ರಾಯಚೂರು | ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಪಿಎಸ್ಐ ಅಮಾನತುಗೊಳಿಸಲು ಆಗ್ರಹಿಸಿ ಪ್ರತಿಭಟನೆ
ರಾಯಚೂರು : ಪರಿಶಿಷ್ಟ ಜಾತಿಯ ಸಮುದಾಯದ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಮಸ್ಕಿ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ ನಾಯಕ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕವಿತಾಳ ಪಟ್ಟಣದ ಮಸ್ಕಿ ಕ್ರಾಸ್ನಲ್ಲಿ ಧರಣಿ ಕುಳಿತ ಪ್ರತಿಭಟನಕಾರರು, ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಆನ್ವರಿ ಕ್ರಾಸ್ನಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ಐ ವೆಂಕಟೇಶ ನಾಯಕ ಅವರು ಹಲವು ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ಅಪಹರಣ, ಅತ್ಯಾಚಾರ ಪ್ರಕರಣದ ಕುರಿತು ತನಿಖೆ ನಡೆಯಬೇಕು. ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಮಟ್ಕಾ, ಇಸ್ಪೀಟ್, ಜೂಜಾಟ, ಕೋಳಿ ಪಂದ್ಯ, ಅಕ್ರಮ ಮದ್ಯ ಮಾರಾಟ ಹಾಗೂ ಗಾಂಜಾ ಮಾರಾಟ, ಮರಳು ಅಕ್ರಮ ಸಾಗಣೆ ಚಟುವಟಿಕೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಗಂಗಪ್ಪ ತೋರಣದಿನ್ನಿ ಆರೋಪಿಸಿದರು.
ಸ್ಥಳಕ್ಕೆ ಬಂದ ಡಿವೈಎಸ್ಪಿ ಬಿ.ಎಸ್.ತಳವಾರ ಅವರು ಒಂದು ವಾರದೊಳಗೆ ನಿಮ್ಮ ಸಮಸ್ಯೆ ಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಬಾಲಸ್ವಾಮಿ ಜಿನ್ನಾಪುರ, ತುರುಮಂದೆಪ್ಪ ಕಟ್ಟಿಮನಿ, ಲಾಳ್ಳೆಪ್ಪ, ಅರಳಪ್ಪ ತುಪ್ಪದೂರು, ಮೌನೇಶ ಕೊಡ್ಲಿ, ಸಂತೋಷ ಕಲಶೆಟ್ಟಿ, ಹುಚ್ಚಪ್ಪ ಬುಳ್ಳಾಪುರ, ರಮೇಶ ಗೂಗೆಬಾಳ, ಬಸವರಾಜ ಅಮೀನಗಡ, ಹನುಮಂತ ಬುಳ್ಳಾಪುರ, ಮೌನೇಶ ಬುಳ್ಳಾಪುರ, ಮೋನಮ್ಮ, ತಾಯಮ್ಮ, ಹನುಮಂತಿ ಪಾಲ್ಗೊಂಡಿದ್ದರು.