ಇಲ್ಲಿ ಸಾವಿರಾರು ಅನ್ನಾ ಪೆರಾಯಿಲ್ ಹಾಗೂ ತರುಣ್ ಸಕ್ಸೇನಾಗಳು

ಆಕರ್ಷಕ ವೇತನ, ಝಗಮಗಿಸುವ ಕಚೇರಿ, ಜಿಮ್, ಫುಡ್ ಕೋರ್ಟ್, ಪ್ರವಾಸ, ಹೊಂದಿಸಿಕೊಳ್ಳಬಹುದಾದ ಕೆಲಸದ ಸಮಯ ಇತ್ಯಾದಿ ಆಮಿಷವೊಡ್ಡಿ ಎಳೆಯ ಪ್ರತಿಭೆಗಳನ್ನು ಸೆಳೆಯಲಾಗುತ್ತದೆ. ಇವೆಲ್ಲದರ ಹಿಂದೆ ಶೋಷಣೆ ಮತ್ತು ವಿಷಮಯ ವಾತಾವರಣ ಇರುತ್ತದೆ ಎನ್ನುವುದು ಆನಂತರವಷ್ಟೇ ಗೊತ್ತಾಗುತ್ತದೆ. ಸಾರ್ವಜನಿಕ ಕ್ಷೇತ್ರ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಅತಿ ಕೆಲಸ ಮತ್ತು ಒತ್ತಡದಿಂದ ಹೈರಾಣಾದ ಹಲವು ಅನ್ನಾ-ಸಕ್ಸೇನಾಗಳು ಇರುತ್ತಾರೆ. ಇತ್ತೀಚೆಗೆ ಸರಕಾರದ ಇಲಾಖೆಯೊಂದರ 500 ಉದ್ಯೋಗಿಗಳು ಪ್ರತಿಭಟನೆ ನಡೆಸಿದರು. ಇದು ಶೋಷಣೆ-ಅಧಿಕ ಕೆಲಸದ ಹೊರೆ ಲಾಭದಾಯಕ ಕಂಪೆನಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ.

Update: 2024-10-04 05:40 GMT
Editor : Thouheed | Byline : ಋತ

ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಮತ್ತು ತರುಣ್ ಸಕ್ಸೇನಾ ಅವರ ಸಾವು ಅನ್ಯಾಯ ಮಾತ್ರವಲ್ಲ; ಇಂಥ ಸಾವಿಗೆ ಕಾರಣರಾದವರಿಗೆ ಕ್ಷಮೆ ಇರಬಾರದು. ಆದರೆ, ದೇಶದಲ್ಲಿ ವರ್ಷಕ್ಕೆ 2 ಲಕ್ಷ ಇಂಥ ಸಾವು ಸಂಭವಿಸುತ್ತದೆ. ಇವರ ಸಾವಿಗೆ ಕಾರಣರಾದವರಿಗೆ ಏನು ಶಿಕ್ಷೆ ಆಗಿದೆ? ಅನ್ನಾ ಸಾವಿನ ಬಳಿಕ ಜಗತ್ತಿನೆಲ್ಲೆಡೆಯ ದಪ್ಪ ಗಾಜು, ಮೃದು ಸೋಫಾ-ಕುರ್ಚಿಗಳ ಕಚೇರಿಗಳು ಸ್ವಲ್ಪ ಕಂಪಿಸಿದವು. ಅಷ್ಟೆ. ಆನಂತರ ‘ವ್ಯವಹಾರ ಎಂದಿನಂತೆ’ ಸ್ಥಿತಿ ಮುಂದುವರಿಯಿತು.

ಅನ್ನಾ(26), 120ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಜಾಗತಿಕ ಕಂಪೆನಿ ‘ಅರ್ನ್ಸ್ಟ್ ಆ್ಯಂಡ್ ಯಂಗ್’(ಎವೈ)ನಲ್ಲಿ ಕೆಲಸಕ್ಕೆ ಸೇರಿ ಕೇವಲ 4 ತಿಂಗಳಾಗಿತ್ತು. ಅನ್ನಾಳ ಅಂತ್ಯಸಂಸ್ಕಾರಕ್ಕೆ ಕಂಪೆನಿಯಿಂದ ಯಾರೂ ಬಂದಿರಲಿಲ್ಲ. ಅನ್ನಾಳ ತಾಯಿ ಅನಿತಾ ಅಗಸ್ಟಿನ್, ಎವೈ ಇಂಡಿಯಾ ಮುಖ್ಯಸ್ಥ ರಾಜೀವ್ ವೇಮಾನಿಗೆ ಬರೆದ ಪತ್ರ ಸೋರಿಕೆಯಾಗಿ, ಇಂಥ ಕಂಪೆನಿಗಳ ಅಂತರಾಳ ಸಾರ್ವಜನಿಕಗೊಂಡಿತು.

ತರುಣ್ ಸಕ್ಸೇನಾ(43) ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಫೈನಾನ್ಸ್ ಕಂಪೆನಿಯ ಪ್ರಾದೇಶಿಕ ಮ್ಯಾನೇಜರ್. ಮೇಲಧಿಕಾರಿಗಳು ರೈತರಿಂದ ಸಾಲ ವಸೂಲು ಮಾಡುವಂತೆ ಒತ್ತಡ ಹೇರುತ್ತಿದ್ದರು; ಇಲ್ಲವಾದರೆ, ವೇತನ ಕಡಿತ ಮಾಡುವುದಾಗಿ ಬೆದರಿಸಿದ್ದರು. 5 ಪುಟಗಳ ಪತ್ರ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡರು.

ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ‘‘ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’’ ಎಂದು ಹಿಂದೊಮ್ಮೆ ಹೇಳಿದ್ದರು. ಆಲಿಬಾಬಾ ಮುಖ್ಯಸ್ಥ ಜಾಕ್ ಮಾ, ‘‘ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಾರಕ್ಕೆ 6 ದಿನ ದುಡಿಯುವುದು ಅನಿವಾರ್ಯ’’ ಎಂದೊಮ್ಮೆ ಹೇಳಿದ್ದರು (9X9X6 ಸೂತ್ರ). ಮೂರ್ತಿ ಅವರ ಹೇಳಿಕೆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಐಟಿ ಉದ್ಯೋಗಿಗಳ ಅತಿ ಕೆಲಸ ಮತ್ತು ಶೋಷಣೆಯ ನೂರಾರು ಪ್ರಕರಣಗಳು ಬಯಲಿಗೆ ಬಂದವು. ಉದ್ಯಮದ ಒತ್ತಡದಿಂದ ಕರ್ನಾಟಕ ಸರಕಾರ 14 ಗಂಟೆಗಳ ದಿನದ ಪ್ರಸ್ತಾವ ಇರಿಸಿತ್ತು. ಪ್ರತಿರೋಧದ ಹಿನ್ನೆಲೆಯಲ್ಲಿ ಅದು ಹಿಂದೆ ಸರಿಯಿತು.

ಆಕರ್ಷಕ ವೇತನ, ಝಗಮಗಿಸುವ ಕಚೇರಿ, ಜಿಮ್, ಫುಡ್ ಕೋರ್ಟ್, ಪ್ರವಾಸ, ಹೊಂದಿಸಿಕೊಳ್ಳಬಹುದಾದ ಕೆಲಸದ ಸಮಯ ಇತ್ಯಾದಿ ಆಮಿಷವೊಡ್ಡಿ ಎಳೆಯ ಪ್ರತಿಭೆಗಳನ್ನು ಸೆಳೆಯಲಾಗುತ್ತದೆ. ಇವೆಲ್ಲದರ ಹಿಂದೆ ಶೋಷಣೆ ಮತ್ತು ವಿಷಮಯ ವಾತಾವರಣ ಇರುತ್ತದೆ ಎನ್ನುವುದು ಆನಂತರವಷ್ಟೇ ಗೊತ್ತಾಗುತ್ತದೆ. ಸಾರ್ವಜನಿಕ ಕ್ಷೇತ್ರ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಅತಿ ಕೆಲಸ ಮತ್ತು ಒತ್ತಡದಿಂದ ಹೈರಾಣಾದ ಹಲವು ಅನ್ನಾ-ಸಕ್ಸೇನಾಗಳು ಇರುತ್ತಾರೆ. ಇತ್ತೀಚೆಗೆ ಸರಕಾರದ ಇಲಾಖೆಯೊಂದರ 500 ಉದ್ಯೋಗಿಗಳು ಪ್ರತಿಭಟನೆ ನಡೆಸಿದರು. ಇದು ಶೋಷಣೆ-ಅಧಿಕ ಕೆಲಸದ ಹೊರೆ ಲಾಭದಾಯಕ ಕಂಪೆನಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಸಮಸ್ಯೆ ಇರುವುದು ಮೇಲಿನ ಹಂತದಲ್ಲಿ ಮತ್ತು ಬಾಸ್ ಆದೇಶ ಚಾಚೂತಪ್ಪದೆ ಪಾಲಿಸುವ ಮ್ಯಾನೇಜರ್‌ಗಳಲ್ಲಿ. ಶೇರು, ಸ್ಟಾಕ್ ಬೆಲೆ, ಲಾಭ ಗಳಿಕೆಗಳು ಸಿಇಒ ಹಾಗೂ ಆಡಳಿತ ಮಂಡಳಿಯ ಹಣೆಬರಹ ನಿರ್ಧರಿಸುತ್ತವೆ. ವೇಗವಾಗಿ ಕಾರ್ಯ ನಿರ್ವಹಣೆ, ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸ, ಅಧಿಕ ಲಾಭ ಇಲ್ಲಿನ ಮಂತ್ರಗಳು. ಕುದುರೆ ಓಡಬೇಕೆಂದರೆ ಚಾಟಿಯಲ್ಲಿ ಬಾರಿಸಲೇಬೇಕು ಎನ್ನುವುದು ಸಾಮಾನ್ಯ ಫಿಲಾಸಫಿ. ಅತ್ಯಂತ ಮೇಲಿನವರ ಆದೇಶಗಳು ಸಣ್ಣ ಕ್ಯೂಬಿಕಲ್‌ನಲ್ಲಿ ಕುಳಿತಿರುವವರಿಗೆ ಹರಿದು, ಅವರು ಕೃತಕ ಬೆಳಕಿನಲ್ಲಿ ಹಗಲು-ರಾತ್ರಿಯನ್ನು ಗಮನಿಸದೆ, ನೀಲಿ ಬಣ್ಣದ ಕಂಪ್ಯೂಟರ್ ತೆರೆಯನ್ನು ನೋಡುತ್ತ ಕಳೆಯುತ್ತಾರೆ. ಕೆಲಸದ ಅನಿಶ್ಚಿತತೆ ಮತ್ತು ಒತ್ತಡದಿಂದ ಕುದುರೆಗಳು ಜೋರಾಗಿ ಓಡುತ್ತವೆ ಎನ್ನುವುದು ಮೇಲಿನವರ ನಂಬಿಕೆ. ಇದು ಹೆಚ್ಚಿನ ಪ್ರಕರಣಗಳಲ್ಲಿ ನಿಜ ಕೂಡ. ಮಾಸಿಕ ಕಂತು, ಮಕ್ಕಳ ಶಾಲೆ ಶುಲ್ಕ ಮತ್ತು ಕೆಲಸ ಹೋಗುತ್ತದೆ ಎಂಬ ಆತಂಕ ಇದಕ್ಕೆ ಕಾರಣ. ಅಸಾಧ್ಯ ಗುರಿಗಳನ್ನು ವಿಧಿಸುವುದರಿಂದ ಕನಸಿನ ಕೆಲಸ ಜೀತವಾಗಿ ಬದಲಾಗಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಕ್ಯಾಂಪಸ್‌ನಿಂದ ಆಯ್ಕೆಯಾದವರಿಗೆ ಜಿಮ್ ಹಾಗೂ ಚಂದ್ರನ ಬೆಳಕಿನ ಪಾರ್ಟಿಗಳು ಮರೀಚಿಕೆ ಎಂದು ಬಹಳ ಬೇಗ ಗೊತ್ತಾಗುತ್ತದೆ. ಮ್ಯಾನೇಜರ್‌ಗಳು ತಮ್ಮೆಲ್ಲ ಜವಾಬ್ದಾರಿಯನ್ನು ಕಿರಿಯರ ಮೇಲೆ ವರ್ಗಾಯಿಸಿ, ಮೀಟಿಂಗ್‌ಗಳಲ್ಲಿ ಕಾಲ ಕಳೆಯುತ್ತಾರೆ; ತಂಡದ ಕಠಿಣ ಪರಿಶ್ರಮದ ಶ್ರೇಯಸ್ಸಿನಿಂದ ಆರ್ಥಿಕ ಲಾಭ ಗಳಿಸುತ್ತಾರೆ. ಆರ್ಥಿಕ ವರ್ಷದ ಅಂತ್ಯದಲ್ಲಿ ಪ್ರತಿವರ್ಷ ನಡೆಯುವ ‘ಅಪ್ರೈಸಲ್’ ಎಂಬ ನಾಟಕದಲ್ಲಿ ತಂಡಕ್ಕೆ 3 ಕಾಸು ಹಾಗೂ ಮ್ಯಾನೇಜರ್‌ಗೆ 24 ಕಾಸು ಸಿಗುತ್ತದೆ. ಇಂಥ ಕೆಲವರು ಏಣಿಯ ಮೇಲ್ಭಾಗವನ್ನು ತಲುಪಿದರೆ, ಉಳಿದ ಬಹುಸಂಖ್ಯಾತರು ದಿನವಿಡೀ ಲ್ಯಾಪ್‌ಟಾಪ್‌ನಲ್ಲಿ ಮುಳುಗಿರುತ್ತಾರೆ. ‘ತನ್ನ ಮ್ಯಾನೇಜರ್ ಕ್ರಿಕೆಟ್ ಪಂದ್ಯಕ್ಕೆ ಅನುಗುಣವಾಗಿ ಮೀಟಿಂಗ್‌ಗಳನ್ನು ಬದಲಿಸುತ್ತಿದ್ದರು ಎಂದು ಮಗಳು ಹೇಳಿದ್ದಳು’ ಎಂದು ಅನ್ನಾಳ ತಾಯಿ ಪತ್ರದಲ್ಲಿ ಬರೆದಿದ್ದರು. ಮನುಷ್ಯ ಘನತೆಯನ್ನು ಉಲ್ಲಂಘಿಸುವ ಇಂಥವರ ಸಂಖ್ಯೆ ಹೆಚ್ಚುತ್ತಿದ್ದಂತೆ, ಎಲ್ಲೆಡೆ ವಿಷಮಯ ವಾತಾವರಣ ವ್ಯಾಪಿಸುತ್ತದೆ. ಎಲ್ಲ ಮ್ಯಾನೇಜರ್‌ಗಳೂ ಹೀಗೆ ಇರುವುದಿಲ್ಲ ಎಂಬ ಕೇವಿಯಟ್‌ನ್ನು ಹಾಕಿದ್ದೇನೆ.

ಇದರ ವಿಷ ಪರಿಣಾಮ ಆರೋಗ್ಯ, ಕೌಟುಂಬಿಕ ಸಂಬಂಧಗಳ ಮೇಲೆ ಬೀಳುತ್ತದೆ. ಸಿಐಐ ಮತ್ತು ಮೆಡಿಬಡ್ಡಿ ಜುಲೈ 2024 ವರದಿ ಪ್ರಕಾರ, ಭಾರತೀಯ ಉದ್ಯೋಗಿಗಳ ಉರಿದು ಹೋಗುವ(ಬರ್ನ್ ಔಟ್) ಪ್ರಮಾಣ ಶೇ.62. ಕೆಲಸದ ಒತ್ತಡ ಹಾಗೂ ಕೆಲಸ-ಬದುಕಿನ ನಡುವಿನ ಸಮತೋಲ ಕಾಯ್ದುಕೊಳ್ಳಲಾಗದೆ ಇರುವುದು ಇದಕ್ಕೆ ಕಾರಣ. ಜಾಗತಿಕ ಪ್ರಮಾಣ ಶೇ.20. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಜಾಗತಿಕವಾಗಿ ಖಿನ್ನತೆ ಹಾಗೂ ಆತಂಕದಿಂದ ವಾರ್ಷಿಕ ಅಂದಾಜು 12 ಶತ ಕೋಟಿ ಮಾನವ ದಿನಗಳು ನಷ್ಟವಾಗುತ್ತಿವೆ.

ಇಂಥ ಪ್ರಕರಣವೊಂದು ಸಂಭವಿಸಿದ ಬಳಿಕ ‘ಎಲ್ಲವನ್ನೂ ಸರಿಪಡಿಸಲಾಗುತ್ತದೆ’ ಎಂದು ಕಾರ್ಪೊರೇಟ್‌ಗಳು ಮತ್ತು ಫಿಕ್ಕಿ-ಅಸ್ಸೋಚಾಂನಂಥ ಉದ್ಯಮಗಳ ಸಂಘಟನೆಗಳು ಹೇಳುತ್ತವೆ. ಆದರೆ, ಶೇರುದಾರರು ಮಾನವ ಘನತೆಗಿಂತ ಲಾಭ ಮುಖ್ಯ ಎಂದು ಪರಿಗಣಿಸುವುದು ಇರುವವರೆಗೆ ಕಂಪೆನಿಗಳ ವರ್ತನೆ ಹೀಗೆಯೇ ಇರುತ್ತದೆ. ರಾಜ್ಯದಲ್ಲಿ ಐಟಿ ಉದ್ಯಮಗಳಿಗೆ 25 ವರ್ಷದಿಂದ ಕೈಗಾರಿಕೆಗಳ ಸ್ಥಾಯಿ ಆದೇಶಗಳ ಕಾಯ್ದೆ 1946ರಿಂದ ವಿನಾಯಿತಿ ನೀಡಲಾಗಿದೆ. ಈ ಕಾಯ್ದೆಯು ಉದ್ಯೋಗಿಗಳು ಸಂಘ ಕಟ್ಟಿಕೊಳ್ಳುವ ಹಕ್ಕು ನೀಡುತ್ತದೆ. ಜೂನ್ 2024ರಲ್ಲಿ ಈ ವಿನಾಯಿತಿಯನ್ನು ರಾಜ್ಯ ಸರಕಾರ ಮತ್ತೆ ಮುಂದುವರಿಸಿದೆ. ಸಿಎಗಳು, ಇಂಜಿನಿಯರುಗಳು, ಪಿಎಚ್‌ಡಿಗಳು ಕಾರ್ಮಿಕರಲ್ಲ; ಅವರಿಗೆ ಸಂಘಟನೆ ಅಗತ್ಯವಿಲ್ಲ ಎನ್ನುವ ನೀತಿಯಿಂದ ಐಸಿಯುಗಳಲ್ಲಿ ಮಲಗುವ ವೈದ್ಯರು, ರಾತ್ರಿ-ಹಗಲು ಎನ್ನದೆ ಕೆಲಸ ಮಾಡುವ ಐಟಿ ಉದ್ಯೋಗಿಗಳು ಬಲಿಪಶುಗಳಾಗಿದ್ದಾರೆ. ಕೆಲವರ ಲಾಭ ಮತ್ತು ದುರಾಸೆಯಿಂದ ಗಿರಣಿಯಲ್ಲಿ ರುಬ್ಬಲ್ಪಟ್ಟು, ಹಿಂಡಿಯಾಗಿ ಬದಲಾಗುತ್ತಾರೆ.

ಆತಂಕ, ಒತ್ತಡ, ಆಹಾರ ಸೇವನೆಯಲ್ಲಿ ವ್ಯತ್ಯಾಸದಿಂದ ದೈಹಿಕ ಆಯಾಸ, ವೈಯಕ್ತಿಕ ಸಂಬಂಧದಲ್ಲಿ ಸಮಸ್ಯೆ ಹಾಗೂ ತಾವು ಅಪರಿಪೂರ್ಣ ಎಂಬ ಭಾವನೆಯಿಂದ ನರಳುತ್ತಾರೆ. ‘ಆಗುವುದಿಲ್ಲ’ ಎಂದು ಹೇಳುವುದನ್ನು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ. ಹೊಸದಾಗಿ ವೃತ್ತಿಗೆ ಬಂದವರು ಹೇಳಿಕೊಳ್ಳಲು ಯಾರೂ ಇಲ್ಲದೆ ಇರುವುದರಿಂದ, ಆಘಾತಕ್ಕೆ ಒಳಗಾಗುತ್ತಾರೆ. ಬಹಳಷ್ಟು ಕಂಪೆನಿಗಳಲ್ಲಿ ಉದ್ಯೋಗಿ ಸಹಾಯ ಕಾರ್ಯಕ್ರಮ(ಇಎಪಿ) ಇದ್ದರೂ, ಅದಷ್ಟೇ ಸಾಲುವುದಿಲ್ಲ. ರಾಜ್ಯದ ಶೇ.50ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ವಿಸ್ತರಿಸಿದ ಕೆಲಸದ ಸಮಯದಿಂದಾಗಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘ ಹೇಳುತ್ತದೆ. ಕೆಲಸ ಹಾಗೂ ವೈಯಕ್ತಿಕ ಬದುಕು ನಡುವೆ ಗೆರೆಗಳನ್ನು ಹಾಕಿಕೊಳ್ಳದೆ ಇರುವುದು ಸಮಸ್ಯೆಗೆ ಕಾರಣ. ಮುಖ್ಯ ಕಾರಣ-ವಿಷಮಯ ವಾತಾವರಣ; ಅದನ್ನು ಸರಿಪಡಿಸಬೇಕು.

ವೇತನ ಅಸಮಾನತೆ:

ಕಳೆದ ದಶಕದಿಂದ ಕಂಪೆನಿಗಳ ಸಿಇಒ ಹಾಗೂ ಸಾಮಾನ್ಯ ಉದ್ಯೋಗಿಯ ವೇತನ ಅನುಪಾತ ಮುಗಿಲು ಮುಟ್ಟಿದೆ. ಸ್ಟಾರ್‌ಬಕ್ಸ್ ಸಿಇಒ ಬ್ರಿಯಾನ್ ನಿಕ್ಕೋಲ್ ಅವರ ಭಾರೀ ವೇತನ ಇತ್ತೀಚೆಗೆ ಸುದ್ದಿಯಾಗಿತ್ತು. ಅವರ ವಾರ್ಷಿಕ ವೇತನ 110 ದಶಲಕ್ಷ ಡಾಲರ್; ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚು. 2024ರ ಆರ್ಥಿಕ ವರ್ಷದಲ್ಲಿ ನಿಫ್ಟಿ (ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್)ಯ 50 ಕಂಪೆನಿಗಳ ಸಿಇಒ-ಉದ್ಯೋಗಿಗಳ ವೇತನ ಅನುಪಾತ 11 ರಿಂದ 1,702 ಇದ್ದಿತ್ತು. ವಿಪ್ರೋ ಎಂಡಿ ಥಿಯರಿ ಡೆಲಾಪೋರ್ಟ್ ವಾರ್ಷಿಕ ವೇತನ 197.6 ಕೋಟಿ ರೂ.(1,703 ಪಟ್ಟು ಅಧಿಕ), ಟೆಕ್ ಮಹೀಂದ್ರ ಮುಖ್ಯಸ್ಥ ಸಿ.ಪಿ. ಗುರ್ನಾನಿ(91.8 ಕೋಟಿ ರೂ., 1,383 ಪಟ್ಟು), ದಿವೀಸ್ ಲ್ಯಾಬೊರೆಟರೀಸ್‌ನ ಡಾ.ಮುರಳಿ ಕೆ. ದಿವಿ(64 ಕೋಟಿ ರೂ., 1,174 ಪಟ್ಟು), ಜೆಎಸ್‌ಡಬ್ಲ್ಯು ಸ್ಟೀಲ್ಸ್‌ನ ಸಜ್ಜನ್ ಜಿಂದಾಲ್(73.4 ಕೋಟಿ ರೂ.), ಎಚ್‌ಸಿಎಲ್ ಟೆಕ್‌ನ ಸಿ. ವಿಜಯಕುಮಾರ್(84.8 ಕೋಟಿ ರೂ.), ಇನ್ಫೋಸಿಸ್‌ನ ಸಲೀಲ್ ಪಾರೇಖ್(66.2 ಕೋಟಿ ರೂ.), ಬಜಾಜ್ ಆಟೋದ ರಾಹುಲ್ ಬಜಾಜ್ (53.75 ಕೋಟಿ ರೂ.), ಎಲ್ ಆ್ಯಂಡ್ ಟಿ ಕಂಪೆನಿಯ ಎಸ್.ಎನ್. ಸುಬ್ರಹ್ಮಣ್ಯಂ(51.1 ಕೋಟಿ ರೂ.), ಐಟಿಸಿಯ ಸಂಜೀವ್ ಪುರಿ(25.2 ಕೋಟಿ ರೂ.), ಸತೀಶ್ ಪೈ(ಹಿಂಡಾಲ್ಕೋ ಇಂಡಸ್ಟ್ರೀಸ್, 31.7 ಕೋಟಿ ರೂ.) ವೇತನ ಪಡೆಯುತ್ತಾರೆ. ಇವರೆಲ್ಲರೂ ಕಂಪೆನಿ ಮುಖ್ಯಸ್ಥರು ಮತ್ತು ಅಷ್ಟು ವೇತನಕ್ಕೆ ಅರ್ಹರು ಎನ್ನಬಹುದು. ಆದರೆ, ಸಮಸ್ಯೆ ಇರುವುದು ಆದಾಯ ಕೆಳಮುಖವಾಗಿ ಹರಿಯುವುದಿಲ್ಲ ಎಂಬುದರಲ್ಲಿ. ಈ 10 ಕಂಪೆನಿಗಳಲ್ಲಿ 4 ಐಟಿ ಸೇವಾ ಕಂಪೆನಿಗಳು.

ಲಿಂಗ ಮತ್ತು ವೇತನ ಅಸಮಾನತೆ:

ಐಶ್ವರ್ಯ ಕೆಲವೇ ಕೆಲವರಲ್ಲಿ ಸಂಗ್ರಹಗೊಳ್ಳುತ್ತಿರುವ ಜಗತ್ತಿನಲ್ಲಿ ವೇತನ ಹಾಗೂ ಲಿಂಗಾಧರಿತ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆ. ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಭಾರತೀಯ ಮಹಿಳೆಯರು ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ವಯಸ್ಸು ಕಡಿಮೆ ಇದ್ದಷ್ಟೂ ಕೆಲಸದ ಅವಧಿ ಹೆಚ್ಚುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರು ವಾರಕ್ಕೆ 56.5 ಹಾಗೂ ವೃತ್ತಿಪರರು, ವೈಜ್ಞಾನಿಕ ಮತ್ತು ತಂತ್ರಜ್ಞರು 52.3 ಗಂಟೆ ಕಾರ್ಯ ನಿರ್ವಹಿಸಿದ್ದರು. ಇದು ಜಾಗತಿಕವಾಗಿ ಅಧಿಕ. ಜರ್ಮನಿಯಲ್ಲಿ ಐಟಿ/ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು 32 ಗಂಟೆ ಹಾಗೂ ರಶ್ಯದಲ್ಲಿ 40 ಗಂಟೆ ಕೆಲಸ ಮಾಡಿದ್ದರು. ಹೀಗಿದ್ದರೂ, ಈ ಕ್ಷೇತ್ರಗಳಲ್ಲಿ ಗಂಡಾಳಿಕೆ ಮುಂದುವರಿದಿದೆ. ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವ ಮಹಿಳೆಯರ ಪ್ರಮಾಣ ಕೇವಲ ಶೇ.8.5 ಹಾಗೂ ಐಟಿ-ಮಾಧ್ಯಮ ಕ್ಷೇತ್ರದಲ್ಲಿ ಶೇ.20(2023ರ ಮಾಹಿತಿ). ಇದರೊಟ್ಟಿಗೆ ಉದ್ಯೋಗಸ್ಥ ಮಹಿಳೆಯರ ಮೇಲೆ ಮನೆಗೆಲಸದ ಹೊರೆ ಕೂಡ ಬೀಳುತ್ತದೆ. 2019ರ ಮಾಹಿತಿ ಪ್ರಕಾರ, ಗೃಹಿಣಿಯರು ದಿನಕ್ಕೆ 7.5 ಗಂಟೆ ಹಾಗೂ ಉದ್ಯೋಗಸ್ಥೆಯರು 5.8 ಗಂಟೆ ವೇತನರಹಿತ ಪಾಲನೆ/ಮನೆಗೆಲಸ ಮಾಡುತ್ತಾರೆ. ಆದರೆ, ನಿರುದ್ಯೋಗಿ ಪುರುಷರು ದಿನಕ್ಕೆ 3.5 ಗಂಟೆ ಹಾಗೂ ಉದ್ಯೋಗಸ್ಥರು 2.7 ಗಂಟೆ ಮನೆಗೆಲಸ ಮಾಡುತ್ತಾರೆ! ವಿವಾಹಾನಂತರ ಹೆಣ್ಣುಮಕ್ಕಳ ಮೇಲಿನ ಕೆಲಸದ ಹೊರೆ ಇನ್ನಷ್ಟು ಹೆಚ್ಚುತ್ತದೆ. ವಿವಾಹಿತೆಯರು(ಉದ್ಯೋಗಿ-ನಿರುದ್ಯೋಗಿ) ದಿನಕ್ಕೆ 8 ಗಂಟೆ ವೇತನರಹಿತ ಕೆಲಸ ಮಾಡುತ್ತಾರೆ. ಪುರುಷರು 2.8 ಗಂಟೆ. ಅಂದರೆ, ಮದುವೆ ಬಳಿಕ ಮಹಿಳೆಯರ ಕೆಲಸ ದುಪ್ಪಟ್ಟಾಗುತ್ತದೆ; ಪುರುಷರ ಕೆಲಸ ಕಡಿಮೆಯಾಗುತ್ತದೆ. ಇದರಿಂದ ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಎನ್ನುವುದು ಗಗನಕುಸುಮ ಆಗುತ್ತದೆ. ಇದು ಎಲ್ಲ ಮನೆಗಳಿಗೂ ಅನ್ವಯಿಸದೇ ಇರಬಹುದು(ಮಾಹಿತಿ-ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ILOSTAT data explorer).

ತಾತ್ಕಾಲಿಕ ಕೆಲಸಗಾರರಿಗೆ ಹೋಲಿಸಿದರೆ, ಪೂರ್ಣಾವಧಿ ಕೆಲಸಗಾರರ ಮೇಲೆ ಹೊರೆ ಹೆಚ್ಚು ಎಂದು ಪೀರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ(ಪಿಎಲ್‌ಎಫ್‌ಎಸ್) ಹೇಳುತ್ತದೆ. ಜುಲೈ 2023-ಜೂನ್ 2024ರ ವಾರ್ಷಿಕ ವರದಿ ಪ್ರಕಾರ, ಖಾಯಂ ಕೆಲಸಗಾರರು ವಾರಕ್ಕೆ 48.2 ಗಂಟೆ, ತಾತ್ಕಾಲಿಕ ಕೆಲಸಗಾರರು 39.7 ಹಾಗೂ ಸ್ವಯಂಉದ್ಯೋಗಿಗಳು 39.6 ಗಂಟೆ ಕೆಲಸ ಮಾಡಿದ್ದರು. ತಾತ್ಕಾಲಿಕ ಕೆಲಸಗಾರರಿಗೆ ಕಡಿಮೆ ವೇತನ ನೀಡಲಾಗುತ್ತದೆ; ಸ್ವಯಂ ಉದ್ಯೋಗಿಗಳಿಗೆ ನಿಶ್ಚಿತ ಆದಾಯದ ಖಾತ್ರಿ ಇರುವುದಿಲ್ಲ ಹಾಗೂ ಬಂಡವಾಳ ಹೂಡಿಕೆ ಮಾಡಬೇಕಿರುವುದರಿಂದ ಹೆಚ್ಚು ಒತ್ತಡ ಇರುತ್ತದೆ ಎನ್ನುವುದು ನಿಜ. ಸಮೀಕ್ಷೆಯು ಗ್ರಾಮೀಣ ಪ್ರದೇಶದ 2.4 ಲಕ್ಷ ಹಾಗೂ ನಗರ ಪ್ರದೇಶದ 1.7 ಲಕ್ಷ ಜನರನ್ನು ಆಧರಿಸಿದೆ.

ವಿಶ್ರಾಂತಿ, ಆಹಾರ ಮತ್ತು ನಿದ್ರೆಯಿಲ್ಲದೆ ದಿನವಿಡೀ ಕೆಲಸ, ಸಿಕ್ಕಿದ್ದನ್ನು ತಿನ್ನುವುದು, ಕೆಲಸದ ಒತ್ತಡ ಹಾಗೂ ಅನಿಶ್ಚಿತತೆಯಿಂದ ಹಾನಿಯಾಗುತ್ತದೆ. ವೃತ್ತಿಯಲ್ಲಿ ಶೀಘ್ರವಾಗಿ ಮೇಲೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಇದನ್ನೆಲ್ಲ ಮಾಡುತ್ತಾರೆ ಎಂದುಕೊಳ್ಳೋಣ. ಇದರಿಂದ ಖುಷಿಯಾಗಿರುತ್ತಾರೆಯೇ ಎಂದರೆ ಅದೂ ಇಲ್ಲ. ಗ್ಯಾಲಪ್ ವರದಿ ಪ್ರಕಾರ, ಶೇ.14ರಷ್ಟು ಮಂದಿ ಮಾತ್ರ ಕೆಲಸದಲ್ಲಿ ಖುಷಿಯಾಗಿರುತ್ತಾರೆ. ಉಳಿದವರು ಹಣಕಾಸು ಒತ್ತಡ, ಮೂಲಸೌಲಭ್ಯದ ಕೊರತೆ, ಭವಿಷ್ಯದ ಚಿಂತೆ, ದೈಹಿಕ-ಮಾನಸಿಕ ನೋವು ಅನುಭವಿಸುತ್ತಿರುತ್ತಾರೆ. ಜಾಗತಿಕವಾಗಿ ಈ ಪ್ರಮಾಣ ಶೇ.34 ಇದೆ. ಒತ್ತಡ ಇತ್ಯಾದಿಯಿಂದಾಗಿ ಸಾಯುವವರ ಸಂಖ್ಯೆ ಭಾರತದಲ್ಲೇ ಅಧಿಕ-ವಾರ್ಷಿಕ 2 ಲಕ್ಷ!(ಗ್ಯಾಲಪ್ ಅಧ್ಯಯನ, www.gallopresearch.com). ಬಲಿಷ್ಠ ಕಾರ್ಮಿಕ ಕಾನೂನು ಇರುವ ದೇಶಗಳಲ್ಲಿ ಉದ್ಯೋಗಿಗಳ ಪರಿಸ್ಥಿತಿ ಉತ್ತಮವಾಗಿದೆ. ಒಕ್ಕೂಟ ಸರಕಾರವು ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದ 29 ಕಾಯ್ದೆಗಳನ್ನು ರದ್ದುಪಡಿಸಿದ್ದು, ನಾಲ್ಕು ಸಂಹಿತೆಗಳನ್ನು ರೂಪಿಸಿದೆ. ಆದರೆ, ನಿಯಮಗಳನ್ನು ರೂಪಿಸಿಲ್ಲ.

ಅನ್ನಾ ಪೆರಾಯಿಲ್ ಅವರ ಸಾವಿನ ಬಳಿಕ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ(ಐಸಿಎಐ) ತನ್ನ ಸದಸ್ಯರಿಗೆ ಆಪ್ತ ಸಮಾಲೋಚನೆಗೆ ಸಹಾಯವಾಣಿ(99975 99975) ಆರಂಭಿಸಿದೆ. ಒತ್ತಡ ನಿರ್ವಹಣೆ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದಾಗಿ ಹಾಗೂ ಅನುಕೂಲಕರ ಕೆಲಸದ ವಾತಾವರಣ ನಿರ್ಮಿಸಲು ಪ್ರಯತ್ನಿಸುವುದಾಗಿ ಹೇಳಿದೆ. ಇಂಥ ಪ್ರಯತ್ನಗಳು ಮುಖ್ಯ. ಆದರೆ, ಬದುಕಲು ಕೆಲಸವೊಂದನ್ನು ಮಾಡಲೇಬೇಕಿರುವಾಗ ನಮ್ಮ ಆಯ್ಕೆ ಯಾವುದಿರಬೇಕು? ವೃತ್ತಿಯನ್ನು ಪ್ರವೃತ್ತಿಯಾಗಿಸುವುದು ಹೇಗೆ? ಕನಸಿನ ಕೆಲಸ ಎಂಬುದು ಇದೆಯೇ? ಯಶಸ್ಸು ಎಂದರೆ ಏನು? ಪ್ರತಿಭೆಯ ಮಾನದಂಡ ಯಾವುದು? ವೃತ್ತಿಯಲ್ಲಿ ಮೇಲೇರಬೇಕೆಂಬ ಆಕಾಂಕ್ಷೆ ತಪ್ಪೇ? ಗಾಣದಲ್ಲಿ ಸಿಲುಕಿರುವ ನಮಗೆ ಆಯ್ಕೆಯ ಸ್ವಾತಂತ್ರ್ಯವಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News