ರಾಯಚೂರು | ಹೋಮ್ ಗಾರ್ಡ್ ಗಳ ಸಮಾಜಿಕ ಕಳಕಳಿ ಮೆಚ್ಚುವಂತಹದ್ದು: ಎಡಿಸಿ ಶಿವಾನಂದ
ರಾಯಚೂರು : ಪೊಲೀಸ್ ಇಲಾಖೆಯ ಜೊತೆಗೆ ಬಂದೋಬಸ್ತ್ ಕಾರ್ಯಗಳನ್ನು ಮಾಡಿ ಸಮಾಜದ ಸುಸ್ಥಿತಿಗೆ ಕೆಲಸ ಮಾಡುತ್ತಿರುವ ಹೋಮ್ ಗಾರ್ಡ್ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಗೃಹರಕ್ಷಕದಳ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ಗೃಹರಕ್ಷಕದಳದ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೃಹರಕ್ಷಕದಳ ಸಿಬ್ಬಂದಿ ಪ್ರವಾಹ, ನೆರೆ ಹಾವಳಿ, ಚುನಾವಣೆ ಕಾರ್ಯಗಳು, ಕೋವಿಡ್ ಹಾಗೂ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಮುನ್ನುಗ್ಗಿ ಪೊಲೀಸ್ ಇಲಾಖೆಗೆ ಹೆಗಲುಕೊಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಡಿಎಸ್ ಪಿ ಸತ್ಯ ನಾರಾಯಣ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಹೋಮ್ ಗಾರ್ಡ್ ಒಂದೇ ನಾಣ್ಯದ ಎರೆಡು ಮುಖಗಳಿದ್ದಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ನಮಗೆ ಶೋಭೆ ತರುವುದಿಲ್ಲ. ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಂಡು ನಮಗೆ ನೀಡಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಇದರಿಂದ ಸರ್ಕಾರದಿಂದ ಅಭಿನಂದನಾ ಪ್ರಶಸ್ತಿ ಸಿಗಲಿದೆ ಎಂದು ಹೇಳಿದರು.
ಇದೇ ವೇಳೆ ಅತ್ಯುತ್ತಮವಾಗಿ ಕೆಲಸ ಮಾಡಿದ್ದ ಗೃಹರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠ ಜಂಬಣ್ಣ, ನಿವೃತ್ತ ಕಮಾಂಡರ್ ರಾಮೋಜಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವೇಂದ್ರಪ್ಪ ಹಾಗೂ ಸಿಬ್ಬಂದಿಗಳು ಇದ್ದರು.