ಗ್ರಾಮಸ್ವರಾಜ್ಯವೆಂಬ ಆದರ್ಶದ ಅವಸಾನ

ಮೆಂಧಾ 2013ರಲ್ಲಿ ತಾನು ಗ್ರಾಮದಾನ ಗ್ರಾಮವಾಗುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಿತು. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನವೆಂಬರ್ 28, 2013ರಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಯಿತು. ಆನಂತರ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಮೆಂಧಾವನ್ನು ಲೇಖಾ ಪಂಚಾಯತ್‌ನಿಂದ ಪ್ರತ್ಯೇಕಿಸಿ, ಸ್ವತಂತ್ರ ಗ್ರಾಮವೆಂದು ಘೋಷಿಸಬೇಕಿತ್ತು. ಅದು ಆಗಲೇ ಇಲ್ಲ. ಡಿಸೆಂಬರ್ 2022ರಲ್ಲಿ ಈ ಬಗ್ಗೆ ಮಹಾರಾಷ್ಟ್ರದ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಅರ್ಜಿ ಸಲ್ಲಿಕೆಯಾಯಿತು. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕೆಂದು ಕೋರ್ಟ್ ಆದೇಶಿಸಿದ್ದರೂ, ಸರಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!

Update: 2023-06-30 18:45 GMT

ಮಾಧವ ಐತಾಳ್

1988ರ ಒಂದು ದಿನ. ಮಹಾರಾಷ್ಟ್ರದ ಗಡ್‌ಛಿರೋಲಿ ಜಿಲ್ಲೆಯ ಮೆಂಧಾ ಎಂಬ ಮರಿಯಗೊಂಡರ ಹಾಡಿಯಲ್ಲಿ ಗ್ರಾಮ ಮಟ್ಟದ ಸ್ವರಾಜ್ಯದ ಬಗ್ಗೆ ತಿಳಿಹೇಳುತ್ತಿದ್ದ ಸರ್ವೋದಯ ಕಾರ್ಯಕರ್ತರಿಗೆ ಪ್ರಶ್ನೆಯೊಂದು ಎದುರಾಯಿತು-‘‘ನಮ್ಮ ಗ್ರಾಮದಲ್ಲಿ ನಮ್ಮದೇ ರಾಜ್ಯಭಾರ ಎನ್ನುತ್ತಿದ್ದೀರಿ. ಆದರೆ, ದಿಲ್ಲಿ ಮತ್ತು ಬಾಂಬೆಯಲ್ಲಿ ಇರುವುದು ಯಾರ ರಾಜ್ಯ?’’ ಕಾರ್ಯಕರ್ತರು ಇಂಥ ಪ್ರಶ್ನೆ ನಿರೀಕ್ಷಿಸಿರಲಿಲ್ಲ. ಪ್ರಶ್ನೆ ಕೇಳಿದಾತನೇ ಉತ್ತರಿಸಿದ, ‘‘ದಿಲ್ಲಿ-ಬಾಂಬೆ ಸರಕಾರವನ್ನು ಆಯ್ಕೆ ಮಾಡುವವರು ನಾವೇ ಆದ್ದರಿಂದ, ಅವು ಕೂಡ ನಮ್ಮವೇ. ಆದರೆ, ನಮ್ಮ ಗ್ರಾಮಗಳಲ್ಲಿ ನಾವೇ ಸರಕಾರ’’!

ಮೆಂಧಾ 1,600 ಹೆಕ್ಟೇರ್ ಅರಣ್ಯದಿಂದ ಸುತ್ತುವರಿದ, 60 ಹಟ್ಟಿಗಳು ಮತ್ತು 350 ಆದಿವಾಸಿಗಳಿದ್ದ ಹಾಡಿ. ಮರಿಯಗೊಂಡರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಚಲಾವಣೆಗೆ ಮುಂದಾದಾಗ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೇಳಿದಾಗ, ಗ್ರಾಮಸಭೆ ಶಾಸನಾತ್ಮಕ ಸ್ಥಾನಮಾನ ಹೊಂದಿಲ್ಲದ ಕಾರಣ ಅನುದಾನ ಸಿಗುವುದಿಲ್ಲ ಎನ್ನುವ ಉತ್ತರ ಬಂದಿತು. ಆಗ ಗೊಂಡರು ಮೆಂಧಾ ಗ್ರಾಮಯೋಜನೆ ಮತ್ತು ಅಭಿವೃದ್ಧಿ ಮಂಡಳಿಯನ್ನು 1860ರ ಸೊಸೈಟಿ ನೋಂದಣಿ ಕಾಯ್ದೆಯಡಿ ನೋಂದಾಯಿಸಿಕೊಂಡರು. ಸರಕಾರ-ಸರಕಾರೇತರ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರು. 1989ರಲ್ಲಿ ಸರಕಾರ ಗ್ರಾಮದ ಸುತ್ತ ಇದ್ದ ಅರಣ್ಯವನ್ನು ಕಾಯ್ದಿಟ್ಟ ಭೂಮಿ ಎಂದು ಅಧಿಸೂಚನೆ ಹೊರಡಿಸಿದಾಗ, ಜನ ಸತ್ಯಾಗ್ರಹ ಆರಂಭಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಿದರು.

ಏನಿದು ‘ಗ್ರಾಮದಾನ’ ಗ್ರಾಮ?:

ಆಚಾರ್ಯ ವಿನೋಬಾ ಭಾವೆ ಅವರು 1951ರಲ್ಲಿ ಆರಂಭಿಸಿದ ಭೂದಾನ ಚಳವಳಿಯ ವಿಸ್ತರಣೆಯೇ ‘ಗ್ರಾಮದಾನ’. ಗ್ರಾಮದ ಶೇ.75ರಷ್ಟು ಮಂದಿ ತಮ್ಮ ಜಮೀನಿನ ಒಡೆತನವನ್ನು ಸಮುದಾಯಕ್ಕೆ ಒಪ್ಪಿಸಬೇಕಾಗುತ್ತದೆ ಮತ್ತು ಇಂಥ ಜಮೀನಿನ ಪ್ರಮಾಣ ಗ್ರಾಮದ ಒಟ್ಟು ಜಮೀನಿನ ಶೇ.60ರಷ್ಟು ಇರಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ರೈತರು ಹೊರಗಿನವರಿಗೆ ಮತ್ತು ಗ್ರಾಮದಾನಕ್ಕೆ ಸೇರದವರಿಗೆ ಜಮೀನು ಮಾರುವಂತಿಲ್ಲ; ತಮ್ಮ ಆದಾಯದಲ್ಲಿ ಶೇ.2.5ರಷ್ಟು ಸಮುದಾಯಕ್ಕೆ ದೇಣಿಗೆ ನೀಡಬೇಕಾಗುತ್ತದೆ. ಒಟ್ಟು ಜಮೀನಿನಲ್ಲಿ ಶೇ.5ರಷ್ಟನ್ನು ಭೂರಹಿತರಿಗೆ ಹಂಚಲಾಗುತ್ತದೆ ಮತ್ತು ಭೂಮಿಯನ್ನು ಪಡೆದವರು ಸಮುದಾಯದ ಸಮ್ಮತಿಯಿಲ್ಲದೆ ಬೇರೆಯವರಿಗೆ ವರ್ಗಾಯಿಸುವಂತಿಲ್ಲ.

ದೇಶದ ಏಳು ರಾಜ್ಯಗಳಲ್ಲಿ ಗ್ರಾಮದಾನ ಗ್ರಾಮಗಳಿದ್ದು, ಉತ್ತರಪ್ರದೇಶ 1962ರಲ್ಲಿ ಇಂಥ ಗ್ರಾಮಗಳ ಸ್ಥಾಪನೆಗೆ ಸಂಬಂಧಿಸಿದ ಕಾನೂನು ರೂಪಿಸಿದ ಮೊದಲ ರಾಜ್ಯ. ಉತ್ತರಪ್ರದೇಶದಲ್ಲಿ 5 ಗ್ರಾಮಗಳು, ತಮಿಳುನಾಡು 537, ಅಸ್ಸಾಮ್ 312, ಮಹಾರಾಷ್ಟ್ರ 20, ಆಂಧ್ರಪ್ರದೇಶ 1, ಬಿಹಾರ 1,583, ಒಡಿಶಾ 1,309 ಮತ್ತು ರಾಜಸ್ಥಾನದ 205 ಗ್ರಾಮಗಳಲ್ಲಿ ಭೂಮಿ ಸಮುದಾಯದ ಮಾಲಕತ್ವದಲ್ಲಿದೆ. ಇದರಲ್ಲಿ 3,660 ಗ್ರಾಮಗಳು ಗ್ರಾಮದಾನಕ್ಕೊಳಪಟ್ಟಿವೆ. ರಾಜ್ಯಗಳು ಕಾಲಕ್ರಮೇಣ ಈ ಕಾಯ್ದೆಯನ್ನು ದುರ್ಬಲಗೊಳಿಸಿವೆ. ರಾಜಸ್ಥಾನ ಸರಕಾರವು ಗ್ರಾಮದಾನ ಕಾಯ್ದೆ 1971ಕ್ಕೆ ಹಲವು ತಿದ್ದುಪಡಿ ತಂದಿದೆ. ಈ ಗ್ರಾಮಗಳನ್ನು ಸರಕಾರದ ಬೇರೆ ಇಲಾಖೆಗಳಿಂದ ಸ್ವತಂತ್ರವಾಗಿಸಿದ್ದ ಕಾಯ್ದೆಯ ವಿಧಿ 43ನ್ನು 1975ರಲ್ಲಿ ತೆಗೆದುಹಾಕಲಾಯಿತು. ಇದರಿಂದ ಈ ಗ್ರಾಮಗಳು ಗ್ರಾಮಪಂಚಾಯತ್‌ನ ನಿಯಂತ್ರಣಕ್ಕೆ ಒಳಪಟ್ಟವು. ಜತೆಗೆ, ಸರಕಾರದಿಂದ ಬರುತ್ತಿದ್ದ ನೇರ ಅನುದಾನಗಳು ಸ್ಥಗಿತಗೊಂಡವು. ಪಂಚಾಯತ್‌ನಡಿ ಹಲವು ಗ್ರಾಮಗಳು ಇರುವುದರಿಂದ, ಅನುದಾನಕ್ಕಾಗಿ ಗ್ರಾಮದಾನ ಗ್ರಾಮಗಳು ಬೇರೆ ಗ್ರಾಮಗಳೊಟ್ಟಿಗೆ ಸ್ಪರ್ಧಿಸಬೇಕಾಯಿತು. ಒಂದುವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಗ್ರಾಮದಾನದ ಬಗ್ಗೆ ಆಸಕ್ತಿ ಇಲ್ಲದಿದ್ದರೆ, ಅನುದಾನ ನೀಡದೆ ಇರಬಹುದು; ಅಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ. ಹೀಗಾಗಿ ತಮ್ಮ ಗ್ರಾಮಗಳನ್ನು ಕಂದಾಯ ಗ್ರಾಮವೆಂದು ಘೋಷಿಸಬೇಕೆಂದು ಒತ್ತಾಯ ಹೆಚ್ಚಿದ್ದು, ಗ್ರಾಮದಾನ ಗ್ರಾಮಗಳ ಸಂಖ್ಯೆ 216ರಿಂದ 190ಕ್ಕೆ ಕುಸಿದಿದೆ. ಬಹುತೇಕ ಗ್ರಾಮದಾನ ಗ್ರಾಮಗಳಲ್ಲಿ ಸ್ವತಂತ್ರ ಮಂಡಳಿಯೊಂದು ಇದ್ದು, ಅದು ಗ್ರಾಮಸಭೆಗೆ ಅನುದಾನ ನೀಡುತ್ತದೆ. ಅಸ್ಸಾಂನಲ್ಲೂ ಇದೇ ಕಥೆ. ರಾಜ್ಯದಲ್ಲಿ ಗ್ರಾಮದಾನ ಕಾಯ್ದೆಯನ್ನು ಅಸ್ಸಾಂ ಭೂಮಿ ಮತ್ತು ಕಂದಾಯ ನಿಯಂತ್ರಣ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸುವ ಮೂಲಕ ಹಿಂಪಡೆಯಲಾಯಿತು. ಇದರಿಂದ ಈ ಗ್ರಾಮಗಳ ಗ್ರಾಮಸಭೆಗಳು ನಿಷ್ಕ್ರಿಯಗೊಂಡವು. ಹೊಸ ಪೀಳಿಗೆಯವರಿಗೆ ಈ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಮತ್ತು ಇಲಾಖೆಗಳ ಅಧಿಕಾರಿಗಳು ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಇರುವುದರಿಂದ, ಅನುದಾನ ಕುಸಿದು ವ್ಯವಸ್ಥೆ ದುರ್ಬಲಗೊಂಡಿತು. ಏಳು ರಾಜ್ಯಗಳಲ್ಲೂ ಪರಿಸ್ಥಿತಿ ಇದೇ ರೀತಿ ಇದೆ ಎಂದು ದಿಲ್ಲಿ ಮೂಲದ ರಾಜೀವ್‌ಗಾಂಧಿ ಸಮಕಾಲೀನ ಅಧ್ಯಯನ ಸಂಸ್ಥೆಯ ವರದಿ(2018) ಹೇಳುತ್ತದೆ.

ಆತ್ಮನಿರ್ಭರ ಭಾರತ

2023ರ ಆತ್ಮನಿರ್ಭರ ಭಾರತಕ್ಕೆ ಬರೋಣ. ಮೆಂಧಾ ಮಹಾರಾಷ್ಟ್ರ ಗ್ರಾಮದಾನ ಕಾಯ್ದೆ 1964ರಡಿ ಗ್ರಾಮಸ್ವರಾಜ್ಯವಾಗಿ ಮುಂದುವರಿಯಲು ನಿರ್ಧರಿಸಿದ್ದರೆ, ಅದೇ ರಾಜ್ಯದ ಅಕೋಲಾ ಜಿಲ್ಲೆಯ ತುಳಜಾಪುರ ಆ ಹಣೆಪಟ್ಟಿ ಕಳಚಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಗ್ರಾಮದಾನ ವ್ಯವಸ್ಥೆಯಲ್ಲಿ ಆಸ್ತಿ ರೈತನ ಹೆಸರಿನಲ್ಲಿ ಇಲ್ಲದೆ ಇರುವುದರಿಂದ, ತೀರ ಅಗತ್ಯವಿದ್ದಾಗಲೂ ಆತ ಜಮೀನಿನ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಕೃಷಿ ಸಬ್ಸಿಡಿಗಳು ಸಿಗುವುದಿಲ್ಲ. ಎರಡನೆಯದಾಗಿ, ಈ ರೈತರಿಗೆ ಕೃಷಿ ವಿಮೆ ನಿರಾಕರಿಸಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯಡಿ ಕಂತು ಕಟ್ಟಿದ್ದರೂ, ಬೆಳೆ ನಷ್ಟವಾದಲ್ಲಿ ಪರಿಹಾರ ಸಿಗುತ್ತಿಲ್ಲ. ಮೆಂಧಾದ 500 ಆದಿವಾಸಿಗಳು ಏಕೆ ಭೂಮಿಯ ಸಾಮುದಾಯಿಕ ಮಾಲಕತ್ವಕ್ಕೆ ಕಟ್ಟುಬಿದ್ದಿದ್ದಾರೆ ಎಂದು ಪ್ರಶ್ನೆ ಹಾಕಿಕೊಂಡರೆ, ಈ ಗ್ರಾಮ ತನ್ನ ಉಳಿವಿಗಾಗಿ ಅರಣ್ಯವನ್ನು ಆಧರಿಸಿದೆ. ಮರಮಟ್ಟು, ಆಹಾರ, ಮೇವು, ಬಿದಿರು ಹಾಗೂ ಇನ್ನಿತರ ಕಿರು ಅರಣ್ಯ ಉತ್ಪನ್ನಗಳ ಮಾರಾಟ ಹಾಗೂ ದಿನಗೂಲಿ ಕೆಲಸ ಅವರ ಜೀವ ಪೊರೆಯುತ್ತಿದೆ. ಮೆಂಧಾ 2013ರಲ್ಲಿ ತಾನು ಗ್ರಾಮದಾನ ಗ್ರಾಮವಾಗುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಿತು. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನವೆಂಬರ್ 28, 2013ರಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಯಿತು. ಆನಂತರ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಮೆಂಧಾವನ್ನು ಲೇಖಾ ಪಂಚಾಯತ್‌ನಿಂದ ಪ್ರತ್ಯೇಕಿಸಿ, ಸ್ವತಂತ್ರ ಗ್ರಾಮವೆಂದು ಘೋಷಿಸಬೇಕಿತ್ತು. ಅದು ಆಗಲೇ ಇಲ್ಲ. ಡಿಸೆಂಬರ್ 2022ರಲ್ಲಿ ಈ ಬಗ್ಗೆ ಮಹಾರಾಷ್ಟ್ರದ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಅರ್ಜಿ ಸಲ್ಲಿಕೆಯಾಯಿತು. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕೆಂದು ಕೋರ್ಟ್ ಆದೇಶಿಸಿದ್ದರೂ, ಸರಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!

ಗ್ರಾಮದಾನ ಗ್ರಾಮಗಳ ಆರ್ಥಿಕ ಪರಿಸ್ಥಿತಿ ಹೇಗಿದೆ?

ಮೆಂಧಾ ಮಾತ್ರವಲ್ಲ; ರಾಜಸ್ಥಾನ ಮತ್ತು ಮಹಾರಾಷ್ಟ್ರದ ಹಲವು ಗ್ರಾಮದಾನ ಗ್ರಾಮಗಳು ಆರ್ಥಿಕ-ಸಾಮಾಜಿಕವಾಗಿ ಸುಭದ್ರವಾಗಿವೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂದದ್ 1972ರಲ್ಲಿ ಗ್ರಾಮದಾನ ವ್ಯವಸ್ಥೆಗೆ ಸೇರಿದ್ದು, 50 ಎಕರೆ ಭೂಮಿ ಸಮುದಾಯದ ಹಿಡಿತದಲ್ಲಿದೆ. ನಾಗಪುರ-ಮುಂಬೈ ಎಕ್ಸ್‌ಪ್ರೆಸ್ ವೇಯಿಂದ ಒಂದು ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಈ ಗ್ರಾಮದ ಮೇಲೆ ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಬಹಳ ಹಿಂದೆಯೇ ಬಿದ್ದಿತ್ತು. ಅಕ್ಕಪಕ್ಕದ ಬಹುತೇಕ ಹಳ್ಳಿಗಳ ಭೂಮಿ ಮಾರಾಟವಾಗಿದ್ದು, ಭೂಮಿಯ ಮಾಲಕರಾಗಿದ್ದವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಂದದ್‌ನ ರೈತರು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ರಾಜಸ್ಥಾನದ ಸೀಡ್ ಗ್ರಾಮದ್ದೂ ಇದೇ ಕತೆ. 1,000 ಜನಸಂಖ್ಯೆಯ ಈ ಹಳ್ಳಿ 1980ರಲ್ಲಿ ಗ್ರಾಮದಾನ ಗ್ರಾಮವಾಯಿತು. ಭೂಮಿ ಬಳಕೆಯ ಸಮಗ್ರ ಕಾರ್ಯಯೋಜನೆ ಹೊಂದಿರುವ ಈ ಗ್ರಾಮದಲ್ಲಿ 1987ರ ಭೀಕರ ಬರದಲ್ಲೂ ಮೇವಿನ ಕೊರತೆ ಉಂಟಾಗಲಿಲ್ಲ.

ಕಾಡನ್ನು ತನ್ನ ಸುಪರ್ದಿಗೆ ನೀಡಬೇಕೆಂಬ ಅರಣ್ಯ ಇಲಾಖೆಯ ಒತ್ತಡಕ್ಕೆ ಗ್ರಾಮಸ್ಥರು ಬಗ್ಗಿಲ್ಲ.

ಖಾಸಗಿಯವರು ಭೂಮಿ ಖರೀದಿಸಲು ತಡೆಯೊಡ್ಡುತ್ತದೆ ಎಂದು ಸರಕಾರಗಳು ಈ ಕಾಯ್ದೆಯನ್ನು ಬೆಂಬಲಿಸುತ್ತಿಲ್ಲ. ಜತೆಗೆ. ಇಂಥದ್ದೊಂದು ಕಾಯ್ದೆ ಅಸ್ತಿತ್ವದಲ್ಲೇ ಇಲ್ಲ ಎಂದ ಅಧಿಕಾರಿಗಳೂ ಇದ್ದಾರೆ. ಕೆಳ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ವ್ಯವಸ್ಥೆ ಸಿದ್ಧವಿಲ್ಲ. ಇಂಥ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲದೆ ಇರುವುದು ಒಂದು ಸಕಾರಾತ್ಮಕ ಅಂಶವಾಗಿದ್ದರೆ, ಮಾರಾಟ ಮಾಡಿ ತಮ್ಮ ಹೊರೆ ಇಳಿಸಿಕೊಳ್ಳಬೇಕು; ನಗರದ ಕನಸು ನನಸು ಮಾಡಿಕೊಳ್ಳಬೇಕು ಎಂದುಕೊಂಡಿದ್ದವರಿಗೆ ತಲೆನೋವಾಗಿ ಪರಿಣಮಿಸಿದೆ.

ಅರಣ್ಯ ಸಂರಕ್ಷಣೆ

ಕಾಯ್ದೆಗೆ ತಿದ್ದುಪಡಿ:

ಅರಣ್ಯವಾಸಿಗಳ ಸಬಲೀಕರಣಕ್ಕೆ ಇಂಬು ನೀಡುತ್ತಿದ್ದ ಮತ್ತು ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುತ್ತಿದ್ದ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ)2006ನ್ನು ಅಳ್ಳಕಗೊಂಡಿದೆ. ಅರಣ್ಯ ಸಂರಕ್ಷಣೆ ಕಾಯ್ದೆ(ಎಫ್‌ಸಿಎ) ಹೆಸರನ್ನು ‘ಅರಣ್ಯ(ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಯಮ’ ಎಂದು ಬದಲಿಸಲು ಒಕ್ಕೂಟ ಸರಕಾರ ಮುಂದಾಗಿದ್ದು, ಮಸೂದೆಯು ಜಂಟಿ ಸಂಸದೀಯ ಸಮಿತಿಯ ಪರಾಮರ್ಶನದಲ್ಲಿದೆ. 2070ರೊಳಗೆ ಕೊಳೆಗಾಳಿ ತುಂಬುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಸಾಧ್ಯವಾಗಿಸಲು ದೇಶದ ಭೂಪ್ರದೇಶದ ಶೇ.33ರಷ್ಟು ಭಾಗದ ಅರಣ್ಯೀಕರಣ, ಜೈವಿಕವೈವಿಧ್ಯ-ಪರಿಸರ ಸಂರಕ್ಷಣೆ, ಸಾಮಾಜಿಕ, ಆರ್ಥಿಕ ಮತ್ತು ಪಾರಿಸರಿಕ ಪ್ರಯೋಜನಗಳ ವರ್ಧನೆಗೆ ಈ ತಿದ್ದುಪಡಿ ತರಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ಈ ತಿದ್ದುಪಡಿ ಅರಣ್ಯದ ವ್ಯಾಖ್ಯಾನವನ್ನೇ ಬದಲಿಸುತ್ತದೆ; ಕಡಲ ತೀರಗಳನ್ನು ಕೊರೆತ ಮತ್ತು ಚಂಡಮಾರುತದಿಂದ ರಕ್ಷಿಸುವ ಕಾಂಡ್ಲಾ ಕಾಡುಗಳ ಪ್ರಾಮುಖ್ಯತೆಯನ್ನು ಕಡೆಗಣಿಸಲಿದೆ.

ಇಂಥ ಪ್ರಯತ್ನಗಳು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಇದರಿಂದಾಗಿ ಸುಪ್ರೀಂ ಕೋರ್ಟ್ ಡಿಸೆಂಬರ್ 12, 1996ರಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಅನ್ವಯಿಸುವಾಗ ‘ಅರಣ್ಯ ಎಂಬ ಪದದ ಶಬ್ದಕೋಶದ ಅರ್ಥವನ್ನು ಪರಿಗಣಿಸಬೇಕು’ ಎಂದು ಹೇಳಿತ್ತು. ಡೀಮ್ಡ್ ಅರಣ್ಯಗಳ ಪಟ್ಟಿಯನ್ನು ಕೊಡಬೇಕೆಂಬ ನ್ಯಾಯಾಲಯದ ಆದೇಶದನ್ವಯ ರಾಜ್ಯಗಳು 2 ದಶಕಗಳ ಹಿಂದೆಯೇ ಇಂಥ ಅರಣ್ಯಗಳ ಪಟ್ಟಿಯನ್ನು ಸಲ್ಲಿಸಿದ್ದವು. ಆನಂತರ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಮತ್ತೊಂದು ಪ್ರಮಾಣಪತ್ರ ಸಲ್ಲಿಸಿ, 10 ಲಕ್ಷ ಹೆಕ್ಟೇರ್‌ನಷ್ಟಿದ್ದ ಡೀಮ್ಡ್ ಅರಣ್ಯಗಳ ವಿಸ್ತೀರ್ಣವನ್ನು 3 ಲಕ್ಷ ಹೆಕ್ಟೇರ್‌ಗೆ ಇಳಿಸಿದವು. ಕಾಂಡ್ಲಾ ಕಾಡುಗಳನ್ನು ‘ಸಂರಕ್ಷಿತ’ ಎಂದು ಘೋಷಿಸಲು ಸಿದ್ಧತೆ ನಡೆಸಿದ್ದವು. ಒಂದುವೇಳೆ ತಿದ್ದುಪಡಿ ಅಂಗೀಕೃತವಾದಲ್ಲಿ ಕಾಂಡ್ಲಾಗಳು ನಾಶವಾಗುತ್ತವೆ. ಸರಕಾರ ಹೊಸ ಹೆಸರಿನಲ್ಲಿರುವ ‘ಸಂವರ್ಧನೆ’ ಎಂಬ ಪದವನ್ನು ಸಮರ್ಥಿಸಿ ಕೊಳ್ಳಲು ಹಳೆಯ ಕಾಯ್ದೆಯಲ್ಲಿದ್ದ ಕಾಡಿನಲ್ಲಿ ಬೆಂಕಿ ರೇಖೆಗಳ ನಿರ್ಮಾಣ, ಜಲಮೂಲಗಳ ಪುನಶ್ಚೇತನ, ಅರಣ್ಯದಲ್ಲಿರುವ ರಸ್ತೆಗಳು-ಸೇತುವೆಗಳ ನಿರ್ವಹಣೆ, ಚೆಕ್‌ಪೋಸ್ಟ್ ಮತ್ತು ಸಿಬ್ಬಂದಿಗೆ ಮೂಲಸೌಲಭ್ಯ ನಿರ್ಮಾಣದಂಥ ಕಾಲಕಾಲಕ್ಕೆ ನಡೆಯುತ್ತಿದ್ದ ಪ್ರಕ್ರಿಯೆಗಳನ್ನು ಉಲ್ಲೇಖಿಸಿದೆ. ಈ ತಿದ್ದುಪಡಿಯು ಅರಣ್ಯ ಮತ್ತು ಅರಣ್ಯವಾಸಿಗಳ ಸಂರಕ್ಷಣೆಯ ತದ್ವಿರುದ್ಧ ದಿಕ್ಕಿನಲ್ಲಿದೆ.

ಗ್ರಾಮೀಣರಿಗೆ ಕನಿಷ್ಠ ನೂರು ದಿನ ಕೆಲಸ ನೀಡುವ ಮೂಲಕ ಜೀವಾಧಾರವಾಗಿದ್ದ ನರೇಗಾಕ್ಕೆ ಆಯವ್ಯಯದಲ್ಲಿ ಅನುದಾನ ಕಡಿತಗೊಳ್ಳುತ್ತಿದೆ; ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗಳಿಂದ ದುರ್ಬಲಗೊಂಡಿದೆ; ಅಗತ್ಯ ಸಿಬ್ಬಂದಿ-ಮೂಲಸೌಲಭ್ಯ ಪೂರೈಸದೆ ಇರುವುದರಿಂದ, ಬಾಕಿ ಉಳಿದ ಪ್ರಕರಣಗಳ ಭಾರದಿಂದ ನಲುಗಿದೆ. ಅನುಮೋದಿತ 165 ಮಾಹಿತಿ ಆಯುಕ್ತರ ಹುದ್ದೆಗಳಲ್ಲಿ 42 ಖಾಲಿ ಇವೆ ಮತ್ತು ಎರಡು ರಾಜ್ಯಗಳಲ್ಲಿ ಮುಖ್ಯ ಮಾಹಿತಿ ಆಯುಕ್ತರೇ ಇಲ್ಲ(ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾದ 6ನೇ ವರದಿ, 2022). ಸ್ವಾಭಾವಿಕ ಸಂಪನ್ಮೂಲಗಳನ್ನು ಕಾಪಿಡುತ್ತಿದ್ದ ಸಂರಕ್ಷಣೆ ಕಾಯ್ದೆಗಳನ್ನು ಅಳ್ಳಕಗೊಳಿಸುವ ಮೂಲಕ ಬಂಡವಾಳಕ್ಕೆ ಮುಕ್ತಗೊಳಿಸಲಾಗುತ್ತಿದೆ. ನಮ್ಮ ಹಳ್ಳಿಗಳು ಸುಖದ ಸುಪ್ಪತ್ತಿಗೆಗಳಲ್ಲ ಮತ್ತು ಸರ್ವ ಜನಾಂಗದ ಶಾಂತಿಯ ತೋಟಗಳೂ ಅಲ್ಲ. ಆದರೆ, ‘ಗ್ರಾಮದಾನ’ದಂಥ ಆದರ್ಶವೊಂದು ಕಣ್ಣ ಮುಂದೆಯೇ ಕರಗಿಹೋಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News