ಸಿರವಾರ | ಅಹವಾಲು ಸ್ವೀಕಾರ, ಕುಂದುಕೊರತೆ ಸಭೆ

ಸಿರವಾರ : ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಪ್ಪಿ ನೇತೃತ್ವದ ತಂಡದಿಂದ ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಕುಂದುಕೊರತೆ ಸಭೆ ನಡೆಯಿತು.
ಹೊಲಗಳ ಸರ್ವೇಗೆ ಸಂಬಂಧಿಸಿದಂತೆ ಸರ್ವೇ ನಡೆಸಲು ಅನೇಕ ಬಾರಿ ಮನವಿ ಸಲ್ಲಿಸಿದರು, ಪ್ರತಿ ಬಾರಿಯೂ ಅರ್ಜಿ ವಜಾವಾಗುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದರು. ಇನ್ನು ಹೊಲ ಸರ್ವೇ ಮಾಡಲು ಅರ್ಜಿ ಸಲ್ಲಿಸಿದರೂ, ಅಳತೆ ಮಾಡಲು ವರ್ಷಾನುಗಟ್ಟಲೆ ಸಮಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇನ್ನೂ ಪಟ್ಟಣ ಪಂಚಾಯತಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಆಗಮಿಸಿದ್ದ ಸಾರ್ವಜನಿಕರು ಮುಖ್ಯಾಧಿಕಾರಿಗಳು ಗೈರು ಆಗಿರುವುದರಿಂದ ಅಧಿಕಾರಿಗಳ ಮುಂದೆ ಮುಖ್ಯಾಧಿಕಾರಿಯವರನ್ನು ಕರೆಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಪಡಿತರ ಅಕ್ಕಿಗಳು ಆಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದರು.
ನಂತರ ಮಾತನಾಡಿದ ಎಸ್ಪಿ ಅವರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ವಾರದೊಳಗೆ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿ ಎಸ್.ಅಂಗಡಿ, ತಾಪಂ ಇಓ ಶಶಿಧರಸ್ವಾಮಿ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮೀ ಪಾಟೀಲ್, ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ, ಉಪನೊಂದಣಿ ಅಧಿಕಾರಿ ಪದ್ಮನಾಭ ಗುಡಿ, ಸಿಡಿಪಿಓ ನಾಗರತ್ನ ನಾಯಕ, ಉಪತಹಶೀಲ್ದಾರ ಸಿದ್ದನಗೌಡ, ಉಪಖಜಾನೆ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.