ರಾಯಚೂರು | ಪೊಲೀಸರ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು
ರಾಯಚೂರು : ಪೊಲೀಸರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿ ಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ಸುನಿಲ್ ಎಂದು ಗುರುತಿಸಲಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಹಣ ನೀಡುವಂತೆ ಪೀಡಿಸುತ್ತಿದ್ದ, ನೇತಾಜಿ ನಗರ ಠಾಣೆಯ ಪೊಲೀಸರ ಕಿರುಕುಳ ತಾಳಲಾರದೇ ಸುನಿಲ್ ಡಿ.28 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ಸುನಿಲ್ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸುನಿಲ್ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ, ಆತ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂದು ಸುಳ್ಳು ಆರೋಪ ಹೊರೆಸಿ ಕಿರುಕುಳ ನೀಡಿದ್ದರಿಂದಲೇ ಆತ್ಮಹತ್ಯೆಗೆ ಯತ್ನಿಸಿ ಈಗ ಮೃತಪಟ್ಟಿದ್ದಾನೆ. ಎಸ್ ಪಿ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಮಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯ ಪಿಎಸ್ಐ ರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಿಲ್ಲ.