ಡಿಜಿಟಲ್ ದತ್ತಾಂಶ ಸಂರಕ್ಷಣೆ ಮಸೂದೆಯಿಂದ ಆರ್‌ಟಿಐಗೆ ಗುನ್ನ

Update: 2023-08-11 03:56 GMT

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಸೂದೆಗಳ ಭರಪೂರ ಸುರಿಮಳೆ. ಅರಣ್ಯ ಸಂರಕ್ಷಣೆ(ತಿದ್ದುಪಡಿ)ಕಾಯ್ದೆ, ಜೈವಿಕ ವೈವಿಧ್ಯ ಕಾಯ್ದೆಗೆ ಅಂಗೀಕಾರದ ಬಳಿಕ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆ(ಡಿಪಿಡಿಪಿ)ಗೆ ಸಮ್ಮತಿ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಇನ್ನೊಂದು ಜನಪರ ಕಾಯ್ದೆಯಾದ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಗೆ ಗುನ್ನ ಬಿದ್ದಿದೆ.

ಆರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಖಾಸಗಿತನ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳಿತ್ತು. ೨೦೧೭ರಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ(ಎಂಇಐಟಿವೈ) ಪರಿಣತರ ಸಮಿತಿಯೊಂದನ್ನು ರಚಿಸಿತ್ತು. ಡಿಸೆಂಬರ್ ೨೦೨೧ರಲ್ಲಿ ದತ್ತಾಂಶ ಸಂರಕ್ಷಣೆ ಮಸೂದೆ ಸಿದ್ಧವಾದರೂ, ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಆಗಸ್ಟ್ ೩, ೨೦೨೨ರಲ್ಲಿ ಮಸೂದೆಯನ್ನು ಹಿಂಪಡೆದರು. ನವೆಂಬರ್ ೧೮,೨೦೨೨ರಲ್ಲಿ ವೈಯಕ್ತಿಕ ದತ್ತಾಂಶ ಸುರಕ್ಷತಾ ಮಸೂದೆ-೨೦೨೨ರ ಕರಡನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆಗೊಳಿಸಲಾಯಿತು. ಆದರೆ, ಬಂದ ಆಕ್ಷೇಪಗಳನ್ನು ಬಹಿರಂಗಗೊಳಿಸಲಿಲ್ಲ. ಈ ಸಂಬಂಧ ಸಲ್ಲಿಕೆಯಾದ ಮಾಹಿತಿ ಹಕ್ಕು ಅರ್ಜಿಗೆ ಸರಕಾರ ಪ್ರತಿಕ್ರಿಯಿಸಲಿಲ್ಲ. ಕೆಲ ದಿನಗಳ ಹಿಂದೆ ಸಂವಹನ ಮತ್ತು ಐಟಿ ಸ್ಥಾಯಿ ಸಮಿತಿ ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ವರದಿಯನ್ನು ಸಂಸತ್ತಿಗೆ ಸಲ್ಲಿಸಿತು. ಕರಡು ಪ್ರತಿಯನ್ನು ತಮಗೆ ತೋರಿಸಿಲ್ಲ ಹಾಗೂ ಸಮಿತಿಯ ಎದುರು ಚರ್ಚೆಗೆ ಮಂಡಿಸಿಲ್ಲ ಎಂದು ಸಮಿತಿಯಲ್ಲಿದ್ದ ಪ್ರತಿಪಕ್ಷಗಳ ಸದಸ್ಯರು ಟೀಕಿಸಿದರು. ಆದರೆ, ಆಡಳಿತ ಪಕ್ಷ ತನ್ನ ಒರಟು ಬಹುಮತದಿಂದ ಮಸೂದೆಗೆ ಅಂಗೀಕಾರ ಪಡೆಯಿತು.

ಮಸೂದೆಯಲ್ಲಿ ಏನಿದೆ?

ಡಿಜಿಟಲ್ ರೂಪದ ವೈಯಕ್ತಿಕ ದತ್ತಾಂಶದ ರಕ್ಷಣೆ ಈ ಕಾಯ್ದೆಯ ಉದ್ದೇಶ. ಆರ್ಥಿಕ ವಂಚನೆ ಸೇರಿದಂತೆ ವೈಯಕ್ತಿಕ ದತ್ತಾಂಶದ ದುರುಪಯೋಗ ತಡೆಯುವುದು ಗುರಿ. ಮಸೂದೆಯ ಪ್ರಕಾರ, * ವ್ಯಕ್ತಿಗಳಿಂದ ದತ್ತಾಂಶವನ್ನು ಏಕೆ ಸಂಗ್ರಹಿಸಲಾಗಿದೆ ಮತ್ತು ಏತಕ್ಕೆ ಬಳಸಲಾಗುತ್ತಿದೆ ಎಂದು ಸಂಸ್ಥೆ-ಕಂಪೆನಿ ತಿಳಿಸಬೇಕು *ವೈಯಕ್ತಿಕ ದತ್ತಾಂಶದ ತಿದ್ದುಪಡಿ, ಪೂರ್ಣಗೊಳಿಸುವಿಕೆ, ಸೇರ್ಪಡೆಗೊಳಿಸುವಿಕೆ ಮತ್ತು ಅಳಿಸುವಿಕೆಗೆ ಅವಕಾಶ(ವಿಧಿ ೧೨) * ದತ್ತಾಂಶ ಸಂರಕ್ಷಣೆ ಅಧಿಕಾರಿಯನ್ನು ನೇಮಿಸಿ, ಅತನ ಸಂಪರ್ಕ ವಿವರ ನೀಡಬೇಕು *ದತ್ತಾಂಶವನ್ನು ಸಂಸ್ಕರಣೆಗೆ ಯಾರಿಗೆ ನೀಡಲಾಗಿದೆ ಎಂದು ತಿಳಿಸಬೇಕು. ಸಂಸ್ಕರಣೆ ಮಾಡಿದವರು ದತ್ತಾಂಶವನ್ನು ಹಂಚಿಕೊಳ್ಳಬಾರದು(ವಿಧಿ ೧೧, ಅಧ್ಯಾಯ ೩) *ವ್ಯಕ್ತಿಯ ಮರಣ/ವೈಕಲ್ಯದ ಹಿನ್ನೆಲೆಯಲ್ಲಿ ಹಕ್ಕುಗಳ ಚಲಾವಣೆಗೆ ಬೇರೊಬ್ಬರನ್ನು ನೇಮಿಸುವ ಹಕ್ಕು(ವಿಧಿ ೧೪) *ಪ್ರತೀ ಉಲ್ಲಂಘನೆಗೆ ೫೦ರಿಂದ ೨೫೦ ಕೋಟಿ ರೂ.ವರೆಗೆ ದಂಡ *ಭಾರತೀಯ ದತ್ತಾಂಶ ಸಂರಕ್ಷಣಾ ಮಂಡಳಿ(ಐಡಿಪಿಬಿ)ರಚನೆ *ಕುಂದುಕೊರತೆ ನಿವಾರಣೆಗೆ ಅವಕಾಶ(ವಿಧಿ ೧೩).

ಆದರೆ, ಸಮಸ್ಯೆ ಇರುವುದು ಕೆಲವು ಅಂಶಗಳಲ್ಲಿ. ಅವೆಂದರೆ,

* ಬಳಕೆದಾರರ ದತ್ತಾಂಶವನ್ನು ಸಮರ್ಪಕವಾಗಿ ನಿರ್ವಹಿಸದ ಕಂಪೆನಿಗಳು ಪರಿಹಾರ ನೀಡಬೇಕೆಂಬ ಐಟಿ ಕಾಯ್ದೆ ೨೦೦೦ರ ವಿಭಾಗ ೪೩ ಎ ವಜಾಗೊಂಡಿದೆ

* ರಾಜ್ಯ ಮತ್ತು ಸಂಬಂಧಿಸಿದ ಸಂಸ್ಥೆ/ಇಲಾಖೆಗಳಿಗೆ ವಿಸ್ತೃತ ವಿನಾಯಿತಿ. ಉದಾ: ವೈಯಕ್ತಿಕ ದತ್ತಾಂಶವನ್ನು ‘ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ’ ಇಲ್ಲವೇ ಸುರಕ್ಷತೆಗಾಗಿ ‘ಕಾನೂನಿನಡಿ ಬರುವ ಕರಾರುಗಳನ್ನು ಪೂರೈಸಲು’ ಸಂಸ್ಕರಿಸಬಹುದು ಎಂಬ ಶರತ್ತು(ವಿಧಿ ೧೭(೨)(ಎ))

* ವ್ಯಕ್ತಿಯೊಬ್ಬರು ದತ್ತಾಂಶ ಸೋರಿಕೆಯಾಗಿದೆ ಎಂದು ದೂರು ನೀಡುವಾಗ ಅಪೂರ್ಣ ಮಾಹಿತಿ ನೀಡಿದಲ್ಲಿ ಅಥವಾ ಗುರುತು/ವಿಳಾಸದ ಪುರಾವೆಯನ್ನು ನೀಡದೆ ಇದ್ದಲ್ಲಿ/ತಪ್ಪಾಗಿದ್ದಲ್ಲಿ ಅಥವಾ ದತ್ತಾಂಶ ಸೋರಿಕೆ ದೂರು ಸುಳ್ಳಾಗಿದ್ದಲ್ಲಿ ೧೦,೦೦೦ ರೂ. ದಂಡ ನೀಡಬೇಕಾಗುತ್ತದೆ(ವಿಧಿ ೧೫ ಡಿ,ವಿಭಾಗ ೮)

* ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಗೆ ಮಾಡಲಾದ ತಿದ್ದುಪಡಿ ಮತ್ತು ದತ್ತಾಂಶ ಸಂರಕ್ಷಣೆ ಮಂಡಳಿಯ ಎಲ್ಲ ಸದಸ್ಯರನ್ನೂ ಕೇಂದ್ರ ಸರಕಾರ ನೇಮಿಸುತ್ತದೆ. ಈ ಮಂಡಳಿಗೆ ತೀರ್ಪು ನೀಡುವ ಅಧಿಕಾರ ಇದೆಯೇ ಹೊರತು ನಿಯಂತ್ರಣಾಧಿಕಾರವಿಲ್ಲ.

ವೈಯಕ್ತಿಕ ದತ್ತಾಂಶವನ್ನು ರಕ್ಷಿಸುವುದೇ?

ಮಸೂದೆ ವೈಯಕ್ತಿಕ ದತ್ತಾಂಶದ ದುರುಪಯೋಗವನ್ನು ತಡೆಯುವ ಉದ್ದೇಶ ಹೊಂದಿದ್ದರೂ, ಕಾಯ್ದೆಯ ವಿನ್ಯಾಸ ಅದಕ್ಕೆ ಅನುಗುಣವಾಗಿಲ್ಲ. ನಾಗರಿಕರು ಖಾಸಗಿ ಸಂಸ್ಥೆಗಳೊಟ್ಟಿಗೆ ಹಂಚಿಕೊಳ್ಳುವ ದತ್ತಾಂಶಕ್ಕೆ ಮಾತ್ರ ಕಾಯ್ದೆ ಅನ್ವಯಿಸುತ್ತದೆ; ಸರಕಾರದೊಟ್ಟಿಗೆ ಹಂಚಿಕೊಳ್ಳುವ ದತ್ತಾಂಶಕ್ಕೆ ಯಾವುದೇ ರಕ್ಷಣೆ ಇಲ್ಲ. ಸರಕಾರ ಮಾಹಿತಿಯ ಅತಿ ದೊಡ್ಡ ಸಂಗ್ರಾಹಕನಾಗಿರುವುದರಿಂದ, ದತ್ತಾಂಶ ಸಂರಕ್ಷಣೆ ಕಾಯ್ದೆ ಪರಿಣಾಮಕಾರಿ ಆಗಬೇಕಿದ್ದಲ್ಲಿ ಅದು ಸರಕಾರವನ್ನು ಒಳಗೊಂಡಿರಬೇಕು. ಒಕ್ಕೂಟ ಸರಕಾರ ಇಸ್ತಿಹಾರಿನ ಮೂಲಕ ಯಾವುದೇ ಸರಕಾರ ಅಥವಾ ಸಾರ್ವಜನಿಕ ಸಂಸ್ಥೆಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಬಹುದು. ಆದರೆ, ಮಸೂದೆ ಸರಕಾರವನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಇದೊಂದು ಗಂಭೀರ ಲೋಪ.

ಸರಕಾರದ ಸಂಸ್ಥೆಗಳಿಂದ ದತ್ತಾಂಶ ಸೋರುವಿಕೆ ಆಗಾಗ ಸಂಭವಿಸುತ್ತಿರುತ್ತದೆ. ಜೂನ್ ೨೦೨೩ರಲ್ಲಿ ಕೋವಿಡ್ ಪೋರ್ಟಲ್‌ನ್ನು ಹೊಕ್ಕು, ಲಸಿಕೆ ತೆಗೆದುಕೊಂಡವರ ವೈಯಕ್ತಿಕ ಮಾಹಿತಿಯನ್ನು ಟೆಲಿಗ್ರಾಂನಲ್ಲಿ ಬಹಿರಂಗಗೊಳಿಸಲಾಗಿತ್ತು. ಜುಲೈ ೨೦೨೩ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದ ೧೨,೦೦೦ ಉದ್ಯೋಗಿಗಳ ರಹಸ್ಯ ದಾಖಲೆಗಳು ಟೆಲಿಗ್ರಾಂನಲ್ಲಿ ಬಹಿರಂಗಗೊಂಡಿದ್ದವು. ತನ್ನ ದಾಖಲೆಗಳನ್ನೇ ರಕ್ಷಿಸಿಕೊಳ್ಳಲಾಗದ ಸರಕಾರ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುತ್ತದೆಯೇ? ಈ ಹಿನ್ನೆಲೆಯಲ್ಲಿ ವೈಯಕ್ತಿಕ ದತ್ತಾಂಶವನ್ನು ಸಂಶೋಧನೆ, ಪತ್ರಾಗಾರದಲ್ಲಿ ಸಂಗ್ರಹ ಹಾಗೂ ಸಂಖ್ಯಾಸಂಗ್ರಹ ಉದ್ದೇಶಕ್ಕಾಗಿ ಸಂಸ್ಕರಿಸಲು ವಿಧಿ ೧೭(೨)(ಎ)ಅಡಿ ಸರಕಾರ ಮತ್ತು ಅದರ ಸಂಸ್ಥೆಗಳಿಗೆ ನೀಡಲಾದ ವಿನಾಯಿತಿ ಬಗ್ಗೆ ಆತಂಕ ವ್ಯಕ್ತವಾಗಿದೆ.

ಒಂದುವೇಳೆ ದತ್ತಾಂಶವನ್ನು ನಿರ್ಲಕ್ಷ್ಯದಿಂದ ಬಳಸಿದಲ್ಲಿ ಆಗುವ ನಷ್ಟವನ್ನು ಭರಿಸಲು ಐಟಿ ಕಾಯ್ದೆ ೨೦೦೦ರ ವಿಧಿ ೪೩ಎ ಅವಕಾಶ ನೀಡುತ್ತದೆ. ಆದರೆ, ಡಿಪಿಡಿಪಿ ಮಸೂದೆಯ ವಿಧಿ ೪೪(೩) ಇಂಥ ನಷ್ಟಕ್ಕೆ ಪರಿಹಾರವನ್ನು ನಿರಾಕರಿಸುತ್ತದೆ. ಇದಕ್ಕಿಂತ ಗಂಭೀರ ಲೋಪ ಆಗಿರುವುದು-ಮಾಹಿತಿ ಹಕ್ಕು ಕಾಯ್ದೆ ೨೦೦೫ರ ವಿಧಿ ೮(೧)(ಜೆ)ಗೆ ತಂದಿರುವ ತಿದ್ದುಪಡಿಯಲ್ಲಿ.

೨೦೦೬ರಲ್ಲಿ ಆರ್‌ಟಿಐ ಕಾಯ್ದೆ ಅನುಷ್ಠಾನಗೊಳಿಸಿದಾಗ, ಕಡತದಲ್ಲಿರುವ ಟಿಪ್ಪಣಿಗಳನ್ನು ಕಾಯ್ದೆಯಿಂದ ಹೊರಗಿಡಬೇಕೆಂದು ಪ್ರಸ್ತಾಪ ಮುಂದಿಡಲಾಗಿತ್ತು. ಈಮೂಲಕ ಗ್ರಾಮ ಪಂಚಾಯತ್‌ನಿಂದ ರಾಷ್ಟ್ರಪತಿ ಭವನದವರೆಗಿನ ಸಾರ್ವಜನಿಕ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರನ್ನು ಸಾರ್ವಜನಿಕರಿಂದ ಮುಚ್ಚಿಡುವ ಪ್ರಯತ್ನ ನಡೆದಿತ್ತು. ಬಿಜೆಪಿ ಸೇರಿದಂತೆ ಎಲ್ಲ ಪ್ರತಿಪಕ್ಷಗಳು, ಮಾಧ್ಯಮಗಳು ಹಾಗೂ ನಾಗರಿಕ ಸಮಾಜದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ, ಪ್ರಸ್ತಾಪವನ್ನು ಹಿಂಪಡೆಯಲಾಯಿತು. ವ್ಯಂಗ್ಯವೆಂದರೆ, ಅದೇ ಬಿಜೆಪಿ ಈಗ ಡಿಪಿಡಿಪಿ ಕಾಯ್ದೆ ಮೂಲಕ ಆರ್‌ಟಿಐ ಕಾಯ್ದೆಯ ಉಸಿರುಗಟ್ಟಿಸಿದೆ.

ಡಿಪಿಡಿಪಿ ಕಾಯ್ದೆಯ ಪ್ರಮುಖ ಉದ್ದೇಶ-ಆರ್ಥಿಕ ವಂಚನೆ ಸೇರಿದಂತೆ ವೈಯಕ್ತಿಕ ದತ್ತಾಂಶದ ದುರುಪಯೋಗ ತಡೆ. ಆದರೆ, ಮಾಹಿತಿಯ ಅತಿ ದೊಡ್ಡ ಸಂಗ್ರಾಹಕನಾದ ಸರಕಾರಕ್ಕೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಪರಿಣಾಮಕಾರಿ ದತ್ತಾಂಶ ಸಂರಕ್ಷಣೆ ಕಾಯ್ದೆಯು ಸರಕಾರವನ್ನು ಒಳಗೊಂಡಿರಬೇಕಿರುವುದು ಅತ್ಯಗತ್ಯ. ಕೇಂದ್ರ ಸರಕಾರ ಯಾವುದೇ ಸರಕಾರ ಅಥವಾ ಸಾರ್ವಜನಿಕ ಸಂಸ್ಥೆಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಬಹುದು. ಕಾಯ್ದೆ ಸ್ವಯಂಸೇವಾ ಸಂಘಟನೆಗಳು, ಸಂಶೋಧನಾ ಸಂಸ್ಥೆಗಳು, ಸಮುದಾಯದ ಗುಂಪುಗಳು ಹಾಗೂ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡಿದೆ.

ನ್ಯಾ.ಎ.ಪಿ.ಶಾ ಸಮಿತಿ ಆರ್‌ಟಿಐ ಅಡಿ ಲಭ್ಯವಿರುವ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲು ದತ್ತಾಂಶ ಸಂರಕ್ಷಣೆ ಕಾಯ್ದೆಯನ್ನು ಬಳಸಬಾರದೆಂದು ೨೦೧೨ರಲ್ಲಿ ಶಿಫಾರಸು ಮಾಡಿತ್ತು. ದೈಹಿಕ ಇಲ್ಲವೇ ಮಾನಸಿಕ ಹಾನಿ, ಆಸ್ತಿ ಇಲ್ಲವೇ ಘನತೆಗೆ ಧಕ್ಕೆ, ಗುರುತಿನ ಕಳವು, ತಾರತಮ್ಯ ಇಲ್ಲವೇ ಬ್ಲ್ಯಾಕ್‌ಮೇಲ್/ಸುಲಿಗೆಗೆ ಕಾರಣವಾಗುವಂತಿದ್ದರೆ ಮಾತ್ರ ವೈಯಕ್ತಿಕ ಮಾಹಿತಿಯನ್ನು ನಿರಾಕರಿಸಬಹುದು ಎಂದು ನ್ಯಾ. ಶ್ರೀಕೃಷ್ಣ ಸಮಿತಿ ೨೦೧೮ರಲ್ಲಿ ಹೇಳಿತ್ತು. ಈ ಹಿಂದೆ ಆರ್‌ಟಿಐ ಅಡಿ ಮಾಹಿತಿ ನಿರಾಕರಿಸಲು ಸರಕಾರಿ ಅಧಿಕಾರಿಗಳಿಗೆ ಹೆಚ್ಚು ನೆಪಗಳು ಇರಲಿಲ್ಲ. ಆದರೆ, ಈಗ ‘ಸಾರ್ವಜನಿಕ ಚಟುವಟಿಕೆ ಅಥವಾ ಆಸ್ತಿಗೆ ಅಥವಾ ವ್ಯಕ್ತಿಯ ಖಾಸಗಿತನಕ್ಕೆ ಅನಗತ್ಯವಾಗಿ ಧಕ್ಕೆ ತರುವ’ ಎಂಬ ಅಂಶವನ್ನು ತೆಗೆದಿರುವುದರಿಂದ, ಮಾಹಿತಿಗೆ ನಿರ್ಬಂಧ ಹೆಚ್ಚುತ್ತದೆ. ಡಿಪಿಡಿಪಿ ಕಾಯ್ದೆ ಡಿಜಿಟಲ್ ರೂಪದ ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಸೀಮಿತವಾಗಿದ್ದು, ಕಾಗದದಲ್ಲಿ ದಾಖಲಾದ ವೈಯಕ್ತಿಕ ಮಾಹಿತಿಗೆ ಅನ್ವಯಿಸುವುದಿಲ್ಲ. ಆದರೆ, ಆರ್‌ಟಿಐ ತಿದ್ದುಪಡಿಯು ಕಾಗದವನ್ನು ಆಧರಿಸಿದ ವೈಯಕ್ತಿಕ ಮಾಹಿತಿಗೂ ಅನ್ವಯಿಸಲಿದೆ.

ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದಲ್ಲಿ ಸಂಸ್ಥೆ/ಕಂಪೆನಿ ವ್ಯಕ್ತಿಗೆ ಮಾಹಿತಿ ನೀಡಬೇಕಾಗುತ್ತದೆ. ದತ್ತಾಂಶದ ಸಂಸ್ಕರಣೆ ಯಾರು ಮಾಡುತ್ತಾರೆ, ಉದ್ದೇಶವೇನು ಮತ್ತು ದತ್ತಾಂಶ ಸಂರಕ್ಷಣೆ ಸಮಿತಿಗೆ ಯಾವ ರೀತಿ ದೂರು ನೀಡಬಹುದು, ದತ್ತಾಂಶ ಬಳಕೆಗೆ ನೀಡಿದ ಸಮ್ಮತಿಯನ್ನು ಹಿಂಪಡೆಯುವುದು ಹೇಗೆ ಮತ್ತು ಕುಂದುಕೊರತೆ ನಿವಾರಣೆ ಹೇಗೆ ಎಂಬ ಮಾಹಿತಿ ಡಿಪಿಡಿಪಿಯಲ್ಲಿದೆ. ಆದರೆ, ದತ್ತಾಂಶ ಸೋರಿಕೆಯಿಂದ ಹಾನಿಗೊಳಗಾದ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ಮಸೂದೆಯ ೨೦೨೧ರ ಕರಡಿನಲ್ಲಿದ್ದ ಅಂಶ ನಾಪತ್ತೆಯಾಗಿದೆ. ವಿಧಿ ೫ರ ಪ್ರಕಾರ, ಸಂಸ್ಥೆ/ಕಂಪೆನಿ ದತ್ತಾಂಶವನ್ನು ಮೂರನೇ ವ್ಯಕ್ತಿಯೊಡನೆ ಹಂಚಿಕೊಂಡಲ್ಲಿ, ದತ್ತಾಂಶದ ಶೇಖರಣೆ ಅವಧಿ ಎಷ್ಟು ಎಂದು ಹಾಗೂ ಬೇರೆ ದೇಶಕ್ಕೆ ದತ್ತಾಂಶ ವರ್ಗಾವಣೆಯಾದಲ್ಲಿ ಆ ಬಗ್ಗೆ ವ್ಯಕ್ತಿಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ. ಅದೇ ರೀತಿ ೨೦೨೨ರ ಕಾಯ್ದೆಯಲ್ಲಿದ್ದ ‘ಡೀಮ್ಡ್ ಒಪ್ಪಿಗೆ’ ಬದಲು ವಿಧಿ ೭ ‘ಕೆಲವು ಶಾಸನಾತ್ಮಕ ಬಳಕೆಗಳಿಗೆ’ ವ್ಯಕ್ತಿಯ ಅನುಮತಿಯಿಲ್ಲದೆ ವೈಯಕ್ತಿಕ ದತ್ತಾಂಶದ ಸಂಸ್ಕರಣೆಗೆ ಅವಕಾಶ ನೀಡುತ್ತದೆ. ಜೊತೆಗೆ, ‘ವೈಯಕ್ತಿಕ ದತ್ತಾಂಶ ಮಾಹಿತಿ’ ಮತ್ತು ‘ಸೂಕ್ಷ್ಮ ದತ್ತಾಂಶ ಮಾಹಿತಿ’ ನಡುವೆ ಯಾವುದೇ ಭೇದ ಮಾಡದೆ ಇರುವುದರಿಂದ, ‘ಸೂಕ್ಷ್ಮ ದತ್ತಾಂಶ’ಕ್ಕೆ ಹೆಚ್ಚಿನ ರಕ್ಷಣೆ ಸಿಗುವುದಿಲ್ಲ.

ರಾಷ್ಟ್ರೀಯ ಸುಭದ್ರತೆ, ವಿದೇಶಗಳ ಜೊತೆಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿ ಕಾರಣವೊಡ್ಡಿ ಹಲವು ಕಾಯ್ದೆಗಳ ಮೂಲಕ ಸರಕಾರ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರಿದ್ದ ಜಂಟಿ ಸಂಸದೀಯ ಸಮಿತಿಯು ೨೦೧೯ರ ದತ್ತಾಂಶ ಸಂರಕ್ಷಣೆ ಮಸೂದೆಯಲ್ಲಿ ಆರ್‌ಟಿಐಗೆ ತಿದ್ದುಪಡಿಯನ್ನು ಪರಿಗಣಿಸಿಯೇ ಇರಲಿಲ್ಲ. ಆರ್‌ಟಿಐ ಕಾಯ್ದೆಯ ಆಶಯವಾದ ‘ಸಂಸದರು/ಶಾಸಕರಿಗೆ ಲಭ್ಯವಾಗುವ ಮಾಹಿತಿ ಜನಸಾಮಾನ್ಯರಿಗೂ ಲಭ್ಯವಾಗಬೇಕು’ ಎಂಬ ಲಿಟ್ಮಸ್ ಪರೀಕ್ಷೆ ಛಿದ್ರವಾಗಿದೆ. ಆಯ್ಕೆಯಾದವರು ಆಯ್ಕೆ ಮಾಡಿದವರಿಗೆ ಉತ್ತರದಾಯಿಯಾಗಿರಬೇಕು ಮತ್ತು ಇಬ್ಬರೂ ಸಮಾನರು ಎಂಬ ತತ್ವ ಕಸದ ಬುಟ್ಟಿ ಸೇರಿದೆ.

ಮೂಲಭೂತ ತತ್ವಗಳಿಗೆ ಭಂಗ

ಖಾಸಗಿತನ ಮತ್ತು ಮಾಹಿತಿ ಹಕ್ಕು ಜನರ ಮೂಲಭೂತ ಹಕ್ಕುಗಳು. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ(ಎನ್‌ಪಿಎ) ವಿವರವನ್ನು ಮತ್ತು ಬೇಕೆಂದೇ ಸಾಲ ಪಾವತಿಸದವರ ಹೆಸರು ತಿಳಿದು ಕೊಳ್ಳುವ ಹಕ್ಕು ಜನರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಬಡವರು ಮತ್ತು ದುರ್ಬಲರಿಗೆ ಸರಕಾರದ ಯೋಜನೆಗಳು-ಕಲ್ಯಾಣ ಕಾರ್ಯಕ್ರಮಗಳ ಲಾಭ ದೊರೆಯಬೇಕಿದ್ದರೆ, ಅವರಿಗೆ ಸೂಕ್ತ ಮಾಹಿತಿ ಲಭ್ಯವಾಗಬೇಕು. ಸಾರ್ವಜನಿಕ ವಿತರಣೆ ವ್ಯವಸ್ಥೆ ನಿಯಂತ್ರಣ ಆದೇಶವು ಪಡಿತರ ಚೀಟಿ ಹೊಂದಿರುವವರು ಮತ್ತು ಪಡಿತರ ಅಂಗಡಿಗಳ ವಿವರವನ್ನು ಸಾರ್ವಜನಿಕಗೊಳಿಸುತ್ತಿದ್ದು, ಇದರಿಂದ ಪರಿಶೀಲನೆ ಮತ್ತು ಸಾಮಾಜಿಕ ಲೆಕ್ಕಪರಿಶೀಲನೆಗೆ ನೆರವಾಗುತ್ತದೆ.

ಡಿಪಿಡಿಪಿ ಕಾಯ್ದೆಯ ಪ್ರಮುಖ ಉದ್ದೇಶ-ಆರ್ಥಿಕ ವಂಚನೆ ಸೇರಿದಂತೆ ವೈಯಕ್ತಿಕ ದತ್ತಾಂಶದ ದುರುಪಯೋಗ ತಡೆ. ಆದರೆ, ಮಾಹಿತಿಯ ಅತಿ ದೊಡ್ಡ ಸಂಗ್ರಾಹಕನಾದ ಸರಕಾರಕ್ಕೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಪರಿಣಾಮಕಾರಿ ದತ್ತಾಂಶ ಸಂರಕ್ಷಣೆ ಕಾಯ್ದೆಯು ಸರಕಾರವನ್ನು ಒಳಗೊಂಡಿರಬೇಕಿರುವುದು ಅತ್ಯಗತ್ಯ. ಕೇಂದ್ರ ಸರಕಾರ ಯಾವುದೇ ಸರಕಾರ ಅಥವಾ ಸಾರ್ವಜನಿಕ ಸಂಸ್ಥೆಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಬಹುದು. ಕಾಯ್ದೆ ಸ್ವಯಂಸೇವಾ ಸಂಘಟನೆಗಳು, ಸಂಶೋಧನಾ ಸಂಸ್ಥೆಗಳು, ಸಮುದಾಯದ ಗುಂಪುಗಳು ಹಾಗೂ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡಿದೆ. ಆಧಾರ್ ಪ್ರಾಧಿಕಾರದ ಬಳಿ ದೇಶದ ಬಹುತೇಕರ ಬಯೋಮೆಟ್ರಿಕ್ ವಿವರ, ಚಹರೆ ಮತ್ತು ಕೈಬೆರಳುಗಳ ಪಡಿಯಚ್ಚು ಇದೆ. ೧೩೫.೨ ಕೋಟಿ ಆಧಾರ್ ಸಂಖ್ಯೆಗಳನ್ನು ಸೃಷ್ಟಿಸಲಾಗಿದೆ ಮತ್ತು ೭೧.೧ ಕೋಟಿ ಆಧಾರ್ ಸಂಖ್ಯೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ‘ಆರ್ಥಿಕ ಸಮೀಕ್ಷೆ ೨೦೨೨-೨೩’ ಜನವರಿಯಲ್ಲಿ ಹೇಳಿದೆ. ಆಧಾರ್ ಜೊತೆಗೆ ಪಾನ್, ಬ್ಯಾಂಕ್ ಖಾತೆ, ವಿಮೆ ಸೇರಿದಂತೆ ಎಲ್ಲವನ್ನೂ ಜೋಡಣೆ ಮಾಡಲಾಗಿದೆ. ಇದು ಖಾಸಗಿತನಕ್ಕೆ ತೀವ್ರ ಧಕ್ಕೆ ತಂದಿದೆ.

ದತ್ತಾಂಶ ಸಂರಕ್ಷಣೆ ಮಂಡಳಿಗೆ ಸ್ವಾಯತ್ತೆ ನೀಡಬೇಕೆಂಬ ಸಣ್ಣ ಆಶಯವೂ ಕಾಯ್ದೆಯಲ್ಲಿಲ್ಲ. ಮಂಡಳಿಯಲ್ಲಿ ಎಷ್ಟು ಮಂದಿ ಸದಸ್ಯರು ಇರಬೇಕು, ಸಂಯೋಜನೆ ಹೇಗಿರಲಿದೆ, ಸದಸ್ಯ-ಅಧ್ಯಕ್ಷರ ಆಯ್ಕೆ/ವಜಾ ಹೇಗೆ ಎಂಬುದನ್ನು ಒಕ್ಕೂಟ ಸರಕಾರ ನಿರ್ಧರಿಸುತ್ತದೆ. ಈ ಮಂಡಳಿ ಪಂಜರದ ಗಿಳಿ ಆಗಲಿದೆ. ಕೇಂದ್ರದ ನೇರ ನಿಯಂತ್ರಣದಲ್ಲಿರುವ ಈ ಮಂಡಳಿಗೆ ೨೫೦ ಕೋಟಿ ರೂ.ವರೆಗೆ ದಂಡ ವಿಧಿಸುವ ಅಧಿಕಾರ ನೀಡಿ ರುವುದರಿಂದ, ಪ್ರತಿಪಕ್ಷಗಳು ಹಾಗೂ ಭಿನ್ನ ಅಭಿಪ್ರಾಯ ಇರುವವರ ಮೇಲೆ ದುರ್ಬಳಕೆ ಆಗುವ ಸಾಧ್ಯತೆಯಿದೆ.

ಜನರು ಪ್ರಾಮಾಣಿಕರಾಗಿರಬೇಕು ಮತ್ತು ದತ್ತಾಂಶ ಪಾರದರ್ಶಕವಾಗಿರಬೇಕು ಎಂದು ಹೇಳುವ ಸರಕಾರ, ತನಗೆ ಸಂಪೂರ್ಣ ವಿನಾಯಿತಿ ಕೊಟ್ಟುಕೊಳ್ಳುವ ಮೂಲಕ ಅಪಾರದರ್ಶಕವಾಗುತ್ತಿದೆ. ಸಂಸತ್ತಿನಲ್ಲಿ ಕನಿಷ್ಠ ಚರ್ಚೆ ನಡೆಯದೆ ಪಾಸಾಗುತ್ತಿರುವ ಇಂಥ ಮಸೂದೆಗಳು ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯುತ್ತವೆ. ‘ಕಟ್ಟಲಾಗದವರು ಕೆಡವಬಾರದು’ ಎಂದು ಬೇಂದ್ರೆ ಮಾಸ್ಟ್ರು ಹೇಳಿದ್ದರು. ಇದು ಕೆಡವುವವರ ಮನ್ವಂತರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಮಾಧವ ಐತಾಳ್

contributor

Similar News