ರಾಯಚೂರು | ಅಪಘಾತದಲ್ಲಿ ಮೃತಪಟ್ಟ ಕುಟುಂಬದಿಂದ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ

Update: 2024-11-02 11:26 GMT

ರಾಯಚೂರು : ಅಪಘಾತದಲ್ಲಿ ಸಾವನ್ನಪ್ಪಿದ ಐಡಿಎಸ್ ಎಂಟಿ ಬಡಾವಣೆಯ ಯುವಕ ಮುಹಮ್ಮದ್ ಕಬೀರ್ ಪಾಷಾ ಅವರ ಸ್ಮರಣಾರ್ಥ ಶುಕ್ರವಾರ ಕಬೀರ್ ಕುಟುಂಬದಿಂದ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕಬೀರ್ ಕುಟುಂಬದ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯನವರು ಚಾಲನೆ ನೀಡಿದರು.

ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆಯ ನೀಡಿ ಸಾರ್ವಜನಿಕರಿಗೆ ಉಚಿತವಾಗಿ 150ಕ್ಕೂ ಹೆಚ್ಚು ಹೆಲ್ಮೆಟ್ ವಿತರಣೆ ಮಾಡಲಾಯಿತು. 

ಬಳಿಕ ಮಾತನಾಡಿದ ಸಚಿವರು, ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಕುಳಿತವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕು ಎಂದು ಈಗಾಗಲೇ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರಿಂದ ಎಚ್ಚೆತ್ತುಕೊಳ್ಳಬೇಕು. ತಮ್ಮ ಮಗನ ನೆನಪಿಗಾಗಿ ಕಬೀರ್ ಪಾಷಾ ಅವರು ಹೆಲ್ಮೆಟ್ ಉಚಿತವಾಗಿ ಜನರಿಗೆ ಕೊಡುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಮಾತನಾಡಿ, ವಿಪರೀತ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. 

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ನಿತೀಶ ಕೆ., ಕಾಂಗ್ರೆಸ್ ಮುಖಂಡರಾದ ಕೆ.ಅಸ್ಲಾಪಾಷಾ. ರುಡಾ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ನಗರಸಭೆಯ ಉಪಾಧ್ಯಕ್ಷ ಸಾಜೀದ್ ಸಮೀರ್, ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ್, ಅಪ್ಪು ಯೂತ್ ಬ್ರಿಗೆಡ್ ಅಧ್ಯಕ್ಷ ಸಾದೀಕ್ ಖಾನ್ ಯರಗೇರಾ ಉಪಸ್ಥಿತರಿದ್ದರು.

 

 Full View

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News