ಒಕ್ಕೂಟ ತತ್ವ, ಹಣಕಾಸು ಆಯೋಗ ಹಾಗೂ ಜಿಎಸ್‌ಟಿ ಪಾಲಿಗೆ ಹಕ್ಕೊತ್ತಾಯ
ಕಳೆದ 6 ಹಣಕಾಸು ಆಯೋಗಗಳ ಅವಧಿಯಲ್ಲಿ ದಕ್ಷಿಣ ರಾಜ್ಯಗಳ ಪಾಲು ಕಡಿಮೆಯಾಗುತ್ತಾ ನಡೆದಿದೆ. ರಾಜ್ಯಗಳ ಆದಾಯ ಕಡಿಮೆ ಇರುವುದು ಮತ್ತು ಮಾನದಂಡಗಳು(ಜನಸಂಖ್ಯೆ, ಒಟ್ಟು ವಿಸ್ತೀರ್ಣ, ಅರಣ್ಯ-ಪರಿಸರ ಇತ್ಯಾದಿ) ಪರಿಗಣಿಸಿ, ತೆರಿಗೆ ಪಾಲು ನೀಡುತ್ತಿರುವುದು ಇದಕ್ಕೆ ಕಾರಣ. ಆದಾಯದ ಕೊರತೆ, ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಆಧರಿಸಿ ತೆರಿಗೆ ಹಂಚಿಕೆಯನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿವೆ.
ಸೆಪ್ಟಂಬರ್ 12ರಂದು ಕೇರಳ ಸರಕಾರವು ಬಿಜೆಪಿಯೇತರ ಸರಕಾರಗಳ ವಿತ್ತ ಸಚಿವರ ಶೃಂಗಸಭೆಯೊಂದನ್ನು ಆಯೋಜಿಸಿತ್ತು. ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಮತ್ತು 16ನೇ ಹಣಕಾಸು ಆಯೋಗದ ಶಿಫಾರಸು ಕುರಿತು ಚರ್ಚಿಸುವುದು ಉದ್ದೇಶ. ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ‘ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಸಿಎಂ ಮಟ್ಟದಲ್ಲಿ ಚರ್ಚಿಸಿ, ಒಟ್ಟಾರೆ ಪ್ರಸ್ತಾವವೊಂದನ್ನು 16ನೇ ಹಣಕಾಸು ಆಯೋಗಕ್ಕೆ ನೀಡುವ’ ಮಾತನಾಡಿದ್ದರು. ಈ ಎರಡೂ ಬಹಳ ಮುಖ್ಯವಾದ ಉಪಕ್ರಮಗಳು. ದೇಶದ ಒಕ್ಕೂಟ ನೀತಿಯ ಕೊಡುಕೊಳ್ಳುವಿಕೆಗೆ ಹೊಸ ರಾಜಕೀಯ ಸಹಮತವನ್ನು ನಿರ್ಮಿಸಲು ಇರಿಸಿದ ಮೊದಲ ಹೆಜ್ಜೆಗಳು.
ದೇಶದ ದಕ್ಷಿಣ-ಪಶ್ಚಿಮ ಹಾಗೂ ಜನಭರಿತ ಉತ್ತರ-ಪೂರ್ವ ರಾಜ್ಯಗಳ ನಡುವೆ ಆರ್ಥಿಕ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಭಾರೀ ಕಂದರವಿದೆ. ಇದು ಹಿಂದಿನಿಂದ ಒಪ್ಪಿತವಾದ ಕೇಂದ್ರ-ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯ ಮರುಹಂಚಿಕೆಗೆ ಸಂಬಂಧಿಸಿದ ಸೂತ್ರದ ಮೇಲೆ ವಿಪರಿಣಾಮ ಬೀರುತ್ತಿದೆ.
ಒಕ್ಕೂಟ ಸರಕಾರದ ತೆರಿಗೆ ಆದಾಯಕ್ಕೆ ಹೆಚ್ಚು ದೇಣಿಗೆ ನೀಡುವುದು ದಕ್ಷಿಣ-ಪಶ್ಚಿಮ ರಾಜ್ಯಗಳು. ಹಣಕಾಸು ಆಯೋಗವು ಹಲವು ಮಾನದಂಡಗಳ ಆಧಾರದ ಮೇಲೆ ತೆರಿಗೆ ಹಂಚಿಕೆ ಮಾಡುತ್ತದೆ. ಬಡ ರಾಜ್ಯಗಳ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು, ಕೇಂದ್ರ ಅವುಗಳಿಗೆ ತೆರಿಗೆ ಮತ್ತು ಅನುದಾನದಲ್ಲಿ ಹೆಚ್ಚು ಪಾಲು ನೀಡುತ್ತಿತ್ತು. ಕಾಲಕ್ರಮೇಣ ಈ ರಾಜ್ಯಗಳು ಅಭಿವೃದ್ಧಿ ಹೊಂದಿ, ರಾಜ್ಯಗಳ ನಡುವೆ ಒಮ್ಮುಖತೆ ಸಾಧ್ಯವಾಗಲಿದೆ ಎಂಬುದು ಆಶಯ. ಆದರೆ, ಹೀಗಾಗುತ್ತಿಲ್ಲ. ಬದಲಾಗಿ, 75 ವರ್ಷಗಳ ಬಳಿಕವೂ ತೆರಿಗೆ ಆದಾಯದ ಸಿಂಹಪಾಲು ಉತ್ತರದ ರಾಜ್ಯಗಳಿಗೆ ಸಿಗುತ್ತಿದ್ದರೂ, ಅವುಗಳ ಅಭಿವೃದ್ಧಿ ಹೇಳಿಕೊಳ್ಳುವಂತೆ ಇಲ್ಲ. ಪ್ರತಿಯಾಗಿ, ದಕ್ಷಿಣ ರಾಜ್ಯಗಳ ಆರ್ಥಿಕ ಸಮೃದ್ಧಿ ಹೆಚ್ಚಳಗೊಳ್ಳುತ್ತಿದೆ. ದೇಶದ ಅತ್ಯಂತ ಯಶಸ್ವಿ ಆರ್ಥಿಕ ಕಥನಗಳಾದ ಫಾಕ್ಸ್‌ಕಾನ್‌ನಿಂದ ಹಿಡಿದು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಸೇರಿದಂತೆ ಹೆಚ್ಚಿನವು ದಕ್ಷಿಣದಲ್ಲಿವೆ. ಇದರಿಂದಾಗಿ, ದಕ್ಷಿಣದ ರಾಜ್ಯಗಳು ‘ನಮಗೇಕೆ ಅನ್ಯಾಯ?’ ಎಂದು ಪ್ರಶ್ನಿಸಲಾರಂಭಿಸಿವೆ. ಕೇರಳ ರಾಜ್ಯ ನ್ಯಾಯಾಲಯದ ಕದವನ್ನೂ ತಟ್ಟಿದೆ.
ಹಣಕಾಸು ಆಯೋಗದ ಶಿಫಾರಸು:
ಕೇಂದ್ರ ಸರಕಾರವು ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಸೆಂಟ್ರಲ್ ಜಿಎಸ್‌ಟಿ ಮತ್ತು ಸಮಗ್ರ ಸರಕು ಹಾಗೂ ಸೇವಾ ತೆರಿಗೆ(ಐಜಿಎಸ್‌ಟಿ)ಯಲ್ಲಿ ರಾಜ್ಯಗಳಿಗೆ ಪಾಲು ನೀಡುತ್ತದೆ. ಈ ಹಂಚಿಕೆಯನ್ನು ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಮಾಡುತ್ತದೆ. ಹಣಕಾಸು ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ; ಸಂವಿಧಾನದ 280ನೇ ವಿಧಿಯ ಶರತ್ತು 1ರ ಅನ್ವಯ 5 ವರ್ಷಕ್ಕೊಮ್ಮೆ ರಚನೆಯಾಗುತ್ತದೆ. ಅದರ ಅಧ್ಯಕ್ಷ ಹಾಗೂ ನಾಲ್ವರು ಸದಸ್ಯರನ್ನು ರಾಷ್ಟ್ರಪತಿ ನೇಮಿಸುತ್ತಾರೆ. ಈಗ ಚಾಲ್ತಿಯಲ್ಲಿರುವುದು 16ನೇ ಆಯೋಗ ಮತ್ತು ಅದರ ಅಧ್ಯಕ್ಷ ಡಾ. ಅರವಿಂದ್ ಪನಗರಿಯಾ. ಅವಧಿ 2026-31.
ಆಯೋಗವು ಅನುದಾನ ಹಂಚಿಕೆ ಬಳಕೆಯಾಗುವ ಮಾನದಂಡಗಳೆಂದರೆ, * ಜನಸಂಖ್ಯೆ ಶೇ.15 *ವಿಸ್ತೀರ್ಣ- ಶೇ.15. ದೊಡ್ಡ ರಾಜ್ಯವಾಗಿದ್ದರೆ, ತೆರಿಗೆಯಲ್ಲಿ ಹೆಚ್ಚು ಪಾಲು ಮತ್ತು ಅಧಿಕ ಅನುದಾನ ಸಿಗುತ್ತದೆ * ಜನಸಂಖ್ಯೆ ನಿಯಂತ್ರಣ ಪ್ರಯತ್ನ ಶೇ. 12.5 *ಅರಣ್ಯ ಪ್ರದೇಶ ಮತ್ತು ಪರಿಸರ- ಶೇ.10 * ರಾಜ್ಯಗಳ ವರಮಾನ ಅಂತರ(ಕಡಿಮೆ ಆದಾಯ ಹೊಂದಿರುವ ರಾಜ್ಯಗಳಿಗೆ ಹೆಚ್ಚು ಪಾಲು ಸಿಗುತ್ತದೆ) ಶೇ.45 ಮತ್ತು * ತೆರಿಗೆ ಹಾಗೂ ಆರ್ಥಿಕ ಪ್ರಯತ್ನಗಳು(ಹೆಚ್ಚು ತೆರಿಗೆ ಸಂಗ್ರಹಕ್ಕೆ ಉತ್ತೇಜನ) ಶೇ.2.5. ಜನಸಂಖ್ಯೆ ನಿಯಂತ್ರಣಕ್ಕೆ ಪ್ರಯತ್ನಗಳು, ಪರಿಸರ ಹಾಗೂ ತೆರಿಗೆ-ಆರ್ಥಿಕ ಪ್ರಯತ್ನಗಳೆಂಬ ಮಾನದಂಡಗಳನ್ನು 15ನೇ ಹಣಕಾಸು ಆಯೋಗದಲ್ಲಿ ಸೇರ್ಪಡೆಗೊಳಿಸಲಾಯಿತು.
ಆಯೋಗವು 2011ರ ಜನಗಣತಿಯನ್ನು ಆಧರಿಸಿದೆ. 2021ರಲ್ಲಿ ಜನಗಣತಿ ನಡೆದಿಲ್ಲ. ಸುಮಾರು 12-13 ವರ್ಷಗಳ ಹಿಂದಿನ ಜನಗಣತಿಯ ಬಳಕೆಯನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿವೆ. ಏಕೆಂದರೆ, ಇವು ಈ ಅವಧಿಯಲ್ಲಿ ಜನನ ನಿಯಂತ್ರಣದ ಮೂಲಕ ಜನಸಂಖ್ಯೆಯನ್ನು ಕಡಿಮೆ ಮಾಡಿವೆ. ಇದರಿಂದ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕುಸಿದಿದೆ.
ಸಂವಿಧಾನದ 270ನೇ ವಿಧಿಯನ್ವಯ ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಪಾಲಿನ ಹಂಚಿಕೆ ನಡೆಯುತ್ತದೆ. ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ಶೇ.41ರಷ್ಟು ಮೊತ್ತವನ್ನು 14 ಕಂತುಗಳಲ್ಲಿ ನೀಡಬೇಕೆಂದು ಶಿಫಾರಸು ಮಾಡಿತ್ತು. ತಮಗೆ ನೀಡುತ್ತಿರುವ ಪಾಲು ಹಾಗೂ ತಾವು ಸಂಗ್ರಹಿಸಿದ ತೆರಿಗೆ ಹಣದ ಮೊತ್ತದ ನಡುವಿನ ಅಂತರ ಭಾರೀ ಇದೆ ಎನ್ನುವುದು ರಾಜ್ಯಗಳ ದೂರು. ಉತ್ತರಪ್ರದೇಶ ಹಾಗೂ ಬಿಹಾರಕ್ಕೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳಿಗೆ ನೀಡುವ ಪಾಲು ಕಡಿಮೆಯಾಗುತ್ತಿದೆ. ಕಳೆದ 6 ಹಣಕಾಸು ಆಯೋಗಗಳ ಅವಧಿಯಲ್ಲಿ ದಕ್ಷಿಣ ರಾಜ್ಯಗಳ ಪಾಲು ಕಡಿಮೆಯಾಗುತ್ತ ನಡೆದಿದೆ. ರಾಜ್ಯಗಳ ಆದಾಯ ಕಡಿಮೆ ಇರುವುದು ಮತ್ತು ಮಾನದಂಡಗಳು(ಜನಸಂಖ್ಯೆ, ಒಟ್ಟು ವಿಸ್ತೀರ್ಣ, ಅರಣ್ಯ-ಪರಿಸರ ಇತ್ಯಾದಿ) ಪರಿಗಣಿಸಿ, ತೆರಿಗೆ ಪಾಲು ನೀಡುತ್ತಿರುವುದು ಇದಕ್ಕೆ ಕಾರಣ. ಆದಾಯದ ಕೊರತೆ, ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಆಧರಿಸಿ ತೆರಿಗೆ ಹಂಚಿಕೆಯನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿವೆ.
ಕೇಂದ್ರ ರಾಜ್ಯಗಳಿಗೆ ಪ್ರಸಕ್ತ ಶೇ.41ರಷ್ಟು ತೆರಿಗೆ ಪಾಲು ನೀಡುತ್ತಿದೆ. 13ನೇ ಆಯೋಗ ಶೇ.32, 14ನೇ ಆಯೋಗ ಶೇ.42 ಹಾಗೂ 15ನೇ ಆಯೋಗ ಶೇ.41(ಉಳಿಕೆ ಶೇ.1ನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖಿಗೆ ಹಂಚಲಾಗಿದೆ) ಪಾಲು ನೀಡಿದೆ. 14 ಮತ್ತು 15ನೇ ಹಣಕಾಸು ಆಯೋಗ ಗಳು ರಾಜ್ಯಗಳಿಗೆ ನೀಡುತ್ತಿರುವ ಪಾಲನ್ನು ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಿದ್ದರೂ, ಕೇಂದ್ರ ಈ ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ. 14ನೇ ಆಯೋಗದ ಶಿಫಾರಸುಗಳ ಬಳಿಕ ಒಟ್ಟು ತೆರಿಗೆ ಆದಾಯ ದಲ್ಲಿ ರಾಜ್ಯಗಳಿಗೆ ವರ್ಗಾವಣೆ ಆಗುತ್ತಿರುವುದು ಶೇ.32-35 ಮಾತ್ರ.
ಕರ್ನಾಟಕ ಸಿಎಂ, ‘ಪ್ರತೀ 1 ರೂ.ಗೆ 15 ಪೈಸೆ ವಾಪಸಾಗುತ್ತಿದೆ’ ಎಂದು ಹೇಳಿದ್ದರು. ಇದು ನಿಜ. ರಾಜ್ಯಕ್ಕೆ 2021-22ರಲ್ಲಿ 75,219 ಕೋಟಿ ರೂ.(ತೆರಿಗೆ ಪಾಲು+ಅನುದಾನ), 2022-2023ರಲ್ಲಿ 56,877 ಕೋಟಿ ರೂ. ಹಾಗೂ 2023-24ರಲ್ಲಿ 40,280 ಕೋಟಿ ರೂ. ನೀಡಲಾಗಿದೆ. ಕೋವಿಡ್-19 ದೇಶವನ್ನು ಕಾಡಿದ 2020-21ರಲ್ಲಿ 51,770 ಕೋಟಿ ರೂ. ನೀಡಲಾಗಿತ್ತು.
ರಾಜ್ಯಗಳಿಗೆ ನೀಡುತ್ತಿರುವ ತೆರಿಗೆ ಪಾಲು ಕಡಿಮೆಯಾಗುತ್ತಿರುವ ಜೊತೆಗೆ, ದೇಶದ ರಾಜ್ಯಗಳ ನಡುವೆ ಆರ್ಥಿಕ ಅಸಮಾನತೆ ಎತ್ತಿರುವ ಸವಾಲುಗಳನ್ನು ಕೇಂದ್ರ ಸರಕಾರದ ಆರ್ಥಿಕತೆಯ ಕೇಂದ್ರೀಕರಣ ಇನ್ನಷ್ಟು ಹೆಚ್ಚಿಸಿದೆ. ತಕ್ಷಶಿಲಾ ಇನ್‌ಸ್ಟಿಟ್ಯೂಟಿನ ಪ್ರಣಯ್ ಕೋಟಸ್ಥಾನೆ ಹಾಗೂ ಸಾರ್ಥಕ್ ಪ್ರಧಾನ್ ಅವರ ಪ್ರಕಾರ, 2011-12ರಿಂದ 2024-25ರ ಅವಧಿಯಲ್ಲಿ ಕೇಂದ್ರ ಸಂಗ್ರಹಿಸುವ ಸೆಸ್-ಸರ್ಚಾರ್ಜ್ ವಾರ್ಷಿಕ ದರ ಶೇ.16.7ರಷ್ಟು ಹೆಚ್ಚಿದೆ. ಕೇಂದ್ರದ ಸರಾಸರಿ ತೆರಿಗೆ ವರಮಾನದಲ್ಲಿ ಸೆಸ್-ಸರ್ಚಾರ್ಜ್ ಪ್ರಮಾಣ ಹೆಚ್ಚುತ್ತಿದೆ. 2011-12ರಲ್ಲಿ ತೆರಿಗೆ ವರಮಾನದಲ್ಲಿ ಶೇ.10.4 ರಷ್ಟಿದ್ದ ಸೆಸ್-ಸರ್ಚಾರ್ಜ್, 2021ರಲ್ಲಿ ಶೇ.20.2ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ ರಾಜ್ಯಗಳಿಗೆ ಪಾಲು ನೀಡಬೇಕಿಲ್ಲದ ಕಾರಣ, ಕೇಂದ್ರ ಈ ಅಡ್ಡದಾರಿ ಹಿಡಿದಿದೆ. ಇದರಿಂದ ಕೇಂದ್ರದ ತೆರಿಗೆ ಆದಾಯ ಹೆಚ್ಚುತ್ತ ಹೋಗಿದೆ. ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳು ತೆರಿಗೆ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಎಲ್ಲ ಮಾರ್ಗಗಳೂ ಮುಚ್ಚಿಹೋಗಿವೆ. ಅಷ್ಟುಮಾತ್ರವಲ್ಲದೆ, ರಾಜ್ಯಗಳಿಗೆ ನೀಡಬೇಕಿರುವ ತೆರಿಗೆ ಪಾಲಿಗೂ ಕತ್ತರಿ ಹಾಕಲಾಗುತ್ತಿದೆ. ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಕೊಡಬೇಕೆಂದು ಶಿಫಾರಸು ಮಾಡಿದ್ದ 11,495 ಕೋಟಿ ರೂ. ನಿರ್ದಿಷ್ಟ ಪರಿಹಾರ ಅನುದಾನವನ್ನು ನಿರಾಕರಿಸಲಾಗಿದೆ. ಇದು ಜಿಎಸ್‌ಟಿ ಪಾಲು. ಕೋವಿಡ್ ನೆಪ ಮಾಡಿಕೊಂಡು ಕೇಂದ್ರ ಈ ಮೊತ್ತ ಪಾವತಿಸಲು ವಿಳಂಬ ಮಾಡುತ್ತಿದೆ; ಇದನ್ನು ಸಾಲವಾಗಿ ಪರಿವರ್ತಿಸುವುದಾಗಿ ಹೇಳಿದೆ. ರಾಜ್ಯಗಳು ತಮ್ಮ ಆರ್ಥಿಕ ಸ್ವಾಯತ್ತೆಯನ್ನು ತ್ಯಾಗ ಮಾಡಿ ಜಿಎಸ್‌ಟಿಗೆ ಸಮ್ಮತಿಸಿವೆ. ಆದರೆ, ಅವುಗಳ ನ್ಯಾಯಸಮ್ಮತ ಪಾಲು ಕೂಡ ಸಿಗುತ್ತಿಲ್ಲ.
2026ರಲ್ಲಿ ನಡೆಯಲಿರುವ ಕ್ಷೇತ್ರ ಪುನರ್ ವಿಂಗಡಣೆ ದಕ್ಷಿಣ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದೆ; ಇದರಿಂದ ಈ ರಾಜ್ಯಗಳ ಲೋಕಸಭೆ ಸ್ಥಾನಗಳ ಸಂಖ್ಯೆ(ಜನಸಂಖ್ಯೆಯನ್ನು ಆಧರಿಸಿ ನಿರ್ಧರಿಸುವುದ ರಿಂದ)ಯಲ್ಲಿ ಗಮನಾರ್ಹ ಹೆಚ್ಚಳ ಆಗುವುದಿಲ್ಲ (ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ-ಆಂಧ್ರಪ್ರದೇಶಗಳ ಸಂಸದರ ಸಂಖ್ಯೆ 129ರಿಂದ 164ಕ್ಕೆ ಹೆಚ್ಚಲಿದೆ). ಆದರೆ, ಉತ್ತರದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪ್ರಾತಿನಿಧ್ಯ 174ರಿಂದ 224ಕ್ಕೆ ಹೆಚ್ಚುತ್ತದೆ (2026ರ ಜನಸಂಖ್ಯೆಯನ್ನು ಪರಿಗಣಿಸಿದರೆ, ಒಟ್ಟು ಸ್ಥಾನಗಳ ಸಂಖ್ಯೆ 543ರಿಂದ 848 ಹೆಚ್ಚಲಿದೆ). ಇದರಿಂದ ದಕ್ಷಿಣದ ರಾಜ್ಯಗಳ ಬಲ ಕುಗ್ಗಲಿದೆ.
ಕೇರಳ ವಿತ್ತ ಸಚಿವರ ಸಭೆ:
ಸೆಪ್ಟಂಬರ್ 12ರಂದು ಕೇರಳ ಸರಕಾರವು ತಿರುವನಂತಪುರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿಯೇತರ 5 ಸರಕಾರಗಳ ವಿತ್ತ ಸಚಿವರು ಹಾಗೂ ಆರ್ಥಿಕ ತಜ್ಞರು ಪಾಲ್ಗೊಂಡಿದ್ದರು. 2011ರ ಜನಗಣತಿಯನ್ನು ಆಧಾರವಾಗಿ ಇರಿಸಿಕೊಂಡಿರುವುದರಿಂದ, ಜನಸಂಖ್ಯೆಯನ್ನು ನಿಯಂತ್ರಿಸಿದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಎಲ್ಲ ರಾಜ್ಯಗಳು ಹೇಳಿದವು.
ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ, ಸೆಸ್-ಸರ್ಚಾರ್ಜ್ ಮೇಲೆ ಶೇ.5ರ ಮಿತಿ ಹೇರಬೇಕು ಹಾಗೂ ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಶೇ.50 ಪಾಲು ನೀಡಬೇಕು. ಒಂದುವೇಳೆ ಸೆಸ್-ಸರ್ಚಾರ್ಜ್ ಶೇ.5ನ್ನು ಮೀರಿದರೆ, ಅದರಲ್ಲಿ ರಾಜ್ಯಗಳಿಗೆ ಪಾಲು ನೀಡಬೇಕು ಎಂದಿದ್ದರು. 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದ್ದಾಗ, ಜಿಎಸ್‌ಟಿ ವ್ಯವಸ್ಥೆಯಿಂದ ಆಗುತ್ತಿರುವ ನಷ್ಟದ ಬಗ್ಗೆ ವಿವರಿಸಿದ್ದರು. ಜಿಎಸ್‌ಟಿಯಿಂದ ರಾಜ್ಯಕ್ಕೆ ವಾರ್ಷಿಕ 24,000 ಕೋಟಿ ರೂ. ನಷ್ಟವಾಗುತ್ತಿದೆ. ಜಿಎಸ್‌ಟಿಯಿಂದ ಆಗುವ ಆದಾಯ ಕೊರತೆ ಭರಿಸುವಿಕೆ 2 ವರ್ಷದಿಂದ ನಿಂತಿದೆ. ಇದರಿಂದ ರಾಜ್ಯಕ್ಕೆ 45,142 ಕೋಟಿ ರೂ. ನಷ್ಟವಾಗಿದೆ. ಪ್ರತಿಕ್ರಿಯಿಸಿದ್ದ ಡಾ. ಪನಗರಿಯಾ, ಈ ಸಮಸ್ಯೆಯನ್ನು ಜಿಎಸ್‌ಟಿ ಮಂಡಳಿಯಲ್ಲೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದರು. ಸಚಿವರು ಈ ಸಂಬಂಧ ವಿತ್ತ ಸಚಿವೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜಿಎಸ್‌ಟಿ ಮಂಡಳಿಯಲ್ಲೂ ಪ್ರಬಲ ವಾದ ಮಂಡಿಸಿದ್ದಾರೆ.
ತಮಿಳುನಾಡು ಅರ್ಥ ಸಚಿವ ತಂಗಂ ತೇನರಸು, ವಿವೇಚನಾ ಅನುದಾನದ ಅವಲಂಬನೆಯನ್ನು ಕಡಿಮೆ ಮಾಡಿ, ಯಥಾರ್ಥ ಸಂಪನ್ಮೂಲ ವರ್ಗಾವಣೆ ಹೆಚ್ಚಿಸಬೇಕು. ಶೇ.9.4 ರಷ್ಟಿದ್ದ ಸೆಸ್-ಸರ್ಚಾರ್ಜ್ 2022-23ಕ್ಕೆ ಶೇ.22.8ಕ್ಕೆ ಹೆಚ್ಚಳಗೊಂಡಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ರಾಜ್ಯಗಳು ಮಾಡುವ ವೆಚ್ಚ(ಕೌಂಟರ್ ಪಾರ್ಟ್ ಫಂಡಿಂಗ್)ದಿಂದ ರಾಜ್ಯಗಳಿಗೆ ಹೊಡೆತ ಬಿದ್ದಿದೆ. ರಾಜ್ಯದ ಹಳೆಯ ಮತ್ತು ಹೊಸ ಯೋಜನೆಗಳಿಗೆ ಹಣಕಾಸು ಕೊರತೆ ಉಂಟಾಗಿದೆ ಎಂದು ವಿವರಿಸಿದ್ದರು.
ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಕೇಂದ್ರದಿಂದ ಒಕ್ಕೂಟ ತತ್ವದ ಉಲ್ಲಂಘನೆ ಆಗುತ್ತಿದ್ದು, ಸುಸ್ಥಿರ ಕೇಂದ್ರ-ರಾಜ್ಯ ಸಂಬಂಧಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಹೇಳಿದರು.
ಆರಂಭ ಬಿಂದು:
ತಿರುವನಂತಪುರದ ಸಭೆ ಹಾಗೂ ಕರ್ನಾಟಕದ ಪ್ರಸ್ತಾವಿತ ಸಭೆಗಳು ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಪಾಲು ಸಂಬಂಧಿಸಿದಂತೆ ಚರ್ಚೆಯೊಂದನ್ನು ಹುಟ್ಟು ಹಾಕಿವೆ. ಸೆಸ್-ಸರ್ಚಾರ್ಜ್‌ಗೆ ಮಿತಿ, ಆರ್ಥಿಕ ನಿರ್ವಹಣೆ ಮತ್ತು ದಕ್ಷತೆಗೆ ಉತ್ತೇಜನ, ಶೀಘ್ರವಾಗಿ ಬೆಳವಣಿಗೆ ಆಗುತ್ತಿರುವ ರಾಜ್ಯಗಳಿಗೆ ವಿಶೇಷ ಅನುದಾನ ಇತ್ಯಾದಿ ಅಂಶಗಳು ಮುನ್ನೆಲೆಗೆ ಬಂದಿವೆ. ತಜ್ಞರ ಪ್ರಕಾರ, ಸೆಸ್-ಸರ್ಚಾರ್ಜ್‌ನಲ್ಲಿ ರಾಜ್ಯಗಳಿಗೆ ಪಾಲು ನೀಡುವುದು, ಕಾಲಕ್ರಮೇಣ ಸೆಸ್-ಸರ್ಚಾರ್ಜ್ ರದ್ದುಗೊಳಿಸುವುದು, ಜಿಎಸ್‌ಟಿ ವ್ಯವಸ್ಥೆಯ ತಾರ್ಕಿಕೀಕರಣ, ತೆರಿಗೆಯಲ್ಲಿ ಪಾಲು ನೀಡುವಾಗ ರಾಜ್ಯಗಳು ಎಷ್ಟು ಜಿಎಸ್‌ಟಿ ವರಮಾನ ಸಂಗ್ರಹಿಸುತ್ತಿವೆ ಎಂಬುದನ್ನು ಪರಿಗಣಿಸುವುದು ಹಾಗೂ ಹಣಕಾಸು ಆಯೋಗದ ರಚನೆ-ಕಾರ್ಯನಿರ್ವಹಣೆಯಲ್ಲಿ ರಾಜ್ಯಗಳ ಭಾಗವಹಿಸುವಿಕೆಗೆ ಅವಕಾಶವಿರುವ ಜಿಎಸ್‌ಟಿ ಮಂಡಳಿಯಂಥ ವ್ಯವಸ್ಥೆಯನ್ನು ರಚಿಸುವ ಮೂಲಕ ರಾಜ್ಯಗಳ ಹಿತ ಕಾಯಬಹುದು. 16ನೇ ವಿತ್ತ ಆಯೋಗ ಈ ಬಗ್ಗೆ ಗಮನ ಹರಿಸಬೇಕಿದೆ.
ಆದರೆ, ಅನುದಾನ ನೀಡಿಕೆ ಎನ್ನುವುದು ಸೂತ್ರವೊಂದನ್ನು ಆಧರಿಸಿದ ತಾಂತ್ರಿಕ ವಿಷಯ ಮಾತ್ರವಲ್ಲ; ಬದಲಾಗಿ, ರಾಜಕೀಯ ವಿಷಯ. ಅದಕ್ಕೆ ರಾಜಕೀಯ ಸಂಸ್ಕೃತಿಯಲ್ಲಿ ಒಕ್ಕೂಟ ವ್ಯವಸ್ಥೆಗೆ ಕುರಿತ ಬದ್ಧತೆ ಇರಬೇಕು. ಕಳೆದ 10 ವರ್ಷಗಳಲ್ಲಿ ಕೇಂದ್ರೀಕರಣ ತೀವ್ರಗೊಂಡಿದೆ. ಒಕ್ಕೂಟ ತತ್ವದ ಬಗ್ಗೆಯೇ ಬಿಜೆಪಿಗೆ ಅಸಹನೆ ಇದೆ. ಅದು ಡಬಲ್ ಇಂಜಿನ್ ಸರಕಾರಗಳಿರುವ ಏಕೈಕ ಅಸ್ಮಿತೆಯಲ್ಲಿ ನಂಬಿಕೆ ಇರಿಸಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗುವಲ್ಲಿ ರಾಜ್ಯಗಳ ಪಾಲೂ ಇದೆ-ಅವು ಒಕ್ಕೂಟ ತತ್ವದ ರಕ್ಷಣೆಗಾಗಿ ಹೋರಾಡುತ್ತಿಲ್ಲ; ಬದಲಾಗಿ, ಸ್ವಹಿತಾಸಕ್ತಿಗೆ ಹೋರಾಡುತ್ತಿವೆ. ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಂಡು ಕೇಂದ್ರಾಡಳಿತ ಪ್ರದೇಶವಾಗಿ ಬದಲಿಸಿದಾಗ ಇಲ್ಲವೇ ದಿಲ್ಲಿಯಲ್ಲಿ ಜನಾದೇಶ ಗಳಿಸಿದ ಸರಕಾರವನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ಉಸಿರುಗಟ್ಟಿಸಿದಾಗ, ರಾಜ್ಯಗಳು ಪ್ರತಿಭಟಿಸಲಿಲ್ಲ; ದೇಶದಲ್ಲಿ ಪ್ರತಿಪಕ್ಷ ಸರಕಾರಗಳು ಕಡಿಮೆ ಇದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳು ಹೆಚ್ಚು ಇರುವುದು ಇದಕ್ಕೆ ಒಂದು ಕಾರಣ. ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರವೃತ್ತಿಯು ರಾಜ್ಯಗಳಿಗೂ ವಿಸ್ತರಿಸಿದೆ. ರಾಜ್ಯಗಳು ಸ್ಥಳೀಯ ಸರಕಾರಗಳಿಗೆ ಅನುದಾನ ನೀಡದೆ, ಸೊರಗಿಸುತ್ತವೆ. ಹೆಚ್ಚಿನ ರಾಜ್ಯಗಳು ಅಧಿಕಾರವನ್ನು ಮುಖ್ಯಮಂತ್ರಿ ಕಚೇರಿ(ಸಿಎಂಒ)ಯಲ್ಲಿ ಕೇಂದ್ರೀಕರಿಸಲು ಯತ್ನಿಸಿವೆ. ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಾವಧಿ ಅಂತ್ಯಗೊಂಡು 4 ವರ್ಷ ಕಳೆದಿದ್ದರೂ, ಚುನಾವಣೆ ನಡೆದಿಲ್ಲ. ಕಳ್ಳಾಟ ಆಡಿಕೊಂಡು ಮುಂದೂಡಲಾಗುತ್ತಿದೆ. ಇದರಲ್ಲಿ ಬಿಜೆಪಿ-ಕಾಂಗ್ರೆಸ್ ಎರಡಕ್ಕೂ ಪಾಲಿದೆ. ಪಂಚಾಯತ್ ರಾಜ್ ಕಾಯ್ದೆ ಹೇಳಿದ ಆಡಳಿತ ವಿಕೇಂದ್ರೀಕರಣದ ಪರಿಕಲ್ಪನೆ ಹಳ್ಳ ಹಿಡಿದಿದೆ.
ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ಜನಪ್ರಿಯ ಹೋಟೆಲ್‌ಗಳಾದ ‘ಅನ್ನಪೂರ್ಣ’ದ ಮಾಲಕ ಡಿ. ಶ್ರೀನಿವಾಸನ್ ಅವರು ವಿತ್ತ ಸಚಿವೆಗೆ ‘ಬನ್‌ಗೆ ಜಿಎಸ್‌ಟಿ ಇಲ್ಲ; ಆದರೆ, ಕ್ರೀಮ್‌ಬನ್‌ಗೆ ಶೇ.18 ಜಿಎಸ್‌ಟಿ ಇದೆ. ಇದನ್ನು ಸರಿಪಡಿಸಬೇಕು’ ಎಂದರು. ಈ ವೀಡಿಯೊ ವೈರಲ್ ಆಯಿತು. ಮಾರನೇ ದಿನ ಶ್ರೀನಿವಾಸನ್ ಅವರು ಸಚಿವೆಯ ಕ್ಷಮೆಯಾಚನೆ ಮಾಡುತ್ತಿರುವ ವೀಡಿಯೊವನ್ನು ತಮಿಳುನಾಡು ಬಿಜೆಪಿ ಬಿಡುಗಡೆಗೊಳಿಸಿತು. ಈ ವೀಡಿಯೊ ಕೂಡ ವೈರಲ್ ಆಯಿತು. ಪ್ರತಿಪಕ್ಷಗಳು ವಿತ್ತ ಸಚಿವೆಯನ್ನು ಖಂಡಿಸಿದವು. ಆದರೆ, ನಿರ್ಮಲಾ ಸೀತಾರಾಮನ್ ಕ್ಯಾರೇ ಎನ್ನಲಿಲ್ಲ. ಇವರ ಬಳಿ ಒಕ್ಕೂಟ ತತ್ವ, ಜಿಎಸ್‌ಟಿ ವ್ಯವಸ್ಥೆಯ ತಾರ್ಕಿಕೀಕರಣ, ವಿಕೇಂದ್ರೀಕರಣ ಎಂದು ಮಾತನ್ನಾಡುವುದರಿಂದ ಪ್ರಯೋಜನ ಆಗುವುದಿಲ್ಲ ಎಂದುಕೊಳ್ಳಬಹುದು. ಆದರೆ, ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ.