ರಾಯಚೂರು | ಹಂತ ಹಂತವಾಗಿ ಸರಕಾರಿ ಒತ್ತುವರಿ ಜಾಗ ಶೀಘ್ರವೇ ತೆರವು : ಜಿಲ್ಲಾಧಿಕಾರಿ ನಿತಿಶ್ ಕೆ.
ರಾಯಚೂರು : ಇಲ್ಲಿನ ಸಂತೋಷನಗರದಲ್ಲಿ ಸರಕಾರಿ ಶಾಲೆಯ ಜಾಗದಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಿದ್ದ ಬೆನ್ನಲ್ಲೇ ಜಿಲ್ಲೆಯಲ್ಲಿರುವ ಸರಕಾರಿ ಜಾಗ ಒತ್ತುವರಿ ಮಾಡಿದ್ದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತಿಶ್ ಕೆ. ತಿಳಿಸಿದ್ದಾರೆ.
ಬುಧವಾರ ಸಂಜೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸರಕಾರಿ ಪ್ರೌಢ ಶಾಲಾ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗವನ್ನು ಕಬಳಿಸಿ ಅಕ್ರಮ ಶೆಡ್ ನಿರ್ಮಿಸಿಕೊಂಡು ಎರಡು ಮೂರ್ತಿಗಳನ್ನು ಇಟ್ಟು ದೇವಸ್ಥಾನದ ರೂಪ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.
ವಿವಿಧ ಸಂಘಟನೆಗಳಿಂದ ಅನೇಕ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದ ತೆರವು ಕಾರ್ಯಾಚರಣೆ ಮಾಡಲಾಗಿದೆ. ಸರಕಾರಿ ಶಾಲೆ ನಿರ್ಮಾಣಕ್ಕೆ ರೂಪಾಯಿ 1 ಕೋಟಿ ರೂ. ಕೆಕೆಆರ್ ಡಿಬಿ ಅನುದಾನ ಬಿಡುಗಡೆಯಾಗಿದ್ದು, ಶಾಲೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಸರಕಾರಿ ಜಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. ಲೇಔಟ್ ಅನುಮತಿ ನೀಡಲಾಗಿದೆ. ಇಂತಹ ಪ್ರಕರಣ ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.