ರಾಯಚೂರು | ಎಸ್ ಸಿ, ಎಸ್ ಟಿ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಳ : ಎಸ್‌ಪಿ ಗೆ ದೂರು

Update: 2024-12-26 13:21 GMT

ರಾಯಚೂರು : ನಗರದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ, ಮಟ್ಕಾ ಚೀಟಿ ಹಾಗೂ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಹಾಗೂ ಎಸ್ ಸಿ, ಎಸ್ ಟಿ ಸಮುದಾಯದವರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಪೊಲೀಸರು ದೂರು ನೀಡಿದರೂ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಎಸ್ಪಿ ಎಂ.ಪುಟ್ಟಮಾದಯ್ಯ ಅವರಿಗೆ ಸಮುದಾಯದ ಮುಖಂಡರು ಅಹವಾಲು ಸಲ್ಲಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ನಡೆದ ʼಎಸ್ ಸಿ, ಎಸ್ ಟಿ ಸಮುದಾಯಗಳ ಕುಂದು ಕೊರತೆ ಸಭೆʼಯಲ್ಲಿ ಅನೇಕರು ತಮ್ಮ ಸಮಸ್ಯೆಯನ್ನು ಎಸ್ಪಿ ಪುಟ್ಟಮಾದಯ್ಯ ಅವರಿಗೆ ಹೇಳಿಕೊಂಡರು.

ನಗರದ ಸ್ಲಂ ಪ್ರದೇಶಗಳಲ್ಲಿ ಸಿ.ಎಚ್ ಪೌಡರ್ ಶೇಂದಿ ಮಾರಾಟ ನಡೆಯುತ್ತಿದೆ. ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ, ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮರಳು ಸಾಗಣೆ ಮಾಡುವ ಟಿಪ್ಪರ್ ಗಳು ಅಡ್ಡದಿಡ್ಡಿಯಾಗಿ ರಸ್ತೆಯಲ್ಲಿ ಓಡಾಡುತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆಯಾಗುತ್ತಿದೆ. ಜಿಲ್ಲೆಯ ಹಲವೆಡೆ ಹೋಟೆಲ್, ದೇವಸ್ಥಾನಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದ ಬಗ್ಗೆ ಹಲವು ಬಾರಿ ದೂರು ಸಲ್ಲಿಸಲಾಗಿದೆ ಆದರೆ ಯಾವುದೇ ಕ್ರಮವಾಗಿಲ್ಲ ಎಂದು ದಲಿತಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಹರೀಶ, ಡಿವೈಎಸ್ಪಿ ಸತ್ಯನಾರಾಯಣರಾವ್, ತಹಶೀಲ್ದಾರ್ ಸುರೇಶ್ ವರ್ಮಾ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ, ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ, ಅಬಕಾರಿ ಇಲಾಖೆಯ ಅಧಿಕಾರಿ, ಸಮುದಾಯ ಮುಖಂಡರಾದ ಕೆ.ಇ ಕುಮಾರ, ಹನುಮಂತಪ್ಪ ಕಾಕರಗಲ್, ಮಾರೆಪ್ಪ, ಎನ್ ಮಹಾವೀರ್ ಉಪಸ್ಥಿತರಿದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News