ಅಂಬಾದೇವಿ ಜಾತ್ರೆಗಳಲ್ಲಿ ಪ್ರಾಣಿಬಲಿ ತಡೆಯದಿದ್ದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು : ದಯಾನಂದ ಸ್ವಾಮಿ

Update: 2025-01-07 11:52 GMT

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪೂರದ ಅಂಬಾಮಠದಲ್ಲಿ ಜ.12 ರಿಂದ ನಡೆಯುವ ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ತಡೆಗಟ್ಟಬೇಕು ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ದೂರು ದಾಖಲಿಸಬೇಕಾಗುತ್ತದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ಹಾಗೂ ಬಸವ ಧರ್ಮ ಹೋರಾಟ ಸಮಿತಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂಬಾಮಠದ ಅಂಬಾದೇವಿ ದೇವಸ್ಥಾನವೂ ಸೇರಿದಂತೆ ರಾಜ್ಯದ 36 ಸಾವಿರ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿವೆ. 1959ರಲ್ಲಿಯೇ ಕರ್ನಾಟಕವನ್ನು ಪ್ರಾಣಿಬಲಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಲಾಗಿದೆ. ಆದಾಗಿ ಇಂದಿಗೆ 65 ವರ್ಷಗಳಾಗಿವೆ. ಸರ್ಕಾರದ ವ್ಯಾಪ್ತಿಯ ದೇವಸ್ಥಾನಗಳಲ್ಲಿಯೇ ಪ್ರಾಣಿಬಲಿ ನಡೆದು ರಕ್ತದ ಕಾಲುವೆ ಹರಿಯುತ್ತಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ವ್ಯಾಪ್ತಿಯ 36 ಸಾವಿರ ಹಾಗೂ 2 ಲಕ್ಷ ಖಾಸಗಿ ದೇವಸ್ಥಾನಗಳಲ್ಲಿ ಪ್ರತಿವರ್ಷ 1.5 ಕೋಟಿ ಕುರಿ, ಕೋಳಿ, ಆಕಳು, ಕೋಣ, ಹಂದಿ ಮತ್ತಿತರ ಪ್ರಾಣಿ, ಪಕ್ಷಿಗಳ ಮಾರಣಹೋಮ ನಡೆಯುತ್ತಿದೆ. ದೇವಸ್ಥಾನಗಳ ಪಾವಿತ್ರ್ಯತೆ ಹಾಳಾಗಿದೆ. ಜೊತೆಗೆ ಸಾರ್ವಜನಿಕರಿಗೆ ಸೋಂಕು ತಗಲುತ್ತಿದೆ ಎಂದು ಹೇಳಿದರು.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯಿಂದ ರಾಜ್ಯದಲಿ 4 ಕೋಟಿ ಪ್ರಾಣಿ ಬಲಿಯನ್ನು ತಡೆ ಹಿಡಿಯಲಾಗಿದೆ.

ಕರ್ನಾಟಕ ಅಷ್ಟೇ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ನಾಗಾಲ್ಯಾಂಡ್, ನೇಪಾಳದಲ್ಲೂ ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸಲಾಗಿದೆ. ಅದರಂತೆ ತಾವು ಅಂಬಾಮರಕ್ಕೆ ಹೋಗಿ ಸರ್ವೆ ನಡೆಸಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಸರ್ಕಲ್ ಇನ್ ಸ್ಪೆಕ್ಟರ್ ಅವರೊಂದಿಗೆ ಚರ್ಚಿಸಿದ್ದೇನೆ. ಕೂಡಲೇ ಜಾಗೃತರಾಗಿ ಅಂಬಾಮಠದ ಅಂಬಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿಯನ್ನು ತಡೆ ಹಿಡಿಯಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಿ ದೂರು ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News