ರಾಯಚೂರು | ಸರಕಾರಿ ಆಸ್ಪತ್ರೆಗಳಿಗೆ ಬರಲು ಗರ್ಭಿಣಿಯರು ಅಂಜುವಂತಹ ಪರಿಸ್ಥಿತಿ ನಿರ್ಮಾಣ : ನಿರುಪಾದಿ ಗೋಮರ್ಸಿ ಆರೋಪ
ರಾಯಚೂರು | ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವು ನಡೆದಿದ್ದು, ಕಳಪೆ ಗುಣಮಟ್ಟದ ಔಷಧ, ವೈದ್ಯರ ನಿರ್ಲಕ್ಷ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಅಕ್ರಮ ಹಾಗು ಭ್ರಷ್ಟಾಚಾರ ಪ್ರಮುಖ ಕಾರಣಗಳಾಗಿವೆ ಎಂದು ಕೆಆರ್ ಎಸ್ ಪಕ್ಷದ ಯುವ ಮುಖಂಡರ ನಿರುಪಾದಿ ಗೋಮರ್ಸಿ ತಿಳಿಸಿದರು.
ಅವರಿಂದು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ 12 ಬಾಣಂತಿಯರು ಮೃತಪಟ್ಟಿದ್ದು, ಸರಕಾರಿ ಆಸ್ಪತ್ರೆಗಳಿಗೆ ಬರಲು ಗರ್ಭಿಣಿಯರು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ಮತ್ತು ಶೋಷಿತ ವರ್ಗದವರು ವಿಧಿಯಿಲ್ಲದೆ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ, ಸಾಲ-ಸೋಲ ಮಾಡಿ, ಮನೆ-ಮಠ ಮಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.
ಬಾಣಂತಿಯರ ಸಾವು ಪ್ರಕರಣ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಸಾವುಗಳಾಗುತ್ತಿದ್ದರೆ, ಮತ್ತೊಂಡೆ ಇವೆಲ್ಲವನ್ನು ತಡೆಯಬೇಕಾಗಿದ್ದ ಮಂತ್ರಿಗಳು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಬೆಂಗಳೂರಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಕಿತ್ತುಕೊಳ್ಳುವ ಔತಣ, ಸಭೆಗಳಲ್ಲಿ ಮುಳುಗಿದ್ದಾರೆ ಎಂದರು.
ರಾಜ್ಯದಲ್ಲಿ ನಡೆದಿರುವ ತಾಯಂದಿರ ಸಾವಿನಲ್ಲಿ ಶೇ.80ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿಯಾಗಿದೆ. ಇವರಲ್ಲಿ ಬಹುತೇಕರು ಶೋಷಿತ ಮತ್ತು ಬಡ ವರ್ಗದವರೆ ಆಗಿದ್ದಾರೆ. ಮಾತು ಮಾತಿಗೂ ಶೋಷಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷವು ಶೋಷಿತ ವರ್ಗಕ್ಕೆ ನೀಡುತ್ತಿರುವುದು ಸಾವಿನ ಭಾಗ್ಯವಾಗಿದೆ ಎಂದು ಟೀಕಿಸಿದರು.
ಈ ಸಾವುಗಳ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಅವರು ತಮ್ಮ ಲೋಪವನ್ನು, ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮರೆಮಾಚಲು, ಜನರ ದಾರಿ ತಪ್ಪಿಸುವ ಮಾತನಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವಪ್ರಭು ಮೇದ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಗಂಗಾ ಕೆ ನಾಯಕ್, ಶಿವರಾಜ್ ವೀರಾಪುರ ,ಕುಮಾರ್ ನಾಯಕ್, ಆಂಜನೇಯ ನಾಯಕ್, ಗೋವಿಂದನಾಯಕ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.