ತಿನಿಸಿನ ಪೊಟ್ಟಣದಿಂದ ಲಾಭದ ಕುಯಿಲು
ಪೊಟ್ಟಣೀಕೃತ ಆಹಾರ-ಪೇಯಗಳ ಉತ್ಪಾದಕರು ಧನಾಢ್ಯರು. ಬೇರೆ ದೇಶಗಳಲ್ಲಿ ಎಫ್‌ಒಪಿಎಲ್‌ಗೆ ಸಮ್ಮತಿಸುವ ಕಂಪೆನಿಗಳು ಭಾರತದಲ್ಲಿ ಬೇರೆ ರಾಗ ಹಾಡುತ್ತವೆ. ದೇಶದಲ್ಲಿ ಸಂಸ್ಕರಿಸಿದ ಮತ್ತು ಅತಿಯಾಗಿ ಸಂಸ್ಕರಿಸಿದ ಜಂಕ್ ಆಹಾರ ಸೇವನೆ ಹೆಚ್ಚುತ್ತಿದ್ದು, ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಎಫ್‌ಎಸ್‌ಎಸ್‌ಎಐ ಮೇಲೆ ಒತ್ತಡ ಹೇರಿರುವ ಉದ್ಯಮಿಗಳು ಎಫ್‌ಒಪಿಎಲ್ ಅನುಷ್ಠಾನಕ್ಕೆ ತಡೆ ಒಡ್ಡಿರುವುದಲ್ಲದೆ, ಇಡೀ ನಿಯಮವನ್ನೇ ತೆಳುಗೊಳಿಸಿಬಿಟ್ಟಿದ್ದಾರೆ.
‘‘ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಉಪ್ಪು ಇದೆಯೇ?’’ ಎಂದು ಕೇಳುವ ಜಾಹೀರಾತು ನೋಡಿರುತ್ತೀರಿ. ಆದರೆ, ಕೋಲಾ, ಐಸ್‌ಕ್ರೀಮ್, ನೂಡಲ್ಸ್, ಬಿಸ್ಕತ್, ಖಾರಬೂಂದಿ, ಚಿಪ್ಸ್ .......ಇತ್ಯಾದಿ ಪೊಟ್ಟಣೀಕೃತ ಆಹಾರ-ಪೇಯಗಳಲ್ಲಿ ಎಷ್ಟು ಉಪ್ಪು, ಸಕ್ಕರೆ ಅಥವಾ ಕೊಬ್ಬಿನಂಶ ಇದೆ ಎನ್ನುವುದು ಗೊತ್ತಿದೆಯೇ? 100 ಗ್ರಾಂ ಖಾರಬೂಂದಿಯಲ್ಲಿ 1,070 ಮಿಲಿಗ್ರಾಂ ಸೋಡಿಯಂ ಇದೆ ಎಂದಾದಲ್ಲಿ, ಐದು ಚಮಚ ಬೂಂದಿಯಲ್ಲಿ ಎಷ್ಟು ಉಪ್ಪು ಇದ್ದಂತೆ ಆಗಲಿದೆ? 15 ಗ್ರಾಂ ಚಾಕಲೆಟ್‌ನಲ್ಲಿ ಎಷ್ಟು ಸಕ್ಕರೆ, ಕೊಬ್ಬು ಇರುತ್ತದೆ? ನಮ್ಮಲ್ಲಿ ಹೆಚ್ಚಿನವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸೇವಿಸುವ ಕ್ಯಾಲೊರಿಗಳ ಬಗ್ಗೆ ಕಾಳಜಿ ಇರುವವರಿಗೆ ಪೊಟ್ಟಣದ ಮೇಲಿನ ಮಾಹಿತಿಯಿಂದ ವಿಷಯ ಗೊತ್ತಾಗುವುದಿಲ್ಲ. ಮಾಹಿತಿ ಇದ್ದರೂ, ಇಂಗ್ಲಿಷ್‌ನಲ್ಲಿರುವುದರಿಂದ ಹೆಚ್ಚಿನವರಿಗೆ ಅರ್ಥವಾಗುವುದಿಲ್ಲ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಇಂಡಿಯನ್ ಫುಡ್ ಸೆಕ್ಯುರಿಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ, ಎಫ್‌ಎಸ್‌ಎಸ್‌ಎಐ) ಆಹಾರದ ಪೊಟ್ಟಣಗಳ ಮೇಲೆ ಕ್ಯುಆರ್(ಕ್ವಿಕ್ ರೆಸ್ಪಾನ್ಸ್) ಕೋಡ್ ಅಳವಡಿಸಬೇಕೆಂದು ಶಿಫಾರಸು ಮಾಡಿದ್ದು, ಇದರಿಂದ ದೃಷ್ಟಿವಿಕಲಚೇತನರಿಗೆ ಸುರಕ್ಷಿತ-ಆರೋಗ್ಯಕರ ಆಹಾರ ಲಭ್ಯವಾಗಲಿದೆ ಎಂದು ಹೇಳಿದೆ. ಪ್ರತಿಯೊಬ್ಬ ಗ್ರಾಹಕರಿಗೂ ತಾನೇನು ತಿನ್ನುತ್ತಿದ್ದೇನೆ, ಎಷ್ಟು ಹಣ ಪಾವತಿಸುತ್ತಿದ್ದೇನೆ ಮತ್ತು ಖರೀದಿಸಿದ ಉತ್ಪನ್ನಗಳು ಉತ್ಪಾದಕ ಘೋಷಿಸಿರುವಂತೆ ಇವೆಯೇ ಎಂದು ತಿಳಿದುಕೊಳ್ಳುವ ಹಕ್ಕು ಇದೆ. ದೇಶ ಪೊಟ್ಟಣೀಕೃತ ಆಹಾರದ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು, 2022ರಲ್ಲಿ 32 ಶತಕೋಟಿ ಡಾಲರ್ ವಹಿವಾಟು ನಡೆದಿದೆ; 2029ಕ್ಕೆ ವಹಿವಾಟು 86 ಶತಕೋಟಿ ಡಾಲರ್ ಆಗಲಿದೆ ಎಂದು ಅಖಿಲ ಭಾರತ ಆಹಾರ ಸಂಸ್ಕರಣೆಗಾರರ ಸಂಘಟನೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು(ನಾನ್ ಕಮ್ಯುನಿಕಬಲ್ ಡಿಸೀಸಸ್, ಎನ್‌ಸಿಡಿ) ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಇದಕ್ಕಿರುವ ಹಲವು ಕಾರಣಗಳಲ್ಲಿ ಒಂದು-ಸುಲಭವಾಗಿ ಲಭ್ಯವಾಗುವ, ನಿರಂತರ ಪ್ರಚಾರದ ಮೂಲಕ ಜನರನ್ನು ಆಕರ್ಷಿಸುತ್ತಿರುವ ಪ್ಯಾಕೇಜ್ಡ್ ಆಹಾರಗಳು.
ಆದರೆ, ಪ್ರಶ್ನೆಯಿರುವುದು ಪೊಟ್ಟಣದ ಮುಂಭಾಗದಲ್ಲಿ ಚೀಟಿ ಅಂಟಿಸುವಿಕೆ (ಎಫ್‌ಒಪಿಎಲ್, ಫ್ರಂಟ್ ಆಫ್ ಪ್ಯಾಕ್ ಲೇಬಲಿಂಗ್) ವ್ಯವಸ್ಥೆಯನ್ನೇ ಕಡ್ಡಾಯಗೊಳಿಸಲಾಗದ ಮತ್ತು ರೆಡ್ ಕೋಡಿಂಗ್ ಅಳವಡಿಸಲು ಹಿಂದೆಮುಂದೆ ನೋಡುತ್ತಿರುವ ಎಫ್‌ಎಸ್‌ಎಸ್‌ಎಐ, ಕ್ಯುಆರ್ ಕೋಡ್ ಅಳವಡಿಸುತ್ತದೆ ಎಂದು ನಂಬುವುದು ಹೇಗೆ? ಸಕ್ಕರೆ, ಕೊಬ್ಬು ಮತ್ತು ಉಪ್ಪಿನಂಶ ಅಪಾಯಕರ ಮಟ್ಟದಲ್ಲಿ ಇರುವ ಆಹಾರ ಪೊಟ್ಟಣಗಳ ಮೇಲೆ ಸಿಗರೇಟ್ ಪ್ಯಾಕ್ ಮೇಲೆ ಇರುವಂತೆ ಎಚ್ಚರಿಕೆ(ರೆಡ್ ಕೋಡಿಂಗ್) ಮುದ್ರಿಸಬೇಕೆಂದು ಗ್ರಾಹಕ ಸಂಘಟನೆಗಳು ದೀರ್ಘ ಕಾಲದಿಂದ ಹೋರಾಟ ಮಾಡುತ್ತಿವೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಪೊಟ್ಟಣ ಕಟ್ಟುವಿಕೆ ಮತ್ತು ಚೀಟಿ ಅಂಟಿಸುವಿಕೆ) ನಿಯಮಗಳು 2011ರ ಪ್ರಕಾರ, ಸಂಸ್ಕರಿಸಿದ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಪೋಷಕಾಂಶ ಕುರಿತ ಮಾಹಿತಿ ಇರಬೇಕು. ಇದರಿಂದ ಗ್ರಾಹಕನಿಗೆ ತಾನು ಏನು ತಿನ್ನುತ್ತಿದ್ದೇನೆ ಮತ್ತು ಎಷ್ಟು ತಿನ್ನಬೇಕು ಎನ್ನುವುದು ತಿಳಿಯುತ್ತದೆ. ಜಗತ್ತಿನೆಲ್ಲೆಡೆ ಪೊಟ್ಟಣ ಆಹಾರ ಉದ್ಯಮ ಕೊಬ್ಬು, ಉಪ್ಪು ಇಲ್ಲವೇ ಸಕ್ಕರೆ ಅಧಿಕ ಪ್ರಮಾಣದಲ್ಲಿರುವ ಹಾಗೂ ನಾರು ಮತ್ತು ಇನ್ನಿತರ ಸೂಕ್ಷ್ಮ ಪೋಷಕಾಂಶಗಳು ಕಡಿಮೆ ಇರುವ ಅಥವಾ ಇಲ್ಲದ ಅತಿಯಾಗಿ ಸಂಸ್ಕರಿಸಿದ ಆಹಾರಗಳ ಮಾರಾಟದ ಮೂಲಕ ರೋಗಗಳಿಗೆ ಕಾರಣವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಇಂತಹ ಮಾಹಿತಿ ನೀಡುವುದು ಮುಖ್ಯವಾಗುತ್ತದೆ. ಪೊಟ್ಟಣೀಕೃತ ಆಹಾರ-ಪೇಯ(ಅಥವಾ ಜಂಕ್ ಆಹಾರ)ಗಳು ಪೋಷಕಾಂಶ ಕೊರತೆ, ಬೊಜ್ಜು ಹಾಗೂ ಆಹಾರಕ್ಕೆ ಸಂಬಂಧಿಸಿದ ಇನ್ನಿತರ ಸಾಂಕ್ರಾಮಿಕವಲ್ಲದ ರೋಗಗಳಿಗೆ (ಮಧುಮೇಹ-2, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್) ಕಾರಣವಾಗುತ್ತವೆ; ಆ ಮೂಲಕ ಅಕಾಲಿಕ ಮರಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು ದೂರಲಾಗಿದೆ.
ಪೊಟ್ಟಣದಲ್ಲೇನಿದೆ ಎಂಬ ಮಹತ್ವದ ಮಾಹಿತಿಯು ಕಣ್ಸೆಳೆಯುವ, ವರ್ಣಭರಿತ ಪೊಟ್ಟಣದ ಯಾವುದೋ ಮೂಲೆಯಲ್ಲಿ ಸಂಕ್ಷಿಪ್ತವಾಗಿ ಮತ್ತು ಅತಿ ಸಣ್ಣ ಅಕ್ಷರಗಳಲ್ಲಿ ಇರುತ್ತದೆ. ಇದು ಗ್ರಾಹಕನ ಕಣ್ಣಿಗೆ ಬೀಳದೆ ಇರಬಹುದು ಇಲ್ಲವೇ ಅರ್ಥ ಮಾಡಿಕೊಳ್ಳಲು ಆಗದೆ ಇರಬಹುದು. ಮಾಹಿತಿಯನ್ನು ಕೋಷ್ಠಕದಲ್ಲಿ ಮುದ್ರಿಸುವ ಬದಲು ಸಾಮಾನ್ಯ ಪಠ್ಯದಂತೆ ಸಾಲಾಗಿ ಬಳಸಿರುತ್ತಾರೆ. ಜೊತೆಗೆ, ಪೊಟ್ಟಣಗಳ ಮೇಲೆ ಇರುವ ಭಾಷೆ ಇಂಗ್ಲಿಷ್, ಹೆಚ್ಚಿನವರಿಗೆ ಕಬ್ಬಿಣದ ಕಡಲೆ.
ಸರಣಿಯೋಪಾದಿಯಲ್ಲಿ ತಜ್ಞರ ಸಮಿತಿಗಳ ನೇಮಕ
ಶಾಲೆಗಳ ಸುತ್ತ ಜಂಕ್ ಆಹಾರ ಮಾರಾಟ ನಿಷೇಧಿಸಬೇಕೆಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ತಜ್ಞರ ಸಮಿತಿಯೊಂದನ್ನು ನೇಮಿಸಬೇಕೆಂದು ಆದೇಶ ನೀಡಿತ್ತು. ಅದರನ್ವಯ ಎಫ್‌ಎಸ್‌ಎಸ್‌ಎಐ 2014ರಲ್ಲಿ ನೇಮಿಸಿದ ತಜ್ಞರ ಸಮಿತಿಯು ಪೊಟ್ಟಣದ ಮುಂಭಾಗದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂಶ ಎಷ್ಟಿದೆ ಎಂಬ ಮಾಹಿತಿ ಇರುವ ಚೀಟಿ ಅಂಟಿಸಬೇ ಕೆಂದು ಶಿಫಾರಸು ಮಾಡಿತು. ಇದರಿಂದ ಜಂಕ್ ಆಹಾರದ ಸೇವನೆಯ ನಿಯಂತ್ರಣ ಸಾಧ್ಯವಿದೆ ಎನ್ನುವುದು ಸಮಿತಿ ಅಭಿಪ್ರಾಯವಾಗಿತ್ತು.
ಗ್ರಾಹಕರು ಆರೋಗ್ಯಕರ ಆಹಾರ ಬಳಸುವಂತೆ ಪ್ರೇರೇಪಿಸುವ ಒಂದು ಉತ್ತಮ ವಿಧಾನ ಎಂದು ಎಫ್‌ಒಪಿಎಲ್ ಜಗತ್ತಿನೆಲ್ಲೆಡೆ ಪರಿಗಣಿಸಲ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು ಎಫ್‌ಒಪಿಎಲ್ ‘ಆಹಾರ ಪೊಟ್ಟಣದ ಮುಂಭಾಗದಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುವಂತೆ ಉತ್ಪನ್ನದಲ್ಲಿರುವ ಪೋಷಕಾಂಶ ಘಟಕಗಳು ಅಥವಾ ಗುಣಮಟ್ಟದ ಮಾಹಿತಿಯನ್ನು ಸರಳವಾಗಿ, ಗ್ರಾಫಿಕ್‌ನಂತೆ ಇರಬೇಕು. ಇದು ಪೊಟ್ಟಣದ ಹಿಂಭಾಗದಲ್ಲಿರುವ ಪೋಷಕಾಂಶ ಮಾಹಿತಿಗೆ ಪೂರಕವಾಗಿರಬೇಕು’ ಎಂದು ವ್ಯಾಖ್ಯಾನಿಸುತ್ತದೆ. ಡಬ್ಲ್ಯುಎಚ್‌ಒ ಹಾಗೂ ಆಹಾರ ಮತ್ತು ಕೃಷಿ ಸಂಘಟನೆ(ಎಫ್‌ಎಒ) ಜಂಟಿಯಾಗಿ ಸ್ಥಾಪಿಸಿದ ಅಂತರ್‌ರಾಷ್ಟ್ರೀಯ ಆಹಾರ ಮಾನದಂಡಗಳ ಸಂಸ್ಥೆಯಾದ ಕೋಡೆಕ್ಸ್ ಅಲಿಮೆಂಟೇರಿಯನ್ ಆಯೋಗ ಕೂಡ ‘ಎಫ್‌ಒಪಿಎಲ್‌ನ್ನು ಗ್ರಾಹಕರು ಪೋಷಕಾಂಶ ಕುರಿತ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಬೇಕಿದೆ’ ಎನ್ನುತ್ತದೆ. ಚಿಲಿ, ಬ್ರೆಝಿಲ್ ಮತ್ತು ಇಸ್ರೇಲ್ ಎಫ್‌ಒಪಿಎಲ್‌ನ್ನು ಕಡ್ಡಾಯಗೊಳಿಸಿವೆ. ಆದರೆ, ಭಾರತದಲ್ಲಿ 9 ವರ್ಷಗಳ ಬಳಿಕವೂ ಈ ವ್ಯವಸ್ಥೆ ಜಾರಿಗೊಂಡಿಲ್ಲ; ಮಾಂಸಾಹಾರಕ್ಕೆ ಹಸಿರು ಚೌಕದಲ್ಲಿ ಹಸಿರು ವೃತ್ತ ಹಾಗೂ ಸಸ್ಯಾಹಾರಕ್ಕೆ ಕಂದು ಚೌಕದಲ್ಲಿ ಕಂದು ಬಣ್ಣದ ವೃತ್ತದ ಗುರುತು ಜನಪ್ರಿಯವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ಇದನ್ನು ತಿನಿಸುಗಳಿಗೂ ಅಳವಡಿಸಬೇಕು ಎನ್ನುವುದು ಗ್ರಾಹಕ ಹಕ್ಕುಗಳ ಹೋರಾಟಗಾರರ ಆಗ್ರಹ. ಇದು ನ್ಯಾಯಯುತವಾದದ್ದು ಕೂಡ. ಸಿಗರೇಟ್ ಪ್ಯಾಕ್‌ಗಳ ಮೇಲೆ ಮುದ್ರಿಸಿರುವ ಎಚ್ಚರಿಕೆ ಚಿಹ್ನೆಯಂತೆ ಅದು ಕೆಲಸ ಮಾಡುತ್ತದೆ.
ಪೊಟ್ಟಣೀಕೃತ ಆಹಾರ-ಪೇಯಗಳ ಉತ್ಪಾದಕರು ಧನಾಢ್ಯರು. ಬೇರೆ ದೇಶಗಳಲ್ಲಿ ಎಫ್‌ಒಪಿಎಲ್‌ಗೆ ಸಮ್ಮತಿಸುವ ಕಂಪೆನಿಗಳು ಭಾರತದಲ್ಲಿ ಬೇರೆ ರಾಗ ಹಾಡುತ್ತವೆ. ದೇಶದಲ್ಲಿ ಸಂಸ್ಕರಿಸಿದ ಮತ್ತು ಅತಿಯಾಗಿ ಸಂಸ್ಕರಿಸಿದ ಜಂಕ್ ಆಹಾರ ಸೇವನೆ ಹೆಚ್ಚುತ್ತಿದ್ದು, ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಎಫ್‌ಎಸ್‌ಎಸ್‌ಎಐ ಮೇಲೆ ಒತ್ತಡ ಹೇರಿರುವ ಉದ್ಯಮಿಗಳು ಎಫ್‌ಒಪಿಎಲ್ ಅನುಷ್ಠಾನಕ್ಕೆ ತಡೆ ಒಡ್ಡಿರುವುದಲ್ಲದೆ, ಇಡೀ ನಿಯಮವನ್ನೇ ತೆಳುಗೊಳಿಸಿಬಿಟ್ಟಿದ್ದಾರೆ.
2015ರಲ್ಲಿ ದಿಲ್ಲಿ ಮೂಲದ ಸಾರ್ವಜನಿಕ-ಖಾಸಗಿ ಉಪಕ್ರಮವಾದ ಪಬ್ಲಿಕ್ ಫೌಂಡೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಡಿ.ಪ್ರಭಾಕರನ್ ನೇತೃತ್ವದ ಸಮಿತಿಯನ್ನು ನೇಮಿಸಿದ ಎಫ್‌ಎಸ್‌ಎಸ್‌ಎಐ, ಕೊಬ್ಬು, ಸಕ್ಕರೆ ಹಾಗೂ ಉಪ್ಪಿನ ಅಂಶ ಹೆಚ್ಚು ಇರುವ ಆಹಾರಗಳ ಪರಿಶೀಲನೆ, ಪ್ರಮಾಣದ ನಿಯಂತ್ರಣ ಹಾಗೂ ಪೊಟ್ಟಣದ ಮುಂಭಾಗದಲ್ಲಿ ಚೀಟಿ ಅಂಟಿಸುವಿಕೆಗೆ ಸಂಬಂಧಿಸಿದಂತೆ ಶಿಫಾರಸು ನೀಡಲು ಸೂಚಿಸಿತು. ಸಮಿತಿ 2 ವರ್ಷಗಳ ಬಳಿಕ, ಪೋಷಕಾಂಶ ಮಾಹಿತಿಯನ್ನು ಸುಲಭವಾಗಿ ಅರ್ಥವಾಗುವಂತೆ ನೀಡುವುದು ಸೇರಿದಂತೆ ಹಲವು ಶಿಫಾರಸು ಮಾಡಿತು. 2018ರಲ್ಲಿ ಆಹಾರ ಸುರಕ್ಷತೆ ಮಾನದಂಡ(ಚೀಟಿ ಅಂಟಿಸುವಿಕೆ ಮತ್ತು ಪ್ರದರ್ಶನ) ನಿಯಮಗಳ ಕರಡು ಪ್ರಕಟಿಸಿದ ಎಫ್‌ಎಸ್‌ಎಸ್‌ಎಐ, ಪೊಟ್ಟಣಗಳಿಗೆ ಎಫ್‌ಒಇಎಸ್ ವ್ಯವಸ್ಥೆಯನ್ನು ಪ್ರಸ್ತಾಪಿಸಿತು. ಪೊಟ್ಟಣದ ಮುಂಭಾಗದಲ್ಲಿ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಅಂಶ ಎಷ್ಟು ಇದೆ ಎಂದು ಪ್ರಕಟಿಸಬೇಕು; ಮಿತಿಯನ್ನು ಮೀರಿದ ಅಂಶಗಳು ಕೆಂಪು ಬಣ್ಣದಲ್ಲಿರಬೇಕು ಎಂದು ಸೂಚಿಸಿತು.
ಅಷ್ಟಕ್ಕೆ ಸುಮ್ಮನಿರದೆ ಕೆಲವು ತಿಂಗಳುಗಳ ಬಳಿಕ ನ್ಯಾಷನಲ್ ನ್ಯೂಟ್ರಿಷನ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಬಿ.ಶಶಿಕಿರಣ್ ನೇತೃತ್ವದ ಇನ್ನೊಂದು ಸಮಿತಿ ನೇಮಿಸಿತು. ಶಶಿಕಿರಣ್ ಸಾರ್ವಜನಿಕ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿರುವ ವೈಜ್ಞಾನಿಕ ಗುಂಪು ಎಂಬ ಫಲಕ ಹಾಕಿಕೊಂಡು ಉದ್ಯಮದ ಪರ ಕೆಲಸ ಮಾಡುತ್ತಿದ್ದ ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಲೈಫ್ ಸೈನ್ಸ್ ಇನ್‌ಸ್ಟಿಟ್ಯೂಟ್ ಜೊತೆಗೆ ಸಂಪರ್ಕ ಹೊಂದಿದ್ದರು ಎಂದು ಗೊತ್ತಾಯಿತು. ಈ ಸಮಿತಿ ಮಾಡಿದ ಶಿಫಾರಸುಗಳು ಬಹಿರಂಗಗೊಳ್ಳಲಿಲ್ಲ. ಆದರೆ, ಎಫ್‌ಎಸ್‌ಎಸ್‌ಎಐ ಜುಲೈ 2019ರಲ್ಲಿ 2018ರ ತನ್ನದೇ ಶಿಫಾರಸುಗಳನ್ನು ಪೇಲವಗೊಳಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತು. ಉಪ್ಪಿನ ಬದಲು ಸೋಡಿಯಂ, ಒಟ್ಟು ಕೊಬ್ಬನ್ನು ಸಂತೃಪ್ತ ಕೊಬ್ಬು ಮತ್ತು ಒಟ್ಟು ಸಕ್ಕರೆಯನ್ನು ಸೇರ್ಪಡೆಗೊಳಿಸಿದ ಸಕ್ಕರೆ ಎಂದು ಬದಲಿಸಿತು. ಪೊಟ್ಟಣ ಆಹಾರಗಳ ಮುಖ್ಯ ಗುರಿ-ಮಕ್ಕಳು ಮತ್ತು ಹದಿಹರೆಯದವರು. ಗ್ರಾಹಕರಿಗೆ ಸೋಡಿಯಂ ಎಂದರೇನು ಎನ್ನುವುದು ಗೊತ್ತಿರುವುದಿಲ್ಲ ಮತ್ತು ಅದರಿಂದ ಉಪ್ಪಿನ ಪ್ರಮಾಣವನ್ನು ಲೆಕ್ಕ ಹಾಕುವುದು ಕಷ್ಟಕರ. ಸಂತೃಪ್ತ ಕೊಬ್ಬು ಪ್ರಬುದ್ಧ ವಯಸ್ಕರಲ್ಲಿ ಹೃದ್ರೋಗಕ್ಕೆ ಹಾಗೂ ಒಟ್ಟು ಕೊಬ್ಬು(ಟೋಟಲ್ ಫ್ಯಾಟ್) ಮಕ್ಕಳಲ್ಲಿ ಬೊಜ್ಜು ಹಾಗೂ ಸಂಬಂಧಿಸಿದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಆಹಾರದಲ್ಲಿ ಅಂತರ್ಗತವಾಗಿರುವ ಸಕ್ಕರೆಯನ್ನು ‘ಸೇರ್ಪಡೆಗೊಳಿಸಿದ ಸಕ್ಕರೆ’ಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಮತ್ತು ಇಂತಹ ಸೇರ್ಪಡಿಸಿದ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ಯಾವುದೇ ವೈಜ್ಞಾನಿಕ ವಿಧಾನದಿಂದ ಅಳೆಯಲು ಸಾಧ್ಯವಿಲ್ಲ. ಯಾರು ಸೇರಿಸಿರುತ್ತಾರೋ ಅವರು ಮಾತ್ರ ಅದನ್ನು ಹೇಳಬಲ್ಲರು! ಇಷ್ಟೆಲ್ಲ ತೆಳುಗೊಳಿಸುವಿಕೆ ಬಳಿಕವೂ ಉದ್ಯಮ ‘ಕೆಂಪು ಬಣ್ಣದ ಕೋಡಿಂಗ್’ಗೆ ವಿರೋಧ ಮುಂದುವರಿಸಿತು.
ಆನಂತರ ಎಫ್‌ಎಸ್‌ಎಸ್‌ಎಐ, ಎಫ್‌ಒಪಿಎಲ್ ಹೊರತುಪಡಿಸಿದ 2019ರ ಕರಡು ಪ್ರಕಟಿಸಿತು. ಪೋಷಣೆ, ವೈದ್ಯಕೀಯ ಮತ್ತು ವೈಜ್ಞಾನಿಕ ಸದಸ್ಯರಿರುವ ಗುಂಪೊಂದನ್ನು ರಚಿಸಿ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಿತಿಯನ್ನು ಪುನರ್‌ಪರಿಶೀಲಿಸಲು ಸೂಚಿಸಿತು. ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಶ್ಯ ಪ್ರಾಂತಕ್ಕೆ ನಿಗದಿಪಡಿಸಿದ ಮಿತಿಗಳನ್ನು ಎಫ್‌ಎಸ್‌ಎಸ್‌ಎಐ ಸೂಚಿಸಿದ ಪ್ರಮಾಣದೊಟ್ಟಿಗೆ ಹೋಲಿಸಲು ಪೋಷಕಾಂಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಂಬೈ ಮೂಲದ ‘ದ ನ್ಯೂಟ್ರಿಷನ್ ಅಲ್ಕೆಮಿ(ಟಿಎನ್‌ಎ)’ಯನ್ನು ನೇಮಿಸಿತು. ಟಿಎನ್‌ಎ 1,300ಕ್ಕೂ ಅಧಿಕ ಪೊಟ್ಟಣ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಡಿಸೆಂಬರ್ 2020ರಲ್ಲಿ ವರದಿ ನೀಡಿತು. ಟಿಎನ್‌ಎ ಸೂಚಿಸಿದ್ದ ಮಿತಿಗಳು ಉದ್ಯಮಕ್ಕೆ ಪೂರಕವಾಗಿದ್ದವು; ಸಾರ್ವಜನಿಕ ಆರೋಗ್ಯಕ್ಕೆ ಸೂಕ್ತವಾಗಿರಲಿಲ್ಲ. ಹೆಚ್ಚು ಪ್ರಮಾಣದ ಕೊಬ್ಬು, ಸಕ್ಕರೆ ಇಲ್ಲವೇ ಉಪ್ಪನ್ನು ಆರೋಗ್ಯಕರ ಎಂದು ಪರಿಗಣಿಸಿತ್ತು. ಅಪಾಯಕರ ಅಂಶಗಳ ಮಿತಿಗಳನ್ನು ಅನಾರೋಗ್ಯಕರ ಮಟ್ಟಕ್ಕೆ ಹೆಚ್ಚಿಸಿತ್ತು. ಅವುಗಳಿಗೆ ವಿಧಿಸಿದ್ದ ಮಿತಿ 2018 ಮತ್ತು 2019ರ ಕರಡು ಪ್ರಸ್ತಾಪದಲ್ಲಿ ಇದ್ದುದಕ್ಕಿಂತ ಹೆಚ್ಚು ಇತ್ತು; 100 ಗ್ರಾಂ ಚಾಕಲೆಟ್‌ನಲ್ಲಿ ಸಕ್ಕರೆ ಅಂಶವನ್ನು 6 ಗ್ರಾಂನಿಂದ 35 ಗ್ರಾಂಗೆ ಮತ್ತು 100 ಗ್ರಾಂ ಐಸ್‌ಕ್ರೀಮ್‌ನಲ್ಲಿ ಸಕ್ಕರೆಯನ್ನು 12 ಗ್ರಾಂನಿಂದ 22 ಗ್ರಾಂಗೆ ಹೆಚ್ಚಿಸಿತು. ಯಾವುದೇ ಪೋಷಕಾಂಶಗಳಿಲ್ಲದ ಮತ್ತು ಅತಿ ಹೆಚ್ಚು ಸಕ್ಕರೆ ಇರುವ ಕಾರ್ಬೊನೇಟೆಡ್ ಪೇಯಗಳಲ್ಲಿನ ಸಕ್ಕರೆ ಅಂಶವನ್ನು ಇನ್ನಷ್ಟು ಹೆಚ್ಚಿಸಿತ್ತು. ಡೇರಿ ಆಧರಿತ ಪೇಯಗಳು, ಸುವಾಸಿತ ಹಾಲು, ಜಾಂ, ಜೆಲ್ಲಿ, ಹಣ್ಣು ಆಧರಿತ ಡೆಸರ್ಟ್ ಗಳಲ್ಲೂ ಸಕ್ಕರೆ ಮಿತಿ ಹೆಚ್ಚಳಗೊಂಡಿತು. ಕೋಕೋ ಆಧರಿತ ಉತ್ಪನ್ನಗಳದ್ದೂ ಇದೇ ಕತೆ. ಮಕ್ಕಳು-ಹದಿಹರೆಯದವರ ಜನಪ್ರಿಯ ತಿನಿಸುಗಳಲ್ಲಿನ ಒಟ್ಟು ಸಕ್ಕರೆ ಮತ್ತು ಸಂತೃಪ್ತ ಕೊಬ್ಬಿನಂಶ ಹಲವು ಪಟ್ಟು ಹೆಚ್ಚಳಗೊಂಡಿತ್ತು.
ದಿಲ್ಲಿ ಮೂಲದ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್, ಮಾರುಕಟ್ಟೆಯಲ್ಲಿದ್ದ ದೇಶ-ವಿದೇಶಗಳ 33 ಜನಪ್ರಿಯ ಪೊಟ್ಟಣ-ಫಾಸ್ಟ್ ಫುಡ್(ಚಿಪ್ಸ್, ನೂಡಲ್ಸ್, ಸೂಪ್, ಬರ್ಗರ್, ಪಿಜ್ಜಾ, ಫ್ರೈಗಳು, ಸ್ಯಾಂಡ್‌ವಿಚ್, ಕೋಲಾ ಇತ್ಯಾದಿ)ಗಳನ್ನು ಪರಿಶೀಲಿಸಿದಾಗ, ಹೆಚ್ಚಿನವು ಅಪಾಯಕರ ಪ್ರಮಾಣದಲ್ಲಿ ಉಪ್ಪು ಮತ್ತು ಒಟ್ಟು ಕೊಬ್ಬಿನಂಶ ಹೊಂದಿದ್ದು ಪತ್ತೆಯಾಯಿತು. ಈ ಅಂಶಗಳು 2018ರ ಕರಡಿನಲ್ಲಿ ಶಿಫಾರಸು ಮಾಡಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಇತ್ತು.
ಧನಾತ್ಮಕ ಪೋಷಕಾಂಶ ಎಂಬ ತಂತ್ರ
ಜೂನ್ 30,2021ರಲ್ಲಿ ಸರಣಿ ಸಭೆಗಳನ್ನು ನಡೆಸಿದ ಎಫ್‌ಎಸ್‌ಎಸ್‌ಎಐ, ಎಫ್‌ಒಪಿಎಲ್‌ನಲ್ಲಿ ‘ಧನಾತ್ಮಕ ಪೋಷಕಾಂಶ’(ಪ್ರೊಟೀನ್, ಬೇಳೆಕಾಳು, ಹಣ್ಣು, ತರಕಾರಿ ಇತ್ಯಾದಿ)ಗಳನ್ನು ಪರಿಗಣಿಸಲು ಮುಂದಾಯಿತು. ಜಂಕ್ ಆಹಾರವನ್ನು ಪರಿಪೂರ್ಣ ಎಂದು ಬಿಂಬಿಸಲು ನಡೆದ ಈ ಪ್ರಯತ್ನವನ್ನು ಉದ್ಯಮ ತೆರೆದ ಬಾಹುಗಳಿಂದ ಸ್ವಾಗತಿಸಿತು. ಗ್ರಾಹಕರನ್ನು ದಾರಿ ತಪ್ಪಿಸಲು ನಡೆಸಿದ ಈ ಪ್ರಯತ್ನವು ಎಫ್‌ಒಪಿಎಲ್‌ನ ಮೂಲ ಉದ್ದೇಶವಾದ ‘ಗ್ರಾಹಕರಿಗೆ ಋಣಾತ್ಮಕ ಅಂಶಗಳ ಬಗ್ಗೆ ಮಾಹಿತಿ’ ನೀಡುವುದಕ್ಕೆ ತದ್ವಿರುದ್ಧವಾಗಿದೆ. ಜಂಕ್ ಆಹಾರದಲ್ಲಿ ಧನಾತ್ಮಕವಾದದ್ದು ಏನೂ ಇರುವುದಿಲ್ಲ; ಒಂದೆರಡು ಧನಾತ್ಮಕ ಅಂಶ ಸೇರಿಸಿದ ತಕ್ಷಣ ಅದು ಉತ್ತಮ ಆಹಾರ ಆಗುವುದಿಲ್ಲ. ಆಸ್ಟ್ರೇಲಿಯ/ನ್ಯೂಝಿಲ್ಯಾಂಡ್ ಅಳವಡಿಸಿಕೊಂಡಿರುವ ಹೆಲ್ತ್ ಸ್ಟಾರ್ ರೇಟಿಂಗ್ ವ್ಯವಸ್ಥೆಯಲ್ಲಿ ಸ್ಟಾರ್‌ಗಳನ್ನು ಹಾಗೂ ಫ್ರಾನ್ಸ್/ಬೆಲ್ಜಿಯಂ ಅಳವಡಿಸಿಕೊಂಡಿರುವ ನ್ಯೂಟ್ರಿಷನ್ ಸ್ಕೋರ್ ವ್ಯವಸ್ಥೆಯಲ್ಲಿ ಅಕ್ಷರಗಳನ್ನು ಧನಾತ್ಮಕ ಪೋಷಕಾಂಶಗಳಿಗೆ ನೀಡಲಾಗುತ್ತದೆ. ಇವು ಗ್ರಾಹಕಸ್ನೇಹಿಯಲ್ಲ; ಸಂಕೀರ್ಣವಾಗಿರುತ್ತವೆ. ಅರ್ಥ ಮಾಡಿಕೊಳ್ಳುವುದು ಕಷ್ಟ. ಯಾವ ಋಣಾತ್ಮಕ ಅಂಶ ಎಷ್ಟು ಇದೆ ಎಂದು ಹೇಳುವುದಿಲ್ಲ. ಎಫ್‌ಎಸ್‌ಎಸ್‌ಎಐ ಇಷ್ಟಕ್ಕೆ ಸುಮ್ಮನಿರದೆ, ಪೊಟ್ಟಣಗಳನ್ನು ದ್ರವ/ಘನ ಅಥವಾ ಆಹಾರ/ಪೇಯ ಎಂಬ ಎರಡು ವಿಸ್ತೃತ ವಿಭಾಗಗಳಲ್ಲಿ ಪ್ರತ್ಯೇಕಿಸಲು ಹೊರಟಿತು; ಮತ್ತು ಪ್ರಮುಖ ಎಫ್‌ಒಪಿಎಸ್ ಮಾದರಿಗಳನ್ನು ವಿಶ್ಲೇಷಿಸಿ, ದೇಶಕ್ಕೆ ಸೂಕ್ತವಾದ ವಿನ್ಯಾಸವನ್ನು ಅನ್ವೇಷಿಸಲು ಸಮೀಕ್ಷೆಗೆ ಮುಂದಾಯಿತು. ಇದನ್ನು ಟಿಎನ್‌ಎ ನಡೆಸಿದ ಸಮೀಕ್ಷೆಯೊಟ್ಟಿಗೆ ಅಥವಾ ಅದಕ್ಕಿಂತ ಮೊದಲೇ ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆ ಉಳಿದುಬಿಡುತ್ತದೆ. ಇಂತಹ ವೃಥಾ ಕಾಲಹರಣ ಪ್ರವೃತ್ತಿಯಿಂದ ಜನಾರೋಗ್ಯ ಕೆಡುತ್ತ ಹೋಗುತ್ತದೆ ಎನ್ನುವ ಪ್ರಾಥಮಿಕ ತಿಳಿವಳಿಕೆಯೂ ಇಲ್ಲವಾಗಿದ್ದು ದುರಂತ.
ಒಂದು ಹೆಚ್ಚೆ ಮುಂದಿಟ್ಟು 2 ಹೆಜ್ಜೆ ಹಿಂದೆಗೆಯುವ ಈ ಪ್ರವೃತ್ತಿಯಿಂದ ಗ್ರಾಹಕರು ಇನ್ನಷ್ಟು, ಮತ್ತಷ್ಟು ಹಿಂದೆ ಹೋಗಿದ್ದಾರೆ. ಅವರ ಸುರಕ್ಷತೆ ಅಪಾಯದಲ್ಲಿದೆ. ಗ್ರಾಹಕ ಸಂಘಟನೆಗಳು ದೀರ್ಘ ಕಾಲದಿಂದ ಹೋರಾಟ ನಡೆಸುತ್ತಿರುವುದು ‘ಎಚ್ಚರಿಕೆ ಲೇಬಲ್’ಗಳಿಗೆ. ಅದಕ್ಕೆ ಉದ್ಯಮ ಒಂದಲ್ಲ ಒಂದು ರೀತಿ ತಡೆಯೊಡ್ಡುತ್ತಿದೆ. ಕಠಿಣ ಕ್ರಮ ತೆಗೆದುಕೊಳ್ಳಬೇಕಿದ್ದ ನಿಯಂತ್ರಕ ವ್ಯವಸ್ಥೆ ಉದ್ಯಮದ ಪರ ಬ್ಯಾಟಿಂಗ್ ಮಾಡುತ್ತಿದೆ. ಇಲ್ಲಿ ಮಧ್ಯಮ ಮಾರ್ಗ ಎಂಬುದಿಲ್ಲ. ‘ಹೊಟ್ಟೆಗೇನು ತಿನ್ನುತ್ತೀ’ ಎಂದು ಕೇಳಿದರೆ ಉತ್ತರಿಸಲಾಗದ ಅಯೋಮಯ ಸ್ಥಿತಿ.