ರಾಯಚೂರು | ದರ್ವೇಶ್ ಗ್ರೂಪ್ ವಂಚನೆ ಪ್ರಕರಣ; ಏಳು ಆರೋಪಿಗಳಿಗೆ ಜಾಮೀನು
ರಾಯಚೂರು : ಹೆಚ್ಚಿನ ಬಡ್ಡಿ ಆಸೆಗೆ ನೂರಾರು ಕೋಟಿ ರೂ. ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಗಿದ್ದ ದರ್ವೇಶ್ ಗ್ರೂಪ್ ನ ವಂಚನೆ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧನದಲ್ಲಿದ್ದ ಏಳು ಜನ ಆರೋಪಿಗಳಿಗೆ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಆರೋಪಿಗಳಾದ ಶೇಕ್ ಮಿಜಬುಲ್ಲಾ ಪಾಷಾ, ಎಂ.ಡಿ.ವಸಿಂ, ಮಹಮ್ಮದ ಶಾಮಿದ್ (ಬಬ್ಲು), ಸೈಯದ್ ಮೋಸಿನ್, ಜಹಾಂಗೀರ್ ಮತ್ತು ಸಿರಾಜ್ ಅವರಿಗೆ ಜಮೀನು ಮಂಜೂರು ಮಾಡಲಾಗಿದೆ.
ಕಳೆದ ಎಂಟು ತಿಂಗಳ ಹಿಂದೆ ವಂಚನೆ ಪ್ರಕರಣ ಬಹಿರಂಗಗೊಂಡಿದ್ದು, ಸರಕಾರ ಸಿಇಡಿಗೆ ತನಿಖೆಗೆ ವಹಿಸಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಜನರು ಮೋಸ ಹೋಗಿರುವುದರ ಕುರಿತು ಸೆನ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಏಜೆಂಟರನ್ನು ಬಂಧಿಸಿ ಅವರಿಂದ ಕೋಟ್ಯಾಂತರ ರೂ. ಹಣವನ್ನು ಸಹ ವಶಕ್ಕೆ ಪಡೆಯಲಾಗಿತ್ತು. ಇದೀಗ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ 5 ಲಕ್ಷ ರೂ. ಭದ್ರತೆಯ ಬಾಂಡ್ ಪಡೆದು ಅವರಿಗೆ ಜಾಮೀನು ಮಂಜೂರು ಮಾಡಿದೆ.
ಇನ್ನು ಪ್ರಕರಣದ ಪ್ರಮುಖ ಆರೋಪಿಗಳಾದ ಮಹಮ್ಮದ ಹುಸೇನ್ ಸುಜಾ, ಸೈಯದ್ ಮಿಸ್ಕಿನ್ ಅವರ ಪತ್ತೆಗಾಗಿ ತನಿಖೆ ಮುಂದುವರೆದಿದೆ.