ್ಲಿ ಜಾರಿಗೊಂಡ ಬಳಿಕ ಹಲವು ತಿದ್ದುಪಡಿಗಳನ್ನು ಕಂಡಿದೆ. 2023ರ ಕರಡು ಅತ್ಯಂತ ಪ್ರಮುಖ ತಿದ್ದುಪಡಿ ಆಗಿರಲಿದೆ. ಕಾಯ್ದೆಯಾದಲ್ಲಿ ಭಾರತದ ಔಷಧಗಳನ್ನು ಆಧರಿಸಿರುವ ದಕ್ಷಿಣ ದೇಶಗಳ ಬಡ ರೋಗಿಗಳು ಹಾಗೂ ಜನೆರಿಕ್ ಔಷಧ ಉತ್ಪಾದಕ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಮಾಧವ ಐತಾಳ್

contributor

Similar News