ರಾಯಚೂರು | ಲಾರಿ ಪಲ್ಟಿಯಾಗಿ ದುರಂತ : ‌‌ನೀರಾವರಿ ಇಲಾಖೆಯ ಇಂಜಿನಿಯರ್‌ ಸೇರಿ ಮೂವರು ಮೃತ್ಯು

Update: 2024-12-17 07:21 GMT

ರಾಯಚೂರು : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಡಾಲರ್ಸ್ ಕಾಲೋನಿ ಬಳಿ ಸೋಮವಾರ ತಡರಾತ್ರಿ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಲಾರಿ ಚಾಲಕ ಅತಿವೇಗದಿಂದ ಚಾಲನೆ ಮಾಡಿದ್ದರಿಂದ ಮುಗುಚಿ ರಸ್ತೆ ಬದಿ ನಿಂತಿದ್ದ ಮೂವರು ವ್ಯಕ್ತಿಗಳ ಮೇಲೆ ಲಾರಿ ಉರುಳಿದ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

‌‌ನೀರಾವರಿ ಇಲಾಖೆ ಜವಳಗೇರಾ ಉಪವಿಭಾಗದ ಕಿರಿಯ ಎಂಜಿನಿಯರ್‌ ಶಿವರಾಜ ರಾಂಪುರ (28), ಮಲ್ಲಿಕಾರ್ಜುನ ಸರ್ಜಾಪುರ (29) ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ (30) ಮೃತಪಟ್ಟವರು ಎಂದು ತಿಳಿದು ಬಂದಿದೆ.

‌ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಯುಡಿ ಕ್ಯಾಂಪ್‌ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್‌ನಲ್ಲಿ ಮೂವರು ಮಾತನಾಡುತ್ತಾ, ನಿಂತಿದ್ದರು. ಈ ವೇಳೆ ಭತ್ತದ ಒಟ್ಟಿನ ಚೀಲವನ್ನು ತುಂಬಿಕೊಂಡು ಅತಿವೇಗದಿಂದ ಬಂದ ಲಾರಿ ಪಲ್ಟಿಯಾಗಿ, ಮೂವರ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಎರಡು ಬೈಕ್‌ಗಳು ಸಹ ನಜ್ಜುಗುಜ್ಜಾಗಿವೆ. ಲಾರಿಯಡಿಯಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಜೆಸಿಬಿ ವಾಹನದ ಸಹಾಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆಯ ಬಳಿಕ ಸಿಂದನೂರು ನಗರ ಸಂಚಾರಿ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News